ಲಿಂಗಾಯತ ಧರ್ಮದ ಅವಹೇಳನ ಖಂಡನೀಯ: ಬಸವರಾಜ ರೊಟ್ಟಿ

Denigration of Lingayat religion is condemnable: Basavaraja Rotty

ಬೆಳಗಾವಿ 12: ಲಿಂಗಾಯತ ಧರ್ಮದ ಕುರಿತು ಅವಹೇಳನಕಾರಿಯಾಗಿ ಮಾತನಾಡುವುದು ಮತ್ತು ಲಿಂಗಾಯಿತಕ್ಕೆ ಸ್ವತಂತ್ರ ಧರ್ಮದ ಮಾನ್ಯತೆ ಕೇಳುತ್ತಿರುವುದು ತಪ್ಪು ಎಂಬ ಪಂಚಾಚಾರ್ಯರ ಹೇಳಿಕೆಗಳು ಖಂಡನೀಯ ಎಂದು ಜಾಗತಿಕ ಲಿಂಗಾಯಿತ ಮಹಾಸಭೆಯ ಜಿಲ್ಲಾ ಅಧ್ಯಕ್ಷ ಬಸವರಾಜ ರೊಟ್ಟಿ ಹೇಳಿದ್ದಾರೆ.  

ಪತ್ರಿಕಾ ಪರಿಷತ್ತಿನಲ್ಲಿಂದು ಮಾತನಾಡಿದ ಅವರು ಪಂಚಾಚಾರ್ಯರಲ್ಲಿ ಒಗ್ಗಟ್ಟಿಲ್ಲ ರಂಭಾಪುರಿ ಜಗದ್ಗುರುಗಳು ಮತ್ತು ಕೇದಾರ ಪೀಠದ ಜಗದ್ಗುರುಗಳು ಒಂದು ಗುಂಪಿನಲ್ಲಿದ್ದರೆ ಶ್ರೀಶೈಲ ಕಾಶಿ ಮತ್ತು ಉಜ್ಜಯಿನಿ ಪೀಠಗಳ ಜಗದ್ಗುರುಗಳು ಮತ್ತೊಂದು ಗುಂಪು ರಚಿಸಿಕೊಂಡಿದ್ದಾರೆ. ಈ ಪಂಚಾಚಾರ್ಯರ ಉಗಮದ ಬಗ್ಗೆ ಕಾಲ್ಪನಿಕ ಕಥೆಗಳಿವೆ ನಿಖರ ಸಾಕ್ಷಾಧಾರಗಳು ಇಲ್ಲ, ಶಿವಲಿಂಗದ ಮೇಲೆ ಪಾದಗಳನ್ನಿಡುವ ವಿಚಿತ್ರ ಆಚರಣೆ ಲಿಂಗಾಯಿತರ ಮತ್ತು ಹಿಂದೂ ಶೈವರ ಅಕ್ರೋಶಕ್ಕೆ ಕಾರಣವಾಗಿದೆ. ಪಂಚಾಚಾರ್ಯರು ಐದು ಕಲ್ಲುಗಳಿಂದ ಹುಟ್ಟಿದರು ಎಂಬ ಕಟ್ಟು ಕಥೆಗಳನ್ನು ಲಿಂಗಾಯತರು ನಂಬುತ್ತಿಲ್ಲ, ವೀರಶೈವ ಮತ್ತು ಲಿಂಗಾಯಿತ ಒಂದೇ ಎಂದು ನಂಬಿಸಲು ಪಂಚಾಚಾರ್ಯರು ಪ್ರಯತ್ನಿಸುತ್ತಿದ್ದಾರೆ ಅದನ್ನು ಲಿಂಗಾಯಿತರು ಒಪ್ಪುವುದಿಲ್ಲ,  ಬಸವಣ್ಣನವರ ಮತ್ತು ಸಮಸ್ತ ಶರಣ ಸಂಕುಲ ರಚಿಸಿರುವ 23 ಸಾವಿರ ವಚನಗಳ ಪ್ರಭಾವದಿಂದಾಗಿ ಬಹುಪಾಲು ಲಿಂಗಾಯತರು ಪಂಚಾಚಾರ್ಯರನ್ನು ತೊರೆಯುತ್ತಿದ್ದಾರೆ ಇದರಿಂದ ಹತಾಶರಾದ ಅವರು ಲಿಂಗಾಯತ ಮತ್ತು ಲಿಂಗಾಯತ ಧರ್ಮದ ವಿರುದ್ಧ ಹೇಳಿಕೆಗಳನ್ನು ನೀಡುತ್ತಿದ್ದಾರೆ ಅದನ್ನವರು ನಿಲ್ಲಿಸಬೇಕು ಇಲ್ಲದೆ ಹೋದಲ್ಲಿ ಸಮಸ್ತ ಲಿಂಗಾಯಿತರು ಅವರಿಗೆ ತಕ್ಕ ಉತ್ತರ ನೀಡುತ್ತಾರೆ ಎಂದವರು ಹೇಳಿದರು. 

ಪಂಚಾಚಾರ್ಯರು ಮತ್ತು ಅವರ ಅನುಯಾಯಿಗಳು ವೈದಿಕ ಧರ್ಮದ ಎಲ್ಲ ನಂಬಿಕೆಗಳನ್ನು ನಂಬಲು ಮತ್ತು ಆಚರಿಸಲು ಅವರು ಸ್ವತಂತ್ರರು ಯಾವುದೇ ವೈದಿಕ ಗ್ರಂಥಗಳನ್ನು ಓದಲು ಪ್ರಸ್ತಾಪಿಸಲು ಸಂಪೂರ್ಣ ಅಧಿಕಾರ ಉಳ್ಳವರು ಆದರೆ ಶರಣ ತತ್ವಗಳನ್ನು ನಿರೂಪ ಗೊಳಿಸುವುದು ತಪ್ಪಾಗಿ ಅರ್ಥೈಸುವುದು ಮತ್ತು ಶರಣ ಧರ್ಮದಲ್ಲಿ ಮಧ್ಯಪ್ರವೇಶಿಸುವುದನ್ನು ನಿಲ್ಲಿಸಬೇಕು ಎಂದು ಅವರು ಎಚ್ಚರಿಕೆ ನೀಡಿದರು. 

ಕೊಲ್ಹಾಪುರ್ ಹತ್ತಿರದ ಕಣ್ಣೀರಿ ಮಠದ ಸ್ವಾಮೀಜಿಯವರು ಇತ್ತೀಚೆಗೆ ಬಸವಣ್ಣನವರ ಹಾಗೂ ಲಿಂಗಾಯತ ಧರ್ಮದ ಬಗ್ಗೆ ಅವಹೇಳನಕಾರಿಯಾಗಿ ಹೇಳಿಕೆ ನೀಡಿದ್ದು ಕೂಡ ಖಂಡನೀಯವಾಗಿದೆ ಅವರು ತಮ್ಮ ಮಾತುಗಳನ್ನು ಹಿಂದಕ್ಕೆ ಪಡೆದು ಸಮಾಜದ ಶ್ರಮ ಕೇಳಬೇಕು ಎಂದು ಅವರು ಈ ಸಂದರ್ಭದಲ್ಲಿ ಆಗ್ರಹಿಸಿದರು. 

ಪತ್ರಿಕಾ ಪರಿಷತ್ತಿನಲ್ಲಿ ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾ ಪದಾಧಿಕಾರಿಗಳಾದ ಅಶೋಕ್ ಮಳಗಲಿ , ಸಿಎಂ ಬೂಧಿಹಾಳ, ಮುರಿಗೆಪ್ಪ ಬಾಳಿ ಮತ್ತು ಪ್ರವೀಣ ಚಿಕ್ಕಲಿ ಉಪಸ್ಥಿತರಿದ್ದರು.