ಬೆಂಗಳೂರು, ಫೆ 13 : ಮುಂಗಾರು ಹಂಗಾಮಿನ ಬಿತ್ತನೆ ಸಮಯದಲ್ಲಿ ನಕಲಿ ಬಿತ್ತನೆ ಬೀಜ ಹಾವಳಿ, ರಸಗೊಬ್ಬರದ ಅಭಾವ ತಪ್ಪಿಸಲು ವ್ಯಾಪಕ ಬಿಗಿ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಹೇಳಿದ್ದಾರೆ.
ಅಕ್ರಮಗಳ ತಡೆಗೆ ಜಿಲ್ಲಾ ಮಟ್ಟದಲ್ಲಿರುವ ಜಾಗೃತ ದಳಗಳನ್ನು ಚುರುಕುಗೊಳಿಸಲಾಗುತ್ತಿದ್ದು, ರಾಜ್ಯಮಟ್ಟದಲ್ಲಿ ಜಾಗೃತಕೋಶ ರಚಿಸಲಾಗಿದೆ. ಮುಂಗಾರು ಕೃಷಿ ಹಂಗಾಮಿಗೆ ಇಲಾಖೆ ಸರ್ವ ಸನ್ನದ್ಧವಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2020ರ ಮುಂಗಾರು ಹಂಗಾಮಿಗೆ ರಸಗೊಬ್ಬರದ ಕೊರತೆ ಉಂಟಾಗದಂತೆ ಮುಂಚಿತವಾಗಿ ಕ್ರಮ ಕೈಗೊಳ್ಳಲಾಗಿದೆ. 1,25,000 ಮೆಟ್ರಿಕ್ ಟನ್ ಪ್ರಮಾಣದ ಯೂರಿಯಾ, 25, 000 ಮೆಟ್ರಿಕ್ ಟನ್ ಡಿಎಪಿ, 25,000 ಟನ್ ಕಾಂಪ್ಲೆಕ್ಸ್ ರಸಗೊಬ್ಬರವನ್ನು ದಾಸ್ತಾನಿಡಲು ಮುಂಜಾಗ್ರತೆ ವಹಿಸಲಾಗಿದೆ ಎಂದು ವಿವರಿಸಿದರು.
ಸದ್ಯದಲ್ಲಿಯೇ ಮಂಡನೆಯಾಗಲಿರುವ ಕೃಷಿ ಬಜೆಟ್‍ನಲ್ಲಿನ ವಿಶೇಷ ಸಂಗತಿಗಳೇನು ಎಂಬುದನ್ನು ವಿವರಿಸದ ಸಚಿವರು ಕಾದುನೋಡಿ ಎಂದಷ್ಟೇ ಹೇಳಿದರು. ರೈತರು ಆತ್ಮಹತ್ಯೆ ಮಾಡಿಕೊಳ್ಳಬಾರದು. ಅವರ ಜತೆ ಸರ್ಕಾರವಿದೆ ಎಂದು ಮನವಿ ಮಾಡಿಕೊಂಡರು.
ಪ್ರಸಕ್ತ ಆರ್ಥಿಕ ವರ್ಷ ಇನ್ನೇನೂ ಮುಕ್ತಾಯವಾಗುವ ಹಂತದಲ್ಲಿದೆ. ಆದರೂ "ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಭೀಮ್ ಯೋಜನೆ ಅಪೂರ್ಣವಾಗಿದೆ. ಈ ಯೋಜನೆ ಇನ್ನಷ್ಟು ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳಬೇಕಾಗಿದೆ ಎಂದರು.
ಈ ಯೋಜನೆ ಅಡಿ 53 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳನ್ನು ಗುರುತಿಸಲಾಗಿದ್ದರೂ ಎಲ್ಲಾ ಫಲಾನುವಿಗಳಿಗೆ ಯೋಜನೆ ಸೌಲಭ್ಯ ತಲುಪಿಸಲು ಸಾಧ್ಯವಾಗಿಲ್ಲ. ಇದಕ್ಕೆ ಅಧಿಕಾರಿಗಳು ತಾಂತ್ರಿಕ ಕಾರಣಗಳನ್ನು ಹೇಳುತ್ತಿದ್ದಾರೆ ಎಂದರು.
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ಪ್ರತಿ ಕುಟುಂಬಕ್ಕೆ 6,000 ರೂ ನೆರವು ನೀಡಲಾಗುತ್ತಿದೆ. ಈ ಯೋಜನೆಯಡಿ 53,81,272 ರೈತರು ನೋಂದಾಯಿಸಿಕೊಂಡಿದ್ದಾರೆ. ಇಲ್ಲಿಯ ತನಕ 49, 05,076 ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ನೇರ ನಗದು ಮೂಲಕ ವರ್ಗಾವಣೆ ಮಾಡಲಾಗಿದೆ. ರಾಜ್ಯ ಸರ್ಕಾರದಿಂದ ಗುರುತಿಸಲಾದ ಫಲಾನುಭವಿಗಳಲ್ಲಿ 41, 27, 932 ಫಲಾನುಭವಿಗಳಿಗೆ ತಲಾ 2000 ರೂಗಳಂತೆ ಒಟ್ಟು 825. 58 ಕೋಟಿ ರೂಗಳನ್ನು ನೀಡಲಾಗಿದೆ ಎಂದು ಸಚಿವ ಬಿ.ಸಿ. ಪಾಟೀಲ್ ಹೇಳಿದರು.
ಮುಂದಿನ ವರ್ಷಗಳಲ್ಲಿ ರೈತರಿಗೆ ಸಂದಾಯವಾಗಬೇಕಾದ ಎಲ್ಲ ಸಹಾಯಧನವನ್ನೂ ನೇರ ನಗದು ವರ್ಗಾವಣೆ ಮೂಲಕವೇ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡಲಾಗುತ್ತದೆ ಎಂದು ವಿವರಿಸಿದರು.