ನವದೆಹಲಿ, ನ 4: ರಾಷ್ಟ್ರ ರಾಜಧಾನಿ ಕೇವಲ ವಾಯು ಮಾಲಿನ್ಯದಿಂದ ಮಾತ್ರ ಅಪಾಯ ಎದುರಿಸುತ್ತಿಲ್ಲ ಬದಲಾಗಿ ರಸ್ತೆ ಅಪಘಾತಗಳು ವರ್ಷದಿಂದ ವರ್ಷಕ್ಕೆ ಹೆಚ್ಚಾಗಿ ಅಮಾಯಕರು ಸಾವಿಗೆ ತುತ್ತಾಗುತ್ತಿದ್ದಾರೆ. ರಸ್ತೆ ಅಪಘಾತಗಳಿಂದಾದ ಸಾವಿನ ಸಂಖ್ಯೆ 2018ರಲ್ಲೂ ಏರಿಕೆಯಾಗುತ್ತಿದ್ದು ರಸ್ತೆ ಅಪಘಾತ ದಿಂದಾಗುವ ಸಾವಿನ ರಾಜಧಾನಿ ಎಂಬ ಅಪಖ್ಯಾತಿಗೂ ಒಳಗಾಗುತ್ತಿದೆ. 2017ಕ್ಕೆ ಹೋಲಿಸಿದರೆ ರಸ್ತೆ ಅಪಘಾತಗಳಲ್ಲಿ ಮೃತಪಟ್ಟವರ ಸಂಖ್ಯೆ 106ರಷ್ಟು ಹೆಚ್ಚಿದೆ. ಉಳಿದಂತೆ ಕೊಲ್ಕತ್ತಾ, ಚೆನ್ನೈ ಮತ್ತು ಮುಂಬೈನಲ್ಲಿ ರಸ್ತೆ ಅಪಘಾತದಿಂದ ಆಗುತ್ತಿರುವ ಸಾವಿನ ಪ್ರಮಾಣದಲ್ಲಿ ಕೊಂಚ ಇಳಿಕೆಯಾಗಿದೆ. 2017ರಲ್ಲಿ ಚೆನ್ನೈನಲ್ಲಿ 1299 ಮಂದಿ ರಸ್ತೆ ಅಪಘಾತಗಳಲ್ಲಿ ಅಸು ನೀಗಿದ್ದಾರೆ , ಆದರೆ 2018 ರಲ್ಲಿ ಈ ಪ್ರಮಾಣ 1260ಕ್ಕೆ ಇಳಿದಿದೆ. ಕೊಲ್ಕತ್ತಾದಲ್ಲಿ 2017ರಲ್ಲಿ 329 ಮತ್ತು 2018ರಲ್ಲಿ 294 ರಸ್ತೆ ಅಪಘಾತ ಸಾವುಗಳು ಸಂಭವಿಸಿದೆ. ಮುಂಬೈನಲ್ಲೂ ಹಿಂದಿನ ವರ್ಷಕ್ಕೆ ಹೋಲಿಸಿದರೆ 15 ಕಡಿಮೆ ಸಾವು ಸಂಭವಿಸಿದ್ದು, ಒಟ್ಟು 475 ಮಂದಿ ಮೃತಪಟ್ಟಿದ್ದಾರೆ.