ಮುಂಬೈ, ಜೂನ್ 13: ಇತ್ತೀಚೆಗಷ್ಟೇ ಬಾಲಿವುಡ್ ನಟ ಹೃತಿಕ್ ರೋಶನ್ ಚಿತ್ರವೊಂದಕ್ಕೆ ಬರೋಬ್ಬರಿ 48 ಕೋಟಿ ರೂ. ಸಂಭಾವನೆ ಪಡೆದು ಸುದ್ದಿಯಾದ ಬೆನ್ನಲ್ಲೇ, ನಟಿ ದೀಪಿಕಾ ಪಡುಕೋಣೆ ತಮ್ಮ ಮುಂಬರುವ '83' ಚಿತ್ರಕ್ಕಾಗಿ 14 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ.
ಇದಕ್ಕೂ ಮೊದಲು ದೀಪಿಕಾ, '83' ಚಿತ್ರದಲ್ಲಿ ತಮ್ಮ ಪಾತ್ರ ಚಿಕ್ಕದಾಗಿದೆ ಎಂದು ನೆಪ ಹೇಳಿ ನಟಿಸಲು ಒಲ್ಲೆ ಎಂದಿದ್ದರು. ಆದರೆ ಚಿಕ್ಕ ಪಾತ್ರಕ್ಕೂ14 ಕೋಟಿ ರೂ. ಸಂಭಾವನೆ ನೀಡಿದ್ದರಿಂದ ನಟಿಸಲು ತಯಾರಾಗಿದ್ದಾರಂತೆ.
ತಮ್ಮ ನೈಜ ಜೀವನದ ಪತಿ ರಣವೀರ್ ಸಿಂಗ್ ಅವರೊಂದಿಗೆ '83' ಚಿತ್ರದಲ್ಲಿಯೂ ದೀಪಿಕಾ ಪತ್ನಿ ಆಗಿಯೇ ಕಾಣಿಸಿಕೊಳ್ಳುತ್ತಿರುವುದು ವಿಶೇಷ.
ಚಿತ್ರದಲ್ಲಿ ರಣವೀರ್ ಕಪೂರ್, ಭಾರತೀಯ ಕ್ರಿಕೆಟ್ ತಂಡದ ಮಾಜಿ ಆಟಗಾರ ಕಪಿಲ್ ದೇವ್ ಅವರ ಪಾತ್ರದಲ್ಲಿ ಅಭಿನಯಿಸಲಿದ್ದು, ಅವರ ಪತ್ನಿ ರೋಮಿ ಭಾಟಿಯಾ ಆಗಿ ದೀಪಿಕಾ ಬಣ್ಣ ಹಚ್ಚಲಿದ್ದಾರೆ.
ಭಾರತ ಮೊದಲ ಬಾರಿಗೆ ಕ್ರಿಕೆಟ್ ವಿಶ್ವಕಪ್ ಗೆದ್ದಿರುವುದರ ಕುರಿತ ಕಥಾ ವಸ್ತುವೇ 83. ಸದ್ಯ ಚಿತ್ರತಂಡ ಇಂಗ್ಲೆಂಡ್ ನಲ್ಲಿ ಚಿತ್ರೀಕರಣ ನಡೆಸುತ್ತಿದೆ.