ತಿರುಮಲ, ಅ 9: ಭಾರತದ ಕುಸಿಯುತ್ತಿರುವ ಆರ್ಥಿಕತೆಯ ಪ್ರಭಾವ ತಿರುಮಲ ತಿರುಪತಿಯ ಶ್ರೀವಾರಿ ಹುಂಡಿಗೂ ತಟ್ಟಿದೆ. ಮಂಗಳವಾರ ಕೊನೆಗೊಂಡ ತಿರುಪತಿ ತಿಮ್ಮಪ್ಪನ ಒಂಭತ್ತು ದಿನಗಳ ಬ್ರಹ್ಮೋತ್ಸವಕ್ಕೆ ಭಕ್ತರ ಸಂಖ್ಯೆ ಕಳೆದ ವರ್ಷಕ್ಕೆ ಹೋಲಿಸಿದರೆ ಹೆಚ್ಚಾಗಿದ್ದರೂ ಶ್ರೀವಾರಿ ಹುಂಡಿ ಸಂಗ್ರಹ ತೀವ್ರವಾಗಿ ಇಳಿಕೆ ಕಂಡಿದೆ. ಒಂಭತ್ತು ದಿನಗಳ ಬ್ರಹ್ಮೋತ್ಸವದ ಸಂದರ್ಭದಲ್ಲಿ ಸುಮಾರು 7.074 ಲಕ್ಷ ಯಾತ್ರಿಕರು ತಿರುಮಲದ ಶ್ರೀವೇಂಕಟೇಶ್ವರನ ದರ್ಶನ ಪಡೆದಿದ್ದಾರೆ. ಕಳೆದ ವರ್ಷದ ಬ್ರಹ್ಮೋತ್ಸವದ ಸಂದರ್ಭದಲ್ಲಿ 5.9 ಲಕ್ಷ ಯಾತ್ರಿಕರು ಭೇಟಿ ನೀಡಿದ್ದರು. ಯಾತ್ರಿಕರ ಸಂಖ್ಯೆ ಹೆಚ್ಚಾಗಿದ್ದರೂ ಹುಂಡಿ ಸಂಗ್ರಹ ಕಡಿಮೆಯಾಗಿದೆ. ಕಳೆದ ವರ್ಷ ಹುಂಡಿ ಸಂಗ್ರಹ 20.52 ಕೋಟಿ ರೂ ಇದ್ದು ಈ ವರ್ಷ 20.40 ಕೋಟಿ ರೂ ಗೆ ಇಳಿಕೆಯಾಗಿದೆ. ಕಳೆದ ವರ್ಷ ಬ್ರಹ್ಮೋತ್ಸವದ ಸಂದರ್ಭದಲ್ಲಿ 2.17 ಲಕ್ಷ ಜನರು ಮುಡಿ ಕೊಟ್ಟಿದ್ದರೆ ಈ ವರ್ಷ 3.23 ಲಕ್ಷ ಭಕ್ತರು ಮುಡಿ ಅರ್ಪಿಸಿದ್ದು ಈ ಸಂಖ್ಯೆ ಶೇಕಡ 50 ರಷ್ಟು ಹೆಚ್ಚಳ ಕಂಡಿದೆ. ಈ ವರ್ಷ 34.01 ಲಕ್ಷ ಲಾಡು ಪ್ರಸಾದ ಮಾರಾಟವಾಗಿದ್ದು ಕಳೆದ ವರ್ಷ ಬ್ರಹ್ಮೋತ್ಸವದ ಸಂದರ್ಭದಲ್ಲಿ ಹತ್ತು ಲಕ್ಷ ಕಡಿಮೆ ಅಂದರೆ 24.01 ಲಕ್ಷ ಲಾಡು ವಿತರಿಸಲಾಗಿತ್ತು.