ನವೀಕರಣಗೊಳಿಸಿದ ಸುಸಜ್ಜಿತ ವಾರ್ಡ್‌ ಉದ್ಘಾಟಿಸಿದ ಉಪಮೇಯರ್ ಡಿ.ಸುಕುಂ ಆರೋಗ್ಯ ಸೇವೆಗಳನ್ನು ತಪ್ಪದೇ ಪಡೆಯುವಂತೆ ಸಲಹೆ

Deputy Mayor D. Sukum inaugurates renovated, well-equipped ward, advises to avail health services wi

ನವೀಕರಣಗೊಳಿಸಿದ ಸುಸಜ್ಜಿತ ವಾರ್ಡ್‌ ಉದ್ಘಾಟಿಸಿದ ಉಪಮೇಯರ್ ಡಿ.ಸುಕುಂ ಆರೋಗ್ಯ ಸೇವೆಗಳನ್ನು ತಪ್ಪದೇ ಪಡೆಯುವಂತೆ ಸಲಹೆ 

ಬಳ್ಳಾರಿ 27: ರಾಜ್ಯ ಸರ್ಕಾರವು ಗುಣಮಟ್ಟದ ಆರೋಗ್ಯ ಸೇವೆಗಳನ್ನು ಒದಗಿಸುತ್ತಿದ್ದು, ನಗರ ಪ್ರದೇಶಗಳಲ್ಲಿರುವ ದುರ್ಬಲ ವರ್ಗದವರು, ಕಡುಬಡವರು ಸೇರಿದಂತೆ ಎಲ್ಲರೂ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಆರೋಗ್ಯ ಸೇವೆ ಪಡೆದುಕೊಳ್ಳಬೇಕು ಎಂದು ಮಹಾನಗರ ಪಾಲಿಕೆಯ ಉಪಮಹಾಪೌರರಾದ ಡಿ.ಸುಕುಂ ಅವರು ಹೇಳಿದರು. 

ಗುರುವಾರದಂದು ಬಳ್ಳಾರಿ ನಗರದ ನಾಯ್ಡು ಸ್ಟ್ರೀಟ್‌ನ ಕೌಲಬಜಾರ್ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಜಿಲ್ಲಾ ಪಂಚಾಯತ್ ಹಾಗೂ ಎಬಿಎಆರ್‌ಕೆ, ಕಾಯಕಲ್ಪ ಅಡಿ ಲಭ್ಯವಿರುವ ಅನುದಾನದಡಿ ನವೀಕರಣಗೊಳಿಸಿದ ಸುಸಜ್ಜಿತ ವಾರ್ಡ್‌ನ್ನು ಉದ್ಘಾಟಿಸಿ ಅವರು ಮಾತನಾಡಿದರು. 

ಸರ್ಕಾರವು ಜನತೆಯ ಆರೋಗ್ಯದ ಸುರಕ್ಷತೆಗೆ ಹೆಚ್ಚು ಒತ್ತು ನೀಡುತ್ತಿದೆ. ರಕ್ತದೊತ್ತಡ, ಸಕ್ಕರೆ ಕಾಯಿಲೆ, ಕ್ಯಾನ್ಸರ್‌ನಂತಹ ಕಾಯಿಲೆಗಳನ್ನು ಪತ್ತೆಹಚ್ಚಲು ಅಗತ್ಯ ಪರಿಕರಗಳನ್ನು ಒದಗಿಸುತ್ತಿದೆ. ಜನರು ನಿಯಮಿತವಾಗಿ ಸಕಾಲದಲ್ಲಿ ಪರೀಕ್ಷಿಸಿಕೊಂಡು ಆರೋಗ್ಯದಿಂದಿರಬೇಕು ಎಂದು ತಿಳಿಸಿದರು. 

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಯಲ್ಲಾ ರಮೇಶ್ ಬಾಬು ಅವರು ಮಾತನಾಡಿ, ಬಳ್ಳಾರಿ ಮತ್ತು ಸಿರುಗುಪ್ಪ ತಾಲ್ಲೂಕುಗಳಲ್ಲಿ ಒಟ್ಟು 9 ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದು, ಬಳ್ಳಾರಿ ನಗರದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸಹ ಗುಣಮಟ್ಟದ ಆರೋಗ್ಯ ಸೇವೆಗಳನ್ನು ನೀಡಲಾಗುತ್ತಿದೆ ಎಂದು ಹೇಳಿದರು. 

ಜ್ವರ ಪ್ರಕರಣಗಳ ಪತ್ತೆಗಾಗಿ ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ರಕ್ತ ಪರೀಕ್ಷೆ ಕೈಗೊಳ್ಳುವ ಸೌಲಭ್ಯ ಕಲ್ಪಿಸಿ ಸೊಳ್ಳೆಯ ಕಚ್ಚುವಿಕೆಯಿಂದ ಹರಡುವ ಡೆಂಗ್ಯೂ, ಚಿಕಿನ್ ಗುನ್ಯಾ, ಮಲೇರಿಯಾ ಮುಂತಾದವುಗಳ ನಿಯಂತ್ರಣ ಜೊತೆಗೆ ಟೈಪಾಯಿಡ್ ಗುರ್ತಿಸುವಿಕೆಯನ್ನು ಸಹ ಮಾಡಲಾಗುತ್ತಿದೆ. ಯಾವುದೇ ಜ್ವರವಿದ್ದರೂ ಸಹ ನಿರ್ಲಕ್ಷ ಮಾಡದೇ ಆಸ್ಪತ್ರೆಗೆ ಭೇಟಿ ನೀಡಿ ಜ್ವರದ ಸ್ವರೂಪ ತಿಳಿದುಕೊಂಡು ಚಿಕಿತ್ಸೆ ಪಡೆಯಲು ಮುಂದೆ ಬರಬೇಕು ಎಂದು ತಿಳಿಸಿದರು. 

ಗರ್ಭಿಣಿಯರಿಗೆ ರಕ್ತಹೀನತೆ ಕಂಡುಬಂದಲ್ಲಿ ಆರೋಗ್ಯ ಕೇಂದ್ರದಲ್ಲಿಯೇ ಐರನ್ ಸುಕ್ರೋಸ್ ಚುಚ್ಚುಮದ್ದನ್ನು ನೀಡಲಾಗುತ್ತಿದ್ದು, ಕನಿಷ್ಟ 5 ಬಾರಿ ಒದಗಿಸುವ ಹಾಗೂ ಕುಟುಂಬ ಕಲ್ಯಾಣ ತಾತ್ಕಾಲಿಕ ವಿಧಾನಗಳಾದ ವಂಕಿ ಅಳವಡಿಸಿಕೆ, ನುಂಗುವ ಮಾತ್ರೆಗಳನ್ನು ಉಚಿತವಾಗಿ ಒದಗಿಸಲಾಗುತ್ತಿದ್ದು, ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳಬೇಕು ಎಂದು ವಿನಂತಿಸಿದರು. 

ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಅಗತ್ಯ ಓಷಧಿಗಳನ್ನು ದಾಸ್ತಾನು ಮಾಡಲಾಗಿದ್ದು, ಬೇಸಿಗೆ ಹಿನ್ನಲೆಯಲ್ಲಿ ಮಧ್ಯಾಹ್ನ 12 ರಿಂದ 3 ರ ಅವಧಿಯಲ್ಲಿ ಮನೆಯಲ್ಲಿಯೇ ಇರಬೇಕು. ದೇಹದ ನಿರ್ಜಲೀಕರಣ ತಡೆಯಲು ನಿಂಬುಪಾನಕ, ಎಳೆ ನೀರು, ಹಣ್ಣಿನ ರಸ ಸೇವಿಸಬಹುದು ಹಾಗೂ ಗರ್ಭಿಣಿ-ಮಕ್ಕಳು ಸೇರಿದಂತೆ ವಯಸ್ಕರನ್ನು ಹೆಚ್ಚಿನ ಕಾಳಜಿ ವಹಿಸಲು ಹಾಗೂ ಆಸ್ಪತ್ರೆಗೆ ಬರುವ ಜನತೆಯು ಆರೋಗ್ಯ ಕೇಂದ್ರಗಳಲ್ಲಿ ಸಿದ್ದವಾಗಿಟ್ಟಿರುವ ಓ.ಆರ್‌.ಎಸ್ ದ್ರಾವಣವನ್ನು ಸೇವಿಸುವ ಮೂಲಕ ನಿರ್ಜಲೀಕರಣ ತಡೆಯಲು ಸಹಾಯಕವಾಗುತ್ತಿದ್ದು, ಇದರ ಸದುಪಯೋಗ ಪಡೆಯುವಂತೆ ಕೋರಿದರು.  

*ಕಿಲ್ಕಾರಿ:* 

ಗರ್ಭಿಣಿ ಎಂದು ತಿಳಿದ ದಿನದಿಂದ ಹಾಗೂ ಮಗುವಿನ ವಯಸ್ಸು ಒಂದು ವರ್ಷದೊಳಗೆ ಇರುವ ಎಲ್ಲಾ ತಾಯಂದರಿಗೆ ಕೇಂದ್ರ ಸರ್ಕಾರವು ದೂರವಾಣಿ ಕರೆಯ ಮೂಲಕ ಯೋಗ ಕ್ಷೇಮ ವಿಚಾರಿಸುವ ಆಶಯದೊಂದಿಗೆ ತಾಯಿ ಕಾರ್ಡ್‌ ನಲ್ಲಿ ನಮೂದಿತಗೊಂಡಿರುವ ತಮ್ಮ ಮೊಬೈಲ್ ಸಂಖ್ಯೆಗೆ 0124-4451660 ಸಂಖ್ಯೆಯಿಂದ ಕರೆ ಮಾಡುವ ಮೂಲಕ ಪ್ರತಿ ಮಂಗಳವಾರ ಗರ್ಭಿಣಿಯರ ಜೊತೆ ಮಾತನಾಡಿ ಆರೋಗ್ಯ ವಿಚಾರಿಸುವ ಒಂದು ಕಾಳಜಿಯ ವ್ಯವಸ್ಥೆ ಇದಾಗಿದ್ದು, ಕರೆ ಬಂದಾಗ ಅವರೊಂದಿಗೆ ಮಾತನಾಡುವ ಮೂಲಕ ತಾಯ್ತನದ ಸುರಕ್ಷತೆ ಬಗ್ಗೆ ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ಮಾತನಾಡುವ ಅವಕಾಶ ಪಡೆಯಬೇಕು ಎಂದು ವಿನಂತಿಸಿದರು. 

ಈ ಸಂದರ್ಭದಲ್ಲಿ ಮುಖಂಡರಾದ  ರಿಯಾಜ್ ಅಹಮದ್, ಆಡಳಿತ ವೈದ್ಯಾಧಿಕಾರಿ ಡಾ.ನರಸಿಂಹಮೂರ್ತಿ, ಡಾ.ಮುಜಾಮಿಲ್ಲ ಫೀರ್‌ದೋಸ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ಹೆಚ್ ದಾಸಪ್ಪನವರ, ಅನೀಫ್ ಸೇರಿದಂತೆ ಸಿಬ್ಬಂದಿ, ಇತರರು ಇದ್ದರು.