ಶಿಕ್ಷಣದಿಂದ ಸಮಾಜದ ಅಭಿವೃದ್ಧಿ : ಸಾಲೂರು ಶ್ರೀಗಳು

Development of society through education : Mr. Salur


ಶಿಕ್ಷಣದಿಂದ ಸಮಾಜದ ಅಭಿವೃದ್ಧಿ : ಸಾಲೂರು ಶ್ರೀಗಳು 

ಶಿಕಾರಿಪುರ 20: ಬೆಳೆಯುವ ಪೀಳಿಗೆಗೆ ಸಂಸ್ಕೃತಿ ಸಂಸ್ಕಾರ ಕೊಡುವ ಅಗತ್ಯವಿದೆ. ಶಿಕ್ಷಣದಿಂದ ಸಮಾಜ ಅಭಿವೃದ್ಧಿ ಹೊಂದುತ್ತದೆ. ಮಕ್ಕಳಿಗೆ ಶಿಕ್ಷಣ ಮತ್ತು ಸಂಸ್ಕೃತಿ-ಸಂಸ್ಕಾರ ನೀಡುವುದು ಬಹು ಮುಖ್ಯವಾಗಿದೆ ಎಂದು ಸಾಲೂರು ಹಿರೇಮಠದ ಗುರುಲಿಂಗ ಜಂಗಮ ಶಿವಾಚಾರ್ಯ ಸ್ವಾಮಿಗಳು ಹೇಳಿದರು. 

ಅವರು ಭಾನುವಾರ ಸಾಲೂರು ಹಿರೇಮಠದ ಲಿಂ. ಗುರು ಚನ್ನವೀರ ಪಂಚಾಕ್ಷರ ಶಿವಾಚಾರ್ಯ ವೇದ, ಜ್ಯೋತಿಷ್ಯ ಹಾಗೂ ಸಂಸ್ಕೃತ ಪಾಠಶಾಲೆಯಲ್ಲಿ ಜರುಗಿದ ವೇಽಽ ವಿ.ಎಂ.ಶಿವಲಿಂಗಾರಾಧ್ಯ ಶಾಸ್ತ್ರಿಗಳವರ ಜನ್ಮ ಶತಮಾನೋತ್ಸವ, ವೇದಜ್ಯೋತಿಷ್ಯ ಭಾಸ್ಕರ ರತ್ನ ಪ್ರಶಸ್ತಿ ಪುರಸ್ಕಾರ, ತುಲಾಭಾರ ಮತ್ತು ಗುರುವಂದನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು. 

ಲಿಂ. ಪಂಚಾಕ್ಷರ ಶಿವಾಚಾರ್ಯರ ಮಾರ್ಗದರ್ಶನದಲ್ಲಿ ಶಿವಲಿಂಗಾರಾಧ್ಯ ಶಾಸ್ತ್ರಿಗಳು ಸಾಲೂರು ಮಠದ ಗುರುಕುಲದ ಶಿಕ್ಷಕರಾಗಿ ನೀಡಿದ ಉತ್ತಮ ಶಿಕ್ಷಣದಿಂದಾಗಿ ಇಂದು ಹಲವಾರು ಜನರು ಶಿವಾಚಾರ್ಯರಾಗಿ ಶಾಸ್ತ್ರಿಗಳಾಗಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಇಂದು ಅವರ ಜನ್ಮ ಶತಮಾನೋತ್ಸವ ನಡೆಯುತ್ತಿರುವುದು ತಮಗೆ ಸಂತೋಷ ತಂದಿದೆ ಎಂದರು. 

ಇದೇ ಸಂದರ್ಭದಲ್ಲಿ ವಿ.ಎಂ.ಶಿವಲಿಂಗಾರಾಧ್ಯ ಶಾಸ್ತ್ರಿಗಳವರಿಗೆ ಸಾಲೂರು ಹಿರೇಮಠದಿಂದ  “ವೇದಜ್ಯೋತಿಷ್ಯ ಭಾಸ್ಕರ ರತ್ನ ಪ್ರಶಸ್ತಿ” ಪ್ರದಾನ ಮಾಡಿ ಗೌರವಿಸಲಾಯಿತು. ಹುಡಾ ಕಂಬಾಳಿಮಠದ ಕುಮಾರಸ್ವಾಮಿ ತಾತನವರು, ಕೇದಾರನಾಥ ಪ್ರಧಾನ ಅರ್ಚಕರಾದ ವಾಗೀಶಲಿಂಗ ಶಾಸ್ತ್ರಿಗಳು ಹಾಗೂ ಗಂಗಾಧರಲಿಂಗ ಶಾಸ್ತ್ರಿಗಳವರಿಗೆ ವಿಶೇಷ ಗುರುರಕ್ಷೆ ನೀಡಲಾಯಿತು. 

ಸಮಾರಂಭದಲ್ಲಿ ಹೊನ್ನಾಳಿ ಹಿರೇಕಲ್ಮಠದ ಡಾ.ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯರು, ಶಾಂತಪುರ ಮಠದ ಶಿವಾನಂದ ಶಿವಾಚಾರ್ಯರು, ಅವರಗೊಳ್ಳದ ಓಂಕಾರ ಶಿವಾಚಾರ್ಯರು, ದಿಂಡದಹಳ್ಳಿ ಪಶುಪತಿ ಶಿವಾನಂದ ಶಿವಾಚಾರ್ಯರು, ಮಣಕೂರು ಮಲ್ಲಿಕಾರ್ಜುನ ಶಿವಾಚಾರ್ಯರು, ಬಿಳಿಕಿ ರಾಚೋಟೇಶ್ವರ ಶಿವಾಚಾರ್ಯರು, ತೊಗರ್ಸಿ ಚನ್ನವೀರದೇಶಿಕೇಂದ್ರ ಶಿವಾಚಾರ್ಯರು ಸೇರಿದಂತೆ ವಿವಿಧ ಮಠಗಳ ಶ್ರೀಗಳು ಪಾಲ್ಗೊಂಡಿದ್ದರು. ದಾರುಕಶಾಸ್ತ್ರಿ, ನಾಗರಾಜಶಾಸ್ತ್ರಿ, ಚನ್ನೇಶ ಶಾಸ್ತ್ರಿಗಳು, ಮೃತ್ಯುಂಜಯ ಶಾಸ್ತ್ರಿಗಳು, ಬೂದಿ ಸ್ವಾಮಿಗಳು, ವಾಗೀಶ ಶಾಸ್ತ್ರಿಗಳು, ಮಲ್ಲಿಕಾರ್ಜುನಯ್ಯ ಶಾಸ್ತ್ರಿಗಳು ಸೇರಿದಂತೆ ಶಿವಲಿಂಗಾರಾಧ ಶಾಸ್ತ್ರಿಗಳವರ ಅನೇಕ ಶಿಷ್ಯ ಬಳಗದ ಶಾಸ್ತ್ರಿಗಳು ಸಮಾರಂಭದಲ್ಲಿ ಉಪಸ್ಥಿತರಿದ್ದರು. 

ಸಮಾರಂಭಕ್ಕೂ ಮುನ್ನ ವಿ.ಎಂ.ಶಿವಲಿಂಗಾರಾಧ್ಯ ಶಾಸ್ತ್ರಿಗಳವರನ್ನು ಸಾರೋಟ ಮೆರವಣಿಗೆಯ ಮೂಲಕ ಸಾಲೂರಿನ ಪ್ರಮುಖ ಬೀದಿಗಳ ಮೂಲಕ ಕರೆ ತರಲಾಯಿತು. ವಿ.ಎಂ.ಶಿವಲಿಂಗಾರಾಧ್ಯ ಶಾಸ್ತ್ರಿಗಳವರ ತುಲಾಭಾರ ನಡೆಸಲಾಯಿತು. ಸಮಾರಂಭದ ಅಂಗವಾಗಿ ವಿವಿಧ ಹೋಮ ಹವನಾದಿಗಳು ಸಾಲೂರು ಮಠದ ಕರ್ತೃ ಗದ್ದಿಗೆಗಳಿಗೆ, ಸಿದ್ಧೇಶ್ವರ ಸ್ವಾಮಿಗೆ ಹಾಗೂ ಶಕ್ತಿಮಾತೆ ಚೌಡೇಶ್ವರಿಗೆ ವಿಶೇಷ ಪೂಜೆ ಜರುಗಿದವು.