ಪ್ರಯಾಣಿಕರಿಗಾಗಿ ಬಸ್ ತಂಗುದಾಣ ನಿರ್ಮಿಸುವಂತೆ ಒತ್ತಾಯ

Demand to build bus shelter for passengers

ಪ್ರಯಾಣಿಕರಿಗಾಗಿ ಬಸ್ ತಂಗುದಾಣ ನಿರ್ಮಿಸುವಂತೆ ಒತ್ತಾಯ 

ಕಂಪ್ಲಿ 11: ಸ್ಥಳೀಯ ಹಳೆ ಬಸ್ ನಿಲ್ದಾಣದ ಇಂದಿರಾ ಕ್ಯಾಂಟಿನ್ ಬಳಿಯಲ್ಲಿ ಪ್ರಯಾಣಿಕರಿಗಾಗಿ ತಂಗುದಾಣ ನಿರ್ಮಿಸಬೇಕೆಂದು ಒತ್ತಾಯಿಸಿ, ವಿಜಯ ಕರುನಾಡ ರಕ್ಷಣಾ ವೇದಿಕೆಯಿಂದ ಪಟ್ಟಣದ ಪುರಸಭೆ ಕಛೇರಿಯಲ್ಲಿ ಅಧ್ಯಕ್ಷ ಭಟ್ಟ ಪ್ರಸಾದ್ ಇವರಿಗೆ ಮಂಗಳವಾರ ಮನವಿ ಪತ್ರ ಸಲ್ಲಿಸಿದರು. ನಂತರ ರಾಜ್ಯ ಕಾರ್ಯಾಧ್ಯಕ್ಷ ಬಿ.ವಿರುಪಾಕ್ಷಿ ಯಾದವ್ ಮಾತನಾಡಿ, ಇಲ್ಲಿನ ಹಳೆ ಬಸ್ ನಿಲ್ದಾಣದ ಬಳಿಯಲ್ಲಿ ತಂಗುದಾಣ ಇಲ್ಲದ ಪರಿಣಾಮ ಪ್ರಯಾಣಿಕರಿಗೆ ತುಂಬ ಸಮಸ್ಯೆಯಾಗಿದೆ. ಇಲ್ಲಿ ಪ್ರಯಾಣಿಕರು ಮಳೆ, ಬಿಸಿಲು ಎನ್ನದೇ, ಬಸ್ಗಾಗಿ ಕಾಯುವ ಸ್ಥಿತಿ ನಿರ್ಮಾಣವಾಗಿದೆ. ಇಲ್ಲಿನ ಸ್ಥಳದಿಂದ ಸಣಾಪುರ ಮಾರ್ಗದಲ್ಲಿ ಸಿರುಗುಪ್ಪ ಹಾಗೂ ಎಮ್ಮಿಗನೂರು ಮಾರ್ಗದಲ್ಲಿ ಕುರುಗೋಡು. ಹೀಗೆ ನಾನಾ ಊರುಗಳಿಗೆ ಅಧಿಕ ಸಂಖ್ಯೆಯಲ್ಲಿ ಪ್ರಯಾಣಿಕರು ಪ್ರಯಾಣ ಮಾಡುತ್ತಿದ್ದಾರೆ. ಇಲ್ಲಿನ ಸ್ಥಳದಲ್ಲಿ ಬಸ್ ಬರುವತನಕ ವಿಶ್ರಾಂತ ಪಡೆಯಲು, ತಂಗುದಾಣ ಇಲ್ಲದಂತಾಗಿದೆ. ವೃದ್ದರು, ಮಕ್ಕಳು, ಮಹಿಳೆಯರು ರಸ್ತೆ ಬದಿಯಲ್ಲೇ ನಿಂತುಕೊಂಡು, ಬಸ್ ಬರುವತನ ಕಷ್ಟ ಅನುಭವಿಸುತ್ತಿದ್ದಾರೆ. ಇಲ್ಲಿನ ಪ್ರಯಾಣಿಕರ ಗೋಳು ಕೇಳುವವರು ಇಲ್ಲದಂತಾಗಿದೆ. ಆದ್ದರಿಂದ ಪುರಸಭೆ ಆಡಳಿತ ಮಂಡಳಿಯವರು ಹಾಗೂ ಅಧಿಕಾರಿಗಳು ಗಮನಕ್ಕೆ ತೆಗೆದುಕೊಂಡು, ಇಲ್ಲಿನ ಪ್ರಯಾಣಿಕರ ಸಮಸ್ಯೆ ಅರಿತು, ಆದಷ್ಟು ಬೇಗ ಬಸ್ ತಂಗುದಾಣ ನಿರ್ಮಿಸಿಕೊಡಬೇಕೆಂದು ಮನವಿ ಮಾಡಿದರು. ಇಲ್ಲಿನ 12ನೇ ವಾರ್ಡಿನಲ್ಲಿ ಚರಂಡಿ, ಕುಡಿಯುವ ನೀರು, ರಸ್ತೆ, ಬೀದಿ ದೀಪದ ಸಮಸ್ಯೆ ಸೇರಿದಂತೆ ನಾನಾ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಬೇಕೆಂದು ಮಹಿಳಾ ಘಟಕದ ಪದಾಧಿಕಾರಿಗಳು ಹಕ್ಕೋತ್ತಾಯ ಮಾಡಿದರು. ಈ ಸಂದರ್ಭದಲ್ಲಿ ರೈತ ಘಟಕದ ರಾಜ್ಯ ಉಪಾಧ್ಯಕ್ಷ ಕೆ.ದೊಡ್ಡಬಸಪ್ಪ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಜೆ.ಶಿವುಕುಮಾರ, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಬಿ.ಮಂಜುಳಾ, ಉಪಾಧ್ಯಕ್ಷೆ ಕವಿತಾ, ತಾಲೂಕು ಅಧ್ಯಕ್ಷ ಜಗದೀಶ ಪೂಜಾರ, ಕಂಪ್ಲಿ ಗೌರವಾಧ್ಯಕ್ಷ ಎಸ್‌.ಗೋಪಾಲಪ್ಪ ಯಾದವ್, ಪದಾಧಿಕಾರಿಗಳಾದ ಕೆ.ಶಬ್ಬೀರ್, ವಿ.ದೊಡ್ಡಬಸವ, ಎಂ.ಶಶಿಕುಮಾರ, ಸಂತೋಷಕುಮಾರ, ಬಿ.ವಿರೇಶ, ಕಂಠೆಪ್ಪ, ವಿರೇಶ, ಯಲ್ಲಪ್ಪ, ಹುಲಿಗೆಮ್ಮ ಸೇರಿದಂತೆ ಇತರರು ಇದ್ದರು