ಕೊಲ್ಲಿಯಲ್ಲಿ ಉದ್ವಿಗ್ನತೆ ಹಿನ್ನೆಲೆಯಲ್ಲಿ ತೈಲ ಸಮಸ್ಯೆ ಎದುರಿಸಲು ಸರ್ಕಾರ ಸಿದ್ಧತೆ-ಧಮೇಂದ್ರ ಪ್ರಧಾನ್

ನವದೆಹಲಿ, ಜ 8 ಕೊಲ್ಲಿ ಪ್ರಾಂತ್ಯದಲ್ಲಿ ಎದುರಾಗಿರುವ ಉದ್ವಿಗ್ನತೆ ಹಿನ್ನೆಲೆಯಲ್ಲಿ ಇಂಧನ ಸಮಸ್ಯೆಯ ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಸರ್ಕಾರ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದು, ತೈಲ ಉತ್ಪಾದಕ ರಾಷ್ಟ್ರಗಳೊಂದಿಗೆ ಸಂಪರ್ಕದಲ್ಲಿದೆ ಎಂದು ಪೆಟ್ರೋಲಿಯಂ ಖಾತೆ ಸಚಿವ ಧರ್ಮೆಂದ್ರ ಪ್ರಧಾನ್ ಬುಧವಾರ ಇಲ್ಲಿ ಹೇಳಿದ್ದಾರೆ. 'ಯಾವುದೇ ಪರಿಸ್ಥಿತಿ ಎದುರಿಸಲು ಸರ್ಕಾರ ಸಿದ್ಧತೆ ನಡೆಸುತ್ತಿದೆ.' ಎಂದು ಧರ್ಮೆಂದ್ರ ಪ್ರಧಾನ್ ಇಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ. ವಿದೇಶಾಂಗ ವ್ಯವಹಾರಗಳ ಸಚಿವ ಡಾ. ಎಸ್.ಜೈಶಂಕರ್ ಅವರು ಕೊಲ್ಲಿ ಪ್ರಾಂತ್ಯದ ವಿವಿಧ ದೇಶಗಳ ವಿದೇಶಾಂಗ ಸಚಿವರೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ. ಪ್ರಧಾನಮಂತ್ರಿಯವರ ಕಚೇರಿ ಸೇರಿದಂತೆ ವಿವಿಧ ಮಟ್ಟಗಳಲ್ಲಿ ಪರಿಸ್ಥಿತಿಯನ್ನು ಪರಾಮರ್ಶಿಸಲಾಗುತ್ತಿದೆ ಎಂದು ಪ್ರಧಾನ್ ಪ್ರಶ್ನೆಯೊಂದಕ್ಕೆ ತಿಳಿಸಿದ್ದಾರೆ. ಡ್ರೋನ್ ದಾಳಿಯಲ್ಲಿ ಇರಾನ್ ಸೇನಾ ಕಮಾಂಡರ್ ಮೇಜರ್ ಜನರಲ್ ಖಾಸಿಮ್ ಸೊಲೆಮಾನಿ ಅವರನ್ನು ಅಮೆರಿಕ ಡ್ರೋನ್ ದಾಳಿಯಲ್ಲಿ ಹತ್ಯೆ ಮಾಡಿದ್ದಕ್ಕೆ ಪ್ರತೀಕಾರವಾಗಿ ಇರಾನ್ ಇಂದು ಬೆಳಿಗ್ಗೆ ಇರಾಕ್ ನಲ್ಲಿರುವ ಅಮೆರಿಕದ ಸೇನಾ ನೆಲೆಗಳ ಮೇಲೆ ಕ್ಷಿಪಣಿ ದಾಳಿ ನಡೆಸಿತ್ತು. ಈ ದಾಳಿಗಳಲ್ಲಿ ಕನಿಷ್ಟ 80 ಅಮೆರಿಕ ಯೋಧರು ಮೃತಪಟ್ಟಿದ್ದಾರೆ.