ಲೋಕದರ್ಶನ ವರದಿ
ಜಂತುಹುಳು ನಿವಾರಕ ಮಾತ್ರೆಯಿಂದ ಮಕ್ಕಳ ದೈಹಿಕ ಮತ್ತು ಮಾನಸಿಕ ಆರೋಗ್ಯ ರಕ್ಷಣೆಗೆ ಸಹಕಾರಿ: ನ್ಯಾ.ರಾಜೇಶ್ ಎನ್.ಹೊಸಮನೆ
ಬಳ್ಳಾರಿ 09: ಮಕ್ಕಳು ಮತ್ತು ಹದಿಹರೆಯದವರು ಜಂತುಹುಳು ನಿವಾರಕ ಮಾತ್ರೆಯನ್ನು ಸೇವಿಸುವುದರಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯ ರಕ್ಷಣೆಗೆ ಸಹಕಾರಿಯಾಗುತ್ತದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ರಾಜೇಶ್ ಎನ್.ಹೊಸಮನೆ ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ನಗರದ ಜಿಲ್ಲಾಧಿಕಾರಿಗಳ ಕಚೇರಿ ಪಕ್ಕದ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಜಂತುಹುಳು ನಿವಾರಣಾ ದಿನದ ಜಿಲ್ಲಾ ಮಟ್ಟದ ಚಾಲನಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
1 ರಿಂದ 19 ವರ್ಷದೊಳಗಿನ ಮಕ್ಕಳಿಗೆ ಮತ್ತು ಹದಿಹರೆಯದವರಿಗೆ ಜಂತು ಹುಳು ನಿವಾರಣಾ ಮಾತ್ರೆ (ಆಲ್ಬಂಡೋಜೋಲ್) ಮಾತ್ರೆಗಳನ್ನು ನೀಡುವ ಮೂಲಕ ಮಕ್ಕಳ ಬೆಳವಣಿಗೆಗೆ ಅಡ್ಡಿಯಾಗುವ ಅನೀಮಿಯ(ರಕ್ತಹೀನತೆ)ಯನ್ನು ತಡೆಗಟ್ಟಲು ಎಲ್ಲಾ ಶಾಲೆ ಮತ್ತು ಅಂಗನವಾಡಿ ಕೇಂದ್ರಗಳಲ್ಲಿ ಉಚಿತವಾಗಿ ಜಂತುಹುಳು ನಿವಾರಣಾ ಮಾತ್ರೆಯನ್ನು ನೀಡಲಾಗುತ್ತದೆ. ಪ್ರತಿಯೊಬ್ಬರೂ ಮಾತ್ರೆಯನ್ನು ಚೀಪಿಸುವುದರ ಮೂಲಕ ಸೇವನೆ ಮಾಡಬಹುದಾಗಿದೆ ಎಂದು ತಿಳಿಸಿದರು.
ಮಕ್ಕಳು ಮತ್ತು ಹದಿಹರೆಯದವರು ಶುಚಿತ್ವ ಕಾಪಾಡಿಕೊಳ್ಳಬೇಕು. ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ಹೊಂದಬೇಕು ಎಂದು ಸಲಹೆ ನೀಡಿದರು.
ಕಲಬುರಗಿ ವಿಭಾಗೀಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಸಹ ನಿರ್ದೇಶಕ ಡಾ.ಅಂಬರಾಯ್ ಎಸ್.ರುದ್ರವಾಡಿ ಅವರು ಮಾತನಾಡಿ, ಜಂತು ನಿವಾರಣೆಯಿಂದ ಮಕ್ಕಳಲ್ಲಿ ರಕ್ತ ಹೀನತೆ ನಿಯಂತ್ರಣ, ಪೌಷ್ಠಿಕತೆಯಲ್ಲಿ ಸುಧಾರಣೆಗೊಳ್ಳುತ್ತದೆ. ಜಂತು ಹುಳು ನಿವಾರಣಾ ಮಾತ್ರೆ (ಆಲ್ಬಂಡೋಜೋಲ್) ಸೇವಿಸುವುದರಿಂದ ರೋಗ ನಿರೋಧಕ ಶಕ್ತಿಯ ಸುಧಾರಣೆ, ಏಕಾಗ್ರತೆ, ಓದಿನಲ್ಲಿ ಹೆಚ್ಚಿನ ಆಸಕ್ತಿ ಹೊಂದುತ್ತಾರೆ. ಮಾತ್ರೆಯು ಸಮುದಾಯದಲ್ಲಿ ಜಂತುಹುಳುವಿನ ಬಾದೆಯ ತೊಂದರೆಯನ್ನು ತಡೆಗಟ್ಟುವಲ್ಲಿ ಸಹಾಯಕವಾಗಲಿದೆ. ಅನೀಮಿಯ ಮುಕ್ತ ಭಾರತ ಹೊಂದುವಲ್ಲಿ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಯಲ್ಲಾ ರಮೇಶ್‌ಬಾಬು ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಜಂತು ಹುಳುಗಳ ಬಾಧೆಯಿಂದ ಸಮುದಾಯದಲ್ಲಿ ಎಲ್ಲಾ ಮಕ್ಕಳನ್ನು ರಕ್ಷಣೆ ಮಾಡುವುದಕ್ಕಾಗಿ ಜಂತು ನಿವಾರಕ ಮಾತ್ರೆ ವಿತರಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಕೆಲವು ಬಾರಿ ಮಕ್ಕಳಲ್ಲಿಯ ಜಂತುಹುಳುವಿನ ತೊಂದರೆಯ ಲಕ್ಷಣಗಳು ಕಾಣದಿರಬಹುದು. ಹಾಗಾಗಿ ಮಗುವಿನ ಭವಿಷ್ಯದ ಆರೋಗ್ಯ ಶೈಕ್ಷಣಿಕ ಮತ್ತು ಸರ್ವತೋಮುಖ ಅಭಿವೃದ್ದಿಗಾಗಿ ಜಂತುಹುಳು ನಿವಾರಕ ಮಾತ್ರೆ ಮಕ್ಕಳು ಮತ್ತು ವಯಸ್ಕರರಿಗೆ ಸುರಕ್ಷಿತ ಮತ್ತು ಪರಿಣಾಮಕಾರಿಯಾಗಿದೆ. ಜಂತುಹುಳು ನಿವಾರಕ ಮಾತ್ರೆಯು ಮಗುವಿನ ದೈಹಿಕ ಮತ್ತು ಮಾನಸಿಕ ಆರೋಗ್ಯ ರಕ್ಷಣೆಗೆ ಸಹಕಾರಿಯಾಗಲಿದೆ ಎಂದು ಹೇಳಿದರು.
ಜಿಲ್ಲಾ ಆರ್‌ಸಿಹೆಚ್ ಅಧಿಕಾರಿ ಡಾ.ಹನುಮಂತಪ್ಪ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ರಾಷ್ಟ್ರೀಯ ಜಂತುಹುಳು ನಿವಾರಣಾ ಕಾರ್ಯಕ್ರಮದ ಅಂಗವಾಗಿ ಆಶಾ ಕಾರ್ಯಕರ್ತೆಯರು ಜಿಲ್ಲೆಯಲ್ಲಿನ ಮನೆ ಮನೆಗೆ ಭೇಟಿ ನೀಡುವ ಮೂಲಕ 5.83 ಲಕ್ಷ ಮಕ್ಕಳಿಗೆ ಜಂತುಹುಳು ನಿವಾರಕ ಆಲ್ಬಂಡೋಜೋಲ್ ಮಾತ್ರೆಗಳನ್ನು ವಿತರಿಸಲಿದ್ದಾರೆ ಎಂದು ತಿಳಿಸಿದರು.
*ಏನಿದು ಅಲ್ಬೆಂಡಾಜೋಲ್ ಮಾತ್ರೆ:*
1-2 ವರ್ಷ ವಯಸ್ಸಿನ ಮಕ್ಕಳಿಗೆ ಅರ್ಧಮಾತ್ರೆಯನ್ನು ಮುರಿದು ಎರಡು ಚಮಚಗಳ ನಡುವೆ ಪುಡಿಮಾಡಬೇಕು. ಮಾತ್ರೆಯನ್ನು ನೀಡಲು ಸಹಾಯವಾಗುವುದಕ್ಕೆ ಒಂದೆರಡು ಹನಿ ಸುರಕ್ಷಿತ ನೀರನ್ನು ಸೇರಿಸಬೇಕು. 2-3 ವರ್ಷ ವಯಸ್ಸಿನ ಮಕ್ಕಳಿಗೆ ಒಂದು ಪೂರ್ಣ ಮಾತ್ರೆಯನ್ನು ಎರಡು ಚಮಚಗಳ ನಡುವೆ ಪುಡಿ ಮಾಡಬೇಕು. ಮಾತ್ರೆಯನ್ನು ನೀಡಲು ಸಹಾಯವಾಗುವುದಕ್ಕೆ ಒಂದೆರಡು ಹನಿ ಸುರಕ್ಷಿತ ನೀರನ್ನು ಸೇರಿಸಬೇಕು.
3-19 ವರ್ಷ ವಯಸ್ಸಿನ ಮಕ್ಕಳಿಗೆ ಒಂದು ಪೂರ್ಣ ಮಾತ್ರೆಯನ್ನು ನೀಡಬೇಕು ಹಾಗೂ ಗಂಟಲಲ್ಲಿ ಸಿಲುಕಿಸಿಕೊಳ್ಳುವುದನ್ನು ತಪ್ಪಿಸಲು ಜಂತು ನಿವಾರಕ ಮಾತ್ರೆಯನ್ನು ಚೀಪಿಸಬೇಕು.
ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಜಂತುಹುಳು ನಿವಾರಣಾ ಕುರಿತಾಗಿ ಜಾಗೃತಿ ಮೂಡಿಸುವ ಪೋಸ್ಟರ್‌ಗಳನ್ನು ಬಿಡುಗಡೆ ಮಾಡಿದರು ಮತ್ತು ಸಾಂಕೇತಿಕವಾಗಿ ಮಕ್ಕಳಿಗೆ ಮಾತ್ರೆಯನ್ನು ವಿತರಿಸಿ, ಚೀಪುವಂತೆ ತಿಳಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿ ಡಾ.ವೀರೇಂದ್ರ ಕುಮಾರ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ್.ಹೆಚ್ ದಾಸಪ್ಪನವರ್, ಟ್ಯಾಂಕ್‌ಬಂಡ್ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಕಾಶಿ ಪ್ರಸಾದ್, ತಾಲೂಕು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಾಂತಮ್ಮ, ಸರ್ಕಾರಿ ಬಾಲಕಿಯರ ಪ್ರೌಢಶಾಲೆಯ ಪ್ರಭಾರಿ ಪ್ರಾಚಾರ್ಯರಾದ ಶಿವಕುಮಾರ್, ಸಹ ಶಿಕ್ಷಕ ಹರಿಪ್ರಸಾದ್ ಸೇರಿದಂತೆ ಆರೋಗ್ಯ ಇಲಾಖೆಯ ಸಿಬ್ಬಂದಿ ವರ್ಗದವರು, ಆಶಾ ಕಾರ್ಯಕರ್ತೆಯರು ಮತ್ತು ಶಾಲಾ ಮಕ್ಕಳು ಉಪಸ್ಥಿತರಿದ್ದರು.