ಶಹಜಾನ್ ಪುರ, ಆಗಸ್ಟ್ 27 ದೇವಮಾನವ, ಮಾಜಿ ಕೇಂದ್ರ ಸಚಿವ ಸ್ವಾಮಿ ಚಿನ್ಮಯಾನಂದ ಅವರು ವಿವಾದದಲ್ಲಿ ಸಿಲುಕಿಕೊಂಡಿದ್ದಾರೆ. ತಾವು ನಡೆಸುತ್ತಿರುವ ಕಾಲೇಜಿನ ವಿದ್ಯಾರ್ಥಿನಿಯೊಬ್ಬಳು ತನ್ನ ಮೇಲೆ ಚಿನ್ಮಯಾನಂದ ಲೈಂಗಿಕ ದೌರ್ಜನ್ಯ ನಡೆಸಿದ್ದರು ಎಂಬ ಆರೋಪ ಹೊರಿಸಿದ್ದಾಳೆ.
ಚಿನ್ಮಯಾನಂದ ಸ್ವಾಮಿ ಆಶ್ರಮ ನಡೆಸುತ್ತಿರುವ ಎಸ್ ಎಸ್ ಕಾನೂನು ಕಾಲೇಜಿನ, ಕಾನೂನು ವಿದ್ಯಾರ್ಥಿನಿ, ಸಾಮಾಜಿಕ ಮಾಧ್ಯಮದ ಮೂಲಕ ವಿಡಿಯೋ ದೃಶ್ಯಾವಳಿಗಳನ್ನು ಪೋಸ್ಟ್ ಮಾಡಿ, ಸ್ವಾಮಿ ನೇತೃತ್ವದ ಆಡಳಿತ ಮಂಡಳಿ ತನ್ನ ಬದುಕನ್ನು ಸಂಕಷ್ಟಕ್ಕೆನೂಕಿದೆ ಎಂದು ದೂರಿದ್ದಾಳೆ
ಚಿನ್ಮಯಾನಂದ ಸ್ವಾಮಿ ವಿರುದ್ಧ ನೇರವಾಗಿ ಲೈಂಗಿಕ ಶೋಷಣೆಯ ಆರೋಪವನ್ನೂ ಸಹ ಆಕೆ ಮಾಡಿದ್ದಾಳೆ.
ಈ ನಡುವೆ ವಿದ್ಯಾರ್ಥಿನಿಯ ಪೋಷಕರು, ಕಳೆದ ಎರಡು ದಿನಗಳಿಂದ ತಮ್ಮ ಮಗಳು ಕಾಣೆಯಾಗಿದ್ದು ಎಂದು ಹೇಳಿದ್ದಾರೆ. ಈ ಸಂಬಂಧ ಪೊಲೀಸ್ ಠಾಣೆಗೆ ದೂರು ನೀಡಿದ್ದು, ತನಿಖೆ ನಡೆಯುತ್ತಿದೆ
ಈ ನಡುವೆ, ಚಿನ್ಮಯಾನಂದ ಸ್ವಾಮಿ ಪ್ರತಿಕ್ರಿಯಿಸಿ, ತಮ್ಮಿಂದ 5 ಕೋಟಿ ರೂಪಾಯಿ ಹಣ ವಸೂಲಿಗೆ ಸಂಚು ನಡೆಸಲಾಗಿದೆ ಎಂದು ದೂರಿದ್ದು, ಹಣ ನೀಡುವಂತೆ ದೂರವಾಣಿ ಕರೆಗಳು ಬರುತ್ತಿವೆ, ಹಾಗಾಗಿ ಅಪರಿಚಿತ ವ್ಯಕ್ತಿಗಳ ವಿರುದ್ದ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಿಸಿರುವುದಾಗಿ ಹೇಳಿದ್ದಾರೆ.
ವಾಟ್ಸಾಪ್ ಸಂಖ್ಯೆಯ ಮೂಲಕ 5 ಕೋಟಿ ರೂಪಾಯಿ ಹಣ ನೀಡುವಂತೆ ಒತ್ತಾಯಿಸಲಾಗುತ್ತಿದೆ ಎಂದು ಆಗಸ್ಟ್ 22 ರಂದು ದಾಖಲಿಸಿರುವ ದೂರಿನಲ್ಲಿ ಸ್ವಾಮಿ ತಿಳಿಸಿದ್ದಾರೆ. ಹಣ ಕೊಡದಿದ್ದರೆ ತಮ್ಮ ಬಳಿ ಇರುವ ವಿಡಿಯೋ ದೃಶ್ಯಾವಳಿಯನ್ನು ವೈರಲ್ ಮಾಡುವ ಬೆದರಿಕೆ ಹಾಕಿದ್ದಾರೆ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ವಿವರಿಸಲಾಗಿದೆ. ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ಕೆಲವು ವರ್ಷಗಳ ಹಿಂದೆ ಸ್ವಾಮಿ ಚಿನ್ಮಯಾನಂದ ವಿರುದ್ದ ಇಂತಹದೇ ಆರೋಪಗಳನ್ನು ಶಾಲೆಯ ಮಹಿಳೆಯೊಬ್ಬರು ಮಾಡಿದ್ದರು.
ಚಿನ್ಮಯಾನಂದ್ ಪ್ರಸ್ತುತ ಬಿಜೆಪಿಯೊಂದಿಗೆ ಗುರುತಿಸಿಕೊಂಡಿದ್ದು, ಮುಖ್ಯಮಂತ್ರಿ ಯೋಗಿ ಅದಿತ್ಯನಾಥ್ ಅವರಿಗೆ ಆತ್ಮೀಯ ಎಂದು ಹೇಳಲಾಗಿದ್ದು, ಮುಖ್ಯಮಂತ್ರಿ ಯೋಗಿ ಎರಡು ಬಾರಿ ಆಶ್ರಮಕ್ಕೆ ಭೇಟಿ ನೀಡಿದ್ದರು ಎಂದು ಹೇಳಲಾಗುತ್ತಿದೆ.