ಧಾರವಾಡ 11: ನಗರ ಪ್ರದೇಶಗಳು ಅತಿ ವೇಗವಾಗಿ ಅಭಿವೃದ್ಧಿಯಾಗುತ್ತಿವೆ. ಆದರೆ, ಎಷ್ಟೋ ಹಳ್ಳಿಗಳಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಎದ್ದು ಕಾಣುತ್ತಿದೆ. ವಿದ್ಯಾಭ್ಯಾಸ, ಉದ್ಯೋಗ, ಆರೋಗ್ಯ ಇವುಗಳಿಗೆಲ್ಲಾ ಗ್ರಾಮಗಳ ಜನತೆ ನಗರಗಳನ್ನೆ ಅವಲಂಬಿಸಬೇಕಾಗಿದೆ. ಗ್ರಾಮದ ಜನರಲ್ಲಿ ಆರೋಗ್ಯ, ಸ್ವಚ್ಚತೆ ಶಿಕ್ಷಣದ ಬಗ್ಗೆ ಅರಿವು ಮೂಡಿಸುತ್ತಿರುವ ಎನ್.ಎಸ್.ಎಸ್ ಕಾರ್ಯ ಶ್ಲಾಘನೀಯವಾದದ್ದು ಎಂದು ಜೆ.ಎಸ್.ಎಸ್ ಶ್ರೀ ಮಂಜುನಾಥೇಶ್ವರ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ಸಂಸ್ಥೆಯು ನಾಯಕನ ಹುಲಿಕಟ್ಟಿ ಗ್ರಾಮದಲ್ಲಿ ಆಯೋಜಿಸಿದ್ದ ಎನ್.ಎಸ್.ಎಸ್ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭದಲ್ಲಿ ಪಾಲ್ಗೋಂಡು ಸಂಸ್ಥೆಯ ಪ್ರಾಚಾರ್ಯರಾದ ಡಾ. ಅಜಿತ ಪ್ರಸಾದರವರು ಮಾತನಾಡುತ್ತಿದ್ದರು.
ನಮ್ಮ ಸಂಸ್ಥೆಯ ಕಾರ್ಯಾಧ್ಯಕ್ಷರಾದ ಪುಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಗ್ರಾಮಾಭೀವೃದ್ಧಿಗಾಗಿಯೇ ಹತ್ತು ಹಲವಾರು ಕಾರ್ಯಕ್ರಮಗಳನ್ನು ರೂಪಿಸಿದ್ದಾರೆ. ಸ್ವ-ಸಹಾಯ ಗುಂಪುಗಳ ಮೂಲಕ ಸ್ರೀ-ಸಬಲೀಕರಣಕ್ಕೆ ಒತ್ತು ನೀಡಿದ್ದಾರೆ. ಈ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಕಲಿಕೆಗೆ ಅನುಕೂಲವಾಗಲೆಂದು ಜನತಾ ಶಿಕ್ಷಣ ಸಮಿತಿ ವತಿಯಿಂದ ಸ್ಮಾರ್ಟಬೋರ್ಡ ಪ್ರೊಜೆಕ್ಟರ್‌ನ್ನು ದೇಣಿಗೆಯಾಗಿ ನೀಡಲಾಗಿದೆ. ಇದರ ಸದುಪಯೋಗ ಪಡೆದುಕೊಳ್ಳಿ ಎಂದು ಹೇಳಿದರು.
ಎನ್.ಎಸ್.ಎಸ್ ಕಾರ್ಯಕ್ರಮದಲ್ಲಿ ಸ್ವಚ್ಚತೆ, ಆರೋಗ್ಯ ತಪಾಸಣೆಯಂತಹ ಕಾರ್ಯಕ್ರಮಗಳು ಜರುಗುವುದು ಸಾಮಾನ್ಯ ಆದರೆ ಒಂದು ಸರಕಾರಿ ಶಾಲೆಗೆ ಸ್ಮಾರ್ಟಬೋರ್ಡನ್ನು ದೇಣಿಗೆಯಾಗಿ ನೀಡಿ ಅದರ ಮುಖಾಂತರ ಗ್ರಾಮದ ವಿದ್ಯಾರ್ಥಿಗಳು ಸಹ ಆಧುನಿಕ ತಂತ್ರಜ್ಞಾನದ ಅರಿವು ಮೂಡಿಸುವ ಪ್ರಯತ್ನ ಬಹುಶಃ ಇದು ಮೊದಲು ಎಂದು ಕರ್ನಾಟಕ ವಿಶ್ವ-ವಿದ್ಯಾಲಯದ ಎನ್.ಎಸ್.ಎಸ್ ಕೋಶದ ಸಂಯೋಜನಾಧಿಕಾರಿಯಾದ ಡಾ. ಬಿ.ಎಮ್ ದಳಪತಿ ಅಭಿಪ್ರಾಯ ಪಟ್ಟು ಇಂತಹ ಕಾರ್ಯಗಳು ಪ್ರತಿಯೊಂದು ಸಂಸ್ಥೆಯಿಂದ ಆದಾಗ ಗ್ರಾಮ ಸ್ವರಾಜ್ಯದ ಕನಸು ನನಸಾಗಲು ಸಾಧ್ಯ ಎಂದರು.
ಇದೇ ಸಂದರ್ಭದಲ್ಲಿ ರಾಜ್ಯ ಪ್ರಶಸ್ತಿ ಜಾನಪದ ಹಾಡುಗಾರ್ತಿ ಲಕ್ಷ್ಮಿಬಾಯಿ ಹರಿಜನರವರನ್ನು ಸನ್ಮಾನಿಸಲಾಯಿತು.
ಇದಕ್ಕೂ ಮೊದಲು ಗ್ರಾಮದ ಸರಕಾರಿ ಶಾಲೆಗೆ ಜನತಾ ಶಿಕ್ಷಣ ಸಮಿತಿಯಿಂದ ನೀಡಲಾದ ಸ್ಮಾರ್ಟಬೋರ್ಡನ್ನು ಸಂಸ್ಥೆಯ ಕಾರ್ಯದರ್ಶಿಗಳಾದ ಡಾ. ಅಜಿತ ಪ್ರಸಾದ ಉದ್ಘಾಟಿಸಿದರು. ಗ್ರಾಮ ಪಂಚಾಯತಿ ಸದಸ್ಯರಾದ ಮೈಲಾರಿ ಕುರುಬರ, ಶಾಲೆಯ ಶಿಕ್ಷಕ ಸಿಬ್ಬಂದಿ, ಎಸ್.ಡಿ.ಎಮ್.ಸಿ. ಸದಸ್ಯರು, ಸಂಸ್ಥೆಯ ವಿವೇಕ ಲಕ್ಷ್ಮೇಶ್ವರ, ಶ್ರೀಕಾಂತ ರಾಗಿ ಕಲ್ಲಾಪೂರ, ಮಹಾವೀರ ಉಪಾದ್ಯೆ, ರೋನಿಲ್ ಮನೋಹರ, ಜಿನ್ನಪ್ಪಾ ಕುಂದಗೋಳ ಉಪಸ್ಥಿತರಿದ್ದರು. ಎಸ್.ಎಸ್.ಎಸ್ ಅಧಿಕಾರಿ ಭಲಭೀಮ ಹಾವನೂರ ವಂದಿಸಿದರು.