ಜನ್ನತ್ ನಗರದ ಗಟಾರ ಸಮಸ್ಯೆ ಹಾಗೂ ಕಸ ವಿಲೇವಾರಿ ಸಮಸ್ಯೆಯನ್ನು ಬಗೆಹರಿಸಲು ಆಗ್ರಹಿಸಿ
ಎಸ್.ಯು.ಸಿ.ಐ.ಕಮ್ಯುನಿಸ್ಟ್ ಪಕ್ಷದ ಮನವಿಗೆ ಸ್ಪಂದಿಸಿ ಜನ್ನತ್ ನಗರಕ್ಕೆ ಭೇಟಿಮಾಡಿ ಗಟಾರ ಸಮಸ್ಯೆ ಹಾಗೂ ಕಸ ವಿಲೇವಾರಿ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ ಅಧಿಕಾರಿಗಳು. ಜನ್ನತ್ ನಗರದ ಗಟಾರ ಸಮಸ್ಯೆ ಹಾಗೂ ಕಸ ವಿಲೇವಾರಿ ಸಮಸ್ಯೆಯನ್ನು ಬಗೆಹರಿಸಲು ಆಗ್ರಹಿಸಿ ಸೋಷಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾ ಹಿ ಕಮ್ಯುನಿಸ್ಟ್, ಎಸ್.ಯು.ಸಿ.ಐ.(ಸಿ)ಪಕ್ಷದ ಉತ್ತರ ಸ್ಥಳೀಯ ಸಮಿತಿ ವತಿಯಿಂದ ಹು -ಧಾ ಮಹಾನಗರ ಪಾಲಿಕೆಯ 12ನೇ ವಲಯದ ಸಹಾಯಕ ಆಯುಕ್ತರಿಗೆ ನಿನ್ನೆ ಮನವಿ ಸಲ್ಲಿಸಲಾಗಿತ್ತು. ಮನವಿಗೆ ಸ್ಪಂದಿಸಿದ ಸಹಾಯಕ ಆಯುಕ್ತರಾದ ಶ್ರೀ ಶಂಕರ್ ಪಾಟೀಲ್ ರವರು ಸಹಾಯಕ ಅಭಿಯಂತರರು ಹಾಗೂ ಆರೋಗ್ಯ ನೀರೀಕ್ಷಣಾಧಿಕಾರಿಗಳ ಜೊತೆಗೆ ಇಂದು ಜನ್ನತ್ ನಗರಕ್ಕೆ ಭೇಟಿ ಮಾಡಿ ಸ್ಥಳ ಪರೀಶೀಲನೆ ಮಾಡಿ ಸಮಸ್ಯೆಗಳನ್ನು ಪರಿಹರಿಸುವುದಾಗಿ ಭರವಸೆ ನೀಡಿದ್ದಾರೆ.ಜನ್ನತ್ ನಗರದ ಮುಖ್ಯ ಗಟಾರವು ಕಸದಿಂದ ತುಂಬಿದ್ದು ಕಸ ವಿಲೇವಾರಿ ಸರಿಯಾಗಿ ನಡೆಯುತ್ತಿಲ್ಲ. ಕಸದ ಗಾಡಿಯೂ ಕೂಡ ನಿಯಮಿತವಾಗಿ ಬರದಿರುವುದರಿಂದ ಸುತ್ತಮುತ್ತಲಿನ ಜನರು ಅನಿವಾರ್ಯವಾಗಿ ಗಟಾರಿಗೆ ಕಸವನ್ನು ಎಸೆಯುವಂತಾಗಿದೆ. ಅದಲ್ಲದೆ ಗಟಾರದಲ್ಲಿ ಯಾವಾಗಲೂ ನೀರು ನಿಲ್ಲುವುದರಿಂದ ಗಟಾರದ ಅಕ್ಕಪಕ್ಕದ ಎಲ್ಲಾ ಮನೆಗಳ ಗೋಡೆಗಳು ತಂಪು ಹಿಡಿದಿದ್ದು, ನೆಲದಿಂದ ನೀರು ಒಸರುತ್ತಿದೆ. ಅಷ್ಟೇ ಅಲ್ಲದೆ ಜೋರಾಗಿ ಮಳೆ ಬಂದಾಗ, ನೀರು ಹಿಮ್ಮುಖವಾಗಿ ಬಂದು ಮನೆಗಳಲ್ಲಿ ಬಾತ್ರೂಮ್ ಗಳ ಮೂಲಕ ಮನೆ ಒಳಗೆಲ್ಲ ನೀರು ತುಂಬಿ ಬದುಕುವುದೇ ದುಸ್ತರವಾಗುತ್ತದೆ. ಆದ್ದರಿಂದ ಕಸದ ಗಾಡಿ ಪ್ರತಿದಿನ ಎಲ್ಲ ರಸ್ತೆಗಳಿಗೂ ಬಂದು ಹೋಗಬೇಕು. ಮುಖ್ಯ ಗಟಾರವನ್ನು ಕೂಡಲೇ ಸ್ವಚ್ಛಗೊಳಿಸಿ ನೀರು ಸರಾಗವಾಗಿ ಹರಿದುಹೋಗಬೇಕು. ಅರ್ಧ ಗಟಾರದ ಮೇಲೆ ಸ್ಲ್ಯಾಬ್ ಇದ್ದು, ಜನರು ಕಸ ಚೆಲ್ಲದಂತೆ ಪೂರ್ತಿ ಗಟಾರದ ಮೇಲೆ ಸ್ಲ್ಯಾಬ್ ಹಾಕಲು ಕ್ರಮ ಕೈಗೊಳ್ಳಬೇಕು. ಸೊಳ್ಳೆಗಳ ನಿಯಂತ್ರಣಕ್ಕೆ ಫಾಗಿಂಗ್ ಮಾಡಬೇಕು ಎಂದು ಮನವಿ ಸಲ್ಲಿಸಲಾಗಿತ್ತು.ಈ ಸಂಧರ್ಭದಲ್ಲಿ ಎಸ್.ಯು.ಸಿ.ಐ ಕಮ್ಯುನಿಸ್ಟ್ ಪಕ್ಷದ ಉತ್ತರ ಸ್ಥಳೀಯ ಸಮಿತಿ ಕಾರ್ಯದರ್ಶಿ ಭವಾನಿಶಂಕರ್ ಎಸ್ ಗೌಡ, ಸದಸ್ಯರಾದ ಮಮತಾಜ್ ಮಗಳಾನಿ, ನಿವಾಸಿಗಳಾದ ಜಮುನಾ ಕಲಾಲ್, ಮಮತಾಜ್ ಸವಣುರ್, ಶಾಹಿದಾ ಶೇಖ್, ಫಾತಿಮಾ ಮುತ್ತಗಿ, ರಸೂಲ್ ಶೇಖ್ ಮುಂತಾದವರು ಭಾಗವಹಿಸಿದ್ದರು.