ಪ್ರವಾಹವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಿ, ತಕ್ಷಣ 5000 ಕೋಟಿ ರೂ.ಬಿಡುಗಡೆ ಮಾಡಿ: ಸಿದ್ದರಾಮಯ್ಯ

ಬೆಂಗಳೂರು, ಆ 11     ಕರ್ನಾಟಕ ರಾಜ್ಯದಲ್ಲಿ ಹಿಂದೆಂದೂ ಕಂಡು ಕೇಳರಿಯದ ರೀತಿ ಮಳೆ ಮತ್ತು ಪ್ರವಾಹದಿಂದ ಜನರು ತತ್ತರಿಸಿದ್ದಾರೆ. ಕೇಂದ್ರ ಸರ್ಕಾರ ತಕ್ಷಣ ರಾಜ್ಯಕ್ಕೆ 5000 ಕೋಟಿ ರೂಪಾಯಿ ಪರಿಹಾರ ಒದಗಿಸಿ, ಈ ಪ್ರಕೃತಿ ವಿಕೋಪವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಣೆ ಮಾಡಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ. 'ಕಾವೇರಿ'ಯ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕದ ಶೇಕಡಾ 60ರಷ್ಟು ಪ್ರದೇಶ ಜಲಾವೃತವಾಗಿದೆ. ಮಹಾರಾಷ್ಟ್ರ ಹಾಗೂ ಕೇರಳದಲ್ಲಿ ಆಗುತ್ತಿರುವ ಅತಿ ಹೆಚ್ಚಿನ ಮಳೆಯೂ ಇದಕ್ಕೆ ಕಾರಣ. ಆಲಮಟ್ಟಿ ಮತ್ತು ನಾರಾಯಣಪುರ ಜಲಾಶಯಗಳಿಂದ 6.5 ಲಕ್ಷ ಕ್ಯೂಸೆಕ್ ನೀರು ಬಿಟ್ಟಿರುವುದು ಇದೇ ಮೊದಲು. ರಾಜ್ಯದ ಪರಿಸ್ಥಿತಿ ಗಂಭೀರವಾಗಿದ್ದು, ಇದನ್ನು ಕೇಂದ್ರ ಸರ್ಕಾರ ಗಮನಿಸಿ, ತಕ್ಷಣ ನೆರವು ನೀಡಬೇಕು ಎಂದು ಆಗ್ರಹಿಸಿದರು. ಕೇಂದ್ರದ ಹಣಕಾಸು ಮಂತ್ರಿ ನಿರ್ಮಲಾ ಸೀತಾರಾಮನ್ ಪ್ರವಾಹ ಪರಿಸ್ಥಿತಿ ಪರಿಶೀಲನೆ ನಡೆಸಿದ್ದಾರೆ.  ಪ್ರಧಾನ ಮಂತ್ರಿಗಳೇ ನೇರವಾಗಿ ವೈಮಾನಿಕ ಸಮೀಕ್ಷೆ ನಡೆಸಬೇಕಿತ್ತು. ಗೃಹ ಸಚಿವ ಅಮಿತ್ ಷಾ, ನಿರ್ಮಲಾ ಸೀತಾರಾಮನ್ ಪ್ರವಾಹ ಪರಿಸ್ಥಿತಿ ಪರಿಶೀಲನೆ ನಡೆಸಿದರೂ ಅದಕ್ಕೆ ಅಷ್ಟು ಗಂಭೀರತೆ ಇರುವುದಿಲ್ಲ. ಪ್ರಧಾನಿ ಭೇಟಿ ನೀಡಿ ಪರಿಶೀಲನೆ ನಡೆಸಬೇಕೆಂದು ಆಗ್ರಹ ಪೂರಕ ಒತ್ತಾಯ ಮಾಡುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದರು. ರಾಜ್ಯದಲ್ಲಿ 6000 ಕೋಟಿಯಲ್ಲ 1 ಲಕ್ಷ ಕೋಟಿಗೂ ಅಧಿಕ ಖಾಸಗಿ ಹಾಗೂ ಸಾರ್ವಜನಿಕ ಆಸ್ತಿ-ಪಾಸ್ತಿ ಹಾನಿಯಾಗಿದೆ. 10 ಲಕ್ಷ ಎಕರೆ ಬೆಳೆ ನಾಶವಾಗಿದೆ. ಸರ್ಕಾರದ ಪ್ರಕಾರ 30  ಜನರ ಸಾವಿಗೀಡಾಗಿದ್ದು, 15 ಜನ ನಾಪತ್ತೆಯಾಗಿದ್ದಾರೆ. ಆದ್ದರಿಂದ ತಕ್ಷಣ 5000 ಕೋಟಿ ರೂಪಾಯಿ ಬಿಡುಗಡೆ ಮಾಡಬೇಕು ಎಂದರು. 2009 ರಲ್ಲಿ ಪ್ರವಾಹ ಸಂಭವಿಸಿದಾಗ ರಾಜ್ಯಕ್ಕೆ ಅಂದಿನ ಪ್ರಧಾನಿ, ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿ ಭೇಟಿ ನೀಡಿ ಪರಿಶೀಲಿಸಿದ್ದರು. ಮಾತ್ರವಲ್ಲದೆ ಪರಿಶೀಲನೆ ನಡೆಸಿದ ತಕ್ಷಣವೇ 1600 ಕೋಟಿ ರೂ. ಗಳ ವಿಶೇಷ ಅನುದಾನ ಘೋಷಿಸಿದ್ದರು ಎಂದು ಸಿದ್ದರಾಮಯ್ಯ ಸ್ಮರಿಸಿದರು. ಕೇಂದ್ರದಿಂದ ರಾಜ್ಯಕ್ಕೆ 126 ಕೋಟಿ ರೂಪಾಯಿ ಬಿಡುಗಡೆ ಮಾಡಿದ್ದಾರೆಂದು ಕೇಂದ್ರ ಸಚಿವ ಸದಾನಂದಗೌಡ ತಿಳಿಸಿದ್ದಾರೆ. ಆದರೆ ಇದು ಕಳೆದ ವರ್ಷದ ಬಾಕಿ ಹಣವಾಗಿದ್ದೂ ಪ್ರಸಕ್ತ ಸಾಲಿನಲ್ಲಿ ಒಂದೂ ಪರಿಹಾರ ಹಣ ಬಿಡುಗಡೆಯಾಗಿಲ್ಲ. ರಾಜ್ಯದಿಂದ 26 ಜನ ಬಿಜೆಪಿ ಸಂಸದರು ಆಯ್ಕೆಯಾಗಿದ್ದು, ಕೇಂದ್ರದ ಮೇಲೆ ಒತ್ತಡ ತಂದು ಹೆಚ್ಚಿನ ಅನುದಾನ ತರಬೇಕಿತ್ತು. ಆದರೆ ಅವರು ಈ ಕೆಲಸ ಮಾಡುತ್ತಿಲ್ಲ ಎಂದು ವಿಷಾದಿಸಿದರು. ಕೇವಲ ಭಾವನಾತ್ಮಕ ವಿಚಾರಗಳಿಂದ ಆಡಳಿತ ನಡೆಸುವುದಕ್ಕೆ ಸಾಧ್ಯವಿಲ್ಲ. ಮಾನವೀಯತೆ ಮುಖ್ಯ, ಇಂತಹ ಪರಿಸ್ಥಿತಿಯಲ್ಲಿ ಮಾನವೀಯತೆ ಮೆರೆಯಬೇಕಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಅವರು ಮನವಿ ಮಾಡಿದರು.  ನವಿಲು ತೀರ್ಥ ಅಣೆಕಟ್ಟೆಯಿಂದ 50 ಸಾವಿರ ಕ್ಯೂಸೆಕ್ಸ್ ನೀರನ್ನು ಹೊರಬಿಡುತ್ತಿದ್ದು ಪಟ್ಟಕಲ್ಲಿನ ನಡುಗೆಡ್ಡೆಯಲ್ಲಿ 271 ಜನ ಸಿಲುಕಿದ್ದರು. ಏರ್ ಲಿಫ್ಟ್ ಮಾಡಲು ಜಿಲ್ಲಾಧಿಕಾರಿಗಳಿಗೆ ಸೂಚಿಸಿದರೂ ಸರ್ಕಾರ ವಿಮಾನ ಸೌಲಭ್ಯ ಕಲ್ಪಿಸಲಿಲ್ಲ, ಬಳಿಕ ಬಳಿಕ ದೋಣಿಗಳನ್ನು ಬಳಸಿ ಅವರನ್ನು ಸ್ಥಳಾಂತರ ಮಾಡಲಾಗಿದೆ. ಬಾಗಲಕೋಟೆ ಜಿಲ್ಲಾಧಿಕಾರಿ ಒತ್ತಾಯ ಮಾಡಿದರೂ ಹೆಲಿಕಾಪ್ಟರ್ ನೀಡುತ್ತಿಲ್ಲ. ಕೇಂದ್ರದಲ್ಲಿ ಬಿಜೆಪಿಯ ಸರ್ಕಾರವೇ ಇದ್ದು ರಾಜ್ಯಕ್ಕೆ ಸಹಕಾರ ನೀಡುತ್ತಿಲ್ಲ. ಕನಿಷ್ಠ 10 ವಿಮಾನಗಳು ಹಾಗೂ ಹೆಚ್ಚಿನ ವಿಪತ್ತು ನಿರ್ವಹಣಾ ಪಡೆಗಳನ್ನು ರಾಜ್ಯಕ್ಕೆ ರವಾನಿಸಬೇಕಿತ್ತು  ಎಂದರು. ಮುಖ್ಯಮಂತ್ರಿ ಯಡಿಯೂರಪ್ಪ ಏಕಪಾತ್ರಾಭಿನಯ ಮಾಡುತ್ತಿದ್ದಾರೆ. ಸಚಿವ ಸಂಪುಟ ಇಲ್ಲ, ಕೌನ್ಸಿಲ್ ಆಫ್ ಮಿನಿಸ್ಟರ್ ಎಂದರೆ ಒಬ್ಬರೇ ಅಲ್ಲ, ವಿಶ್ವಾಸ ಮತದ ವೇಳೆ ಸರ್ಕಾರ ಕೆಡವುದರಲ್ಲಿ ಇದ್ದ ಆಸಕ್ತಿ ಅವರಿಗೆ ಸಚಿವ ಸಂಪುಟ ರಚನೆಯಲ್ಲಿ ಇಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಇಲಾಖೆ ಸಚಿವರು ಇದ್ದರೆ ಸಮಸ್ಯೆಗಳನ್ನು ಬಗೆಹರಿಸುತ್ತಿದ್ದರು. ಜೊತೆಗೆ ಸ್ಥಳದಲ್ಲಿಯೇ ತೀರ್ಮಾನ ಕೈಗೊಂಡು ಇನ್ನಷ್ಟು ತೀವ್ರವಾಗಿ ಪರಿಹಾರ ಕಾರ್ಯಗಳನ್ನು ಕೈಗೊಳ್ಳಬಹುದಾಗಿತ್ತು. ಆದರೆ  ಬಿಜೆಪಿ ಶಾಸಕರೇ ಮಂತ್ರಿಗಳಂತೆ ಕೆಲಸ ಮಾಡುತ್ತಿದ್ದಾರೆ ಎಂಬ ಯಡಿಯೂರಪ್ಪ ಹೇಳಿಕೆ ಬೇಜವಾಬ್ದಾರಿ ಹೇಳಿಕೆ ಎಂದು ಸಿದ್ದರಾಮಯ್ಯ ಕಿಡಿಕಾರಿದರು. ಪ್ರವಾಹ ಸಂತ್ರಸ್ತರಿಗೆ ಹೆಚ್ಚಿನ ಅನುಕೂಲ ಕಲ್ಪಿಸಬೇಕಿದೆ. ಈಗಿರುವ ಪುನರ್ವಸತಿ ಕೇಂದ್ರಗಳನ್ನು ತೆರೆಯಬೇಕಿದೆ. ತಮ್ಮ ಸ್ವಕ್ಷೇತ್ರ ಬದಾಮಿಯಲ್ಲೂ ಸಮರ್ಪಕ ಮೂಲಸೌಕರ್ಯ ಕಲ್ಪಿಸಿಲ್ಲ, ಕೆಲವೆಡೆ ಹಾಸಿಗೆ, ಹೊದಿಕೆ , ಕುಡಿಯಲು ನೀರು, ಮೂಲಸೌಕರ್ಯಗಳನ್ನು ಕಲ್ಪಿಸಬೇಕಿದೆ. ಪ್ರವಾಹ ಕಡಿಮೆಯಾದ ಬಳಿಕ ಅನಾರೋಗ್ಯದಿಂದ ಜನರು ಸಂಕಷ್ಟಕ್ಕಿಡಾಗುವ ಸಾಧ್ಯತೆ ಇದೆ. ಹೀಗಾಗಿ ಸಂತ್ರಸ್ತರ ಪುನರ್ವಸತಿ ಕೇಂದ್ರದಲ್ಲಿ ಚಿಕಿತ್ಸೆ ಹಾಗೂ ಔಷಧಿಗಳನ್ನು ಪೂರೈಸಬೇಕಿದೆ. ಸರ್ಕಾರಿ ಮತ್ತು ಖಾಸಗಿ ವೈದ್ಯರ ಸಹಕಾರ ಪಡೆದು ಚಿಕಿತ್ಸೆ ನೀಡಬೇಕು, ಊಟ ವಸತಿ, ಅಗತ್ಯ ಸೌಲಭ್ಯಗಳು ಪೂರೈಸಬೇಕಿದೆ ಎಂದು ಹೇಳಿದರು. ಒಂದೆಡೆ ಸಂತ್ರಸ್ತರಿಗೆ ಸರಿಯಾದ ರೀತಿ ಸೌಲಭ್ಯ ಸಿಗುತ್ತಿಲ್ಲ ಎಂಬ ಮಾಹಿತಿ ಇದ್ದರೆ ಮತ್ತೊಂದೆಡೆ ಜಾನುವಾರುಗಳಿಗೆ ಕುಡಿಯುವ ನೀರು ಮತ್ತು ಮೇವಿನ ಕೊರತೆ ಕಂಡು ಬಂದಿದೆ. ಅವುಗಳಿಗೆ ಮೇವು, ರಕ್ಷಣೆ ನೀಡುವ ನಿಟ್ಟಿನಲ್ಲಿ ತ್ವರಿತವಾಗಿ ಸರ್ಕಾರ ಸ್ಪಂದಿಸಬೇಕಿದೆ. ಪ್ರಧಾನ ಮಂತ್ರಿ ರಾಜ್ಯಕ್ಕೆ ಒಂದೆರಡು ದಿನಗಳಲ್ಲಿ  ಭೇಟಿ ಮಾಡಬೇಕು. ರಾಜ್ಯ ಸರ್ಕಾರದ ವರದಿಗಾಗಿ ಪ್ರಧಾನ ಮಂತ್ರಿಗಳು ಹಾಗೂ ಗೃಹ ಸಚಿವರು ಕಾಯದೆ ತಕ್ಷಣ 5000 ಕೋಟಿ ರೂ ಅನುದಾನ ಬಿಡುಗಡೆ ಮಾಡಬೇಕು. ಮಹಾರಾಷ್ಟ್ರ, ಕೇರಳಕ್ಕೆ ಈಗಾಗಲೇ ಅನುದಾನ ನೀಡಿದ್ದಾರೆ, ಕರ್ನಾಟಕ ರಾಜ್ಯಕ್ಕೆ ಇನ್ನೂ ನಯಾ ಪೈಸೆ ಹಣ ಬಿಡುಗಡೆ ಮಾಡದೆ ಮಲತಾಯಿ ಧೋರಣೆ ಪ್ರದರ್ಶಿಸಿದ್ದಾರೆ. ಕರ್ನಾಟಕಕ್ಕೆ ಆದ್ಯತೆ ಮೇರೆಗೆ ಅನುದಾನ ಬಿಡುಗಡೆ ಮಾಡಬೇಕು ಎಂದು ಸಿದ್ದರಾಮಯ್ಯ ಒತ್ತಾಯಿಸಿದರು. ಗದಗದಲ್ಲಿ ಸಂತ್ರಸ್ತರಿಗೆ ಸಾಂತ್ವನ ಹೇಳುವುದನ್ನು ಬಿಟ್ಟು ಅವರ ಮೇಲೆ ಲಾಠಿ ಚಾರ್ಜ್ ಮಾಡಿದ್ದಾರೆ. ಯಡಿಯೂರಪ್ಪ ಅವರಿಗೆ ಮನುಷ್ಯತ್ವ, ಮಾನವೀಯತೆ ಇದೆಯೇ ? ಎಂದು ಪ್ರಶ್ನಿಸಿದ ಅವರು,  ನೆರೆ ಸಂತ್ರಸ್ತ ಪ್ರದೇಶಗಳಲ್ಲಿ ಯುದ್ಧೋಪಾದಿಯಲ್ಲಿ ಪರಿಹಾರ ಕಾರ್ಯ ಕೈಗೊಳ್ಳಬೇಕು ಎಂದರು. ತಮಗೆ ಕಣ್ಣಿನ ಶಸ್ತ್ರಚಿಕಿತ್ಸೆ ಆಗಿದೆ. 15 ದಿನ ಹೊರಗೆ ಹೋಗದಂತೆ ವೈದ್ಯರು ಸೂಚಿಸಿದ್ದಾರೆ. ಆದ್ದರಿಂದ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಲು ಸಾಧ್ಯವಾಗಿಲ್ಲ. ಕಬಿನಿಯಲ್ಲಿ 1.50 ಲಕ್ಷ ಕ್ಯೂಸಕ್ ನೀರು ಬಿಡುಗಡೆಯಾಗಿದೆ. ನಂಜನಗೂಡು, ಟಿ ನರಸೀಪುರ , ಹೆಗ್ಗಡೆ ದೇವನಕೋಟೆ ತಾಲೂಕಿನಲ್ಲಿಯೂ ಪ್ರವಾಹ ಪರಿಸ್ಥಿತಿ ಎದುರಾಗಿದೆ. ತಮ್ಮ ಪುತ್ರನನ್ನು ಬದಾಮಿಗೆ ಕಳುಹಿಸಿಕೊಟ್ಟಿದೆ. ಆದರೆ ಈಗ ಅವರ ಕ್ಷೇತ್ರದಲ್ಲಿಯೂ ಪ್ರವಾಹ ಪರಿಸ್ಥಿತಿ ಎದುರಾಗಿದೆ. ಇಂತಹ ಸಂದಿಗ್ದ ಪರಿಸ್ಥಿತಿಯಲ್ಲಿ ಸಾರ್ವಜನಿಕರು ಧಾರಾಳವಾಗಿ ನರೆ ಸಂತ್ರಸ್ತರಿಗೆ ಸ್ಪಂದಿಸಬೇಕು ಎಂದು ಅವರು ಮನವಿ ಮಾಡಿದರು. ಮುಖ್ಯಮಂತ್ರಿ ಪರಿಹಾರ ನಿಧಿಗೆ ಪಕ್ಷದ ಶಾಸಕರು ಒಂದು ತಿಂಗಳ ವೇತನ ನೀಡಲು ತೀರ್ಮಾನಿಸಿದ್ದೇವೆ. ತಾವು ವೈಮಾನಿಕ ಸಮೀಕ್ಷೆ ನಡೆಸಿದರೆ ಪ್ರಯೋಜನವಾಗಲ್ಲ. ಪ್ರವಾಹ ಪೀಡಿತ ಸ್ಥಳಕ್ಕೆ ಭೇಟಿ ನೀಡಬೇಕು, ಸಂತ್ರಸ್ತರ ಅಹವಾಲು ಕೇಳಬೇಕು, ಸಮಸ್ಯೆಗಳನ್ನು ಕಣ್ಣಾರೆ ನೋಡಬೇಕು. ವೈಮಾನಿಕ ಸಮೀಕ್ಷೆ ಬದಲು ಸ್ಥಳ ಪರಿಶೀಲನೆ ನಡೆಸಿದರೆ ಒಳಿತು ಎಂದರು.   ಯಡಿಯೂರಪ್ಪ ಏಕಪಾತ್ರಾಭಿನಯ ನಡೆಸುತ್ತಿದ್ದಾರೆ. ಇಷ್ಟೆಲ್ಲಾ ಸಂಕಷ್ಟದಲ್ಲಿಯೂ ರಾಜ್ಯಕ್ಕೆ ಒಂದೂ ರೂಪಾಯಿ ಬಿಡುಗಡೆ ಆಗಿಲ್ಲ. ಮುಖ್ಯಮಂತ್ರಿ ಯಡಿಯೂರಪ್ಪ ಅಧಿಕಾರಿಗಳನ್ನು ವರ್ಗಾವಣೆ ಮಾಡುವುದರಲ್ಲಿ ನಿರತರಾಗಿದ್ದಾರೆ ಸಿದ್ದರಾಮಯ್ಯ ಟೀಕಿಸಿದರು. ಬಿಜೆಪಿ ಸರ್ಕಾರದ ವಿರುದ್ಧ ಮಾತನಾಡಿದರೆ ಸರಿಯಾಗುವುದಿಲ್ಲ. ನಾವೀಗಲೆ ರಾಜಕೀಯ ಮಾಡುವುದಿಲ್ಲ. ಜನರ ಸಂಕಷ್ಟವನ್ನು ಪರಿಹರಿಸಬೇಕು. ಅದಕ್ಕಾಗಿಯೇ ಸರ್ಕಾರ ಇರುವುದು. ಒಂದು ವೇಳೆ ಜನರ ಕಷ್ಟಕ್ಕೆ ಸರ್ಕಾರ ಸ್ಪಂದಿಸದಿದ್ದರೆ ಅವರು ಜನ ವಿರೋಧಿಯಾಗುತ್ತಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ರಾಹುಲ್ ಗಾಂಧಿ ಒಪ್ಪದ ಕಾರಣ ಅನಿವಾರ್ಯವಾಗಿ  ಸೋನಿಯಾ ಗಾಂಧಿ ಅವರನ್ನೇ ಕಾಂಗ್ರೆಸ್ ಪಕ್ಷದ ಹಂಗಾಮಿ ಅಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ. ಅಧ್ಯಕ್ಷ ಸ್ಥಾನಕ್ಕೆ ಇತರರನ್ನು ಆಯ್ಕೆ ಮಾಡಲು ಕಾಂಗ್ರೆಸ್ ನಾಯಕರಿಗೆ ಧೈರ್ಯವಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಪ್ರಜಾಪ್ರಭುತ್ವದಲ್ಲಿ ಧೈರ್ಯದ ಪ್ರಶ್ನೆ ಬರುವುದಿಲ್ಲ. ಕೇಂದ್ರ ಗೃಹ ಸಚಿವ ಅಮಿತ್ ಷಾ ಅಧ್ಯಕ್ಷರಾಗಿ, ಮಂತ್ರಿ ಆಗಿಲ್ವಾ?.  ಎಲ್ಲರ ಅಭಿಪ್ರಾಯ ರಾಹುಲ್ ಮುಂದುವರೆಯಬೇಕು ಎಂಬುದೇ ಆಗಿತ್ತು. ಆದರೆ ಅವರು ಸೋಲಿನ ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಟ್ಟಿದ್ದಾರೆ. ಇಂತಹ ಸಂದಿಗ್ದ  ಸಮಯದಲ್ಲಿ ಅಧ್ಯಕ್ಷ ಸ್ಥಾನ ವಹಿಸಿಕೊಂಡಿರುವುದಕ್ಕೆ ಸೋನಿಯಾ ಗಾಂಧಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಮುಂದಿನ ಚುನಾವಣೆ, ಪಕ್ಷ ಸಂಘಟನೆ ಮಾಡುವವರೆಗೂ ಸೋನಿಯಾ ಅಧ್ಯಕ್ಷರಾಗಿ ಇರುತ್ತಾರೆ ಎಂದರು. ವಿರೋಧ ಪಕ್ಷದ ನಾಯಕನ ಆಯ್ಕೆ ಹೈಕಮಾಂಡ್ ತೀಮರ್ಾನ ಮಾಡುತ್ತದೆ. ನಾನು ಶಾಸಕಾಂಗ ಪಕ್ಷದ ನಾಯಕ. ವಿಪಕ್ಷ ನಾಯಕನ ಆಯ್ಕೆ ವಿಚಾರ ಪಕ್ಷದ ಅಧ್ಯಕ್ಷರು ಹೈಕಮಾಂಡ್ ಜೊತೆ ಚರ್ಚೆ ಮಾಡಿ ತೀರ್ಮಾನ ಮಾಡುತ್ತಾರೆ ಎಂದು ಪ್ರಶ್ನೆಯೊಂದಕ್ಕೆ ಸಿದ್ದರಾಮಯ್ಯ ಉತ್ತರಿಸಿದರು. 14 ತಿಂಗಳ ಕಾಂಗ್ರೆಸ್ ಜೀತದಾಳಾಗಿ ಕೆಲಸ ಮಾಡಿದ್ದೇನೆ ಎಂಬ ಎಚ್.ಡಿ. ಕುಮಾರಸ್ವಾಮಿ ಹೇಳಿಕೆಯ ಬಗ್ಗೆ ಕೇಳಿದಾಗ, ಈ ಬಗ್ಗೆ ಪ್ರತಿಕ್ರಿಯೆ ಕೊಡಲು ಸಿದ್ದರಾಮಯ್ಯ ನಿರಾಕರಿಸಿದರು.ಮತ್ತೊಮ್ಮೆ ಈ ಬಗ್ಗೆ  ಮಾತನಾಡುತ್ತೇನೆ ಎಂದು ಸಿದ್ದರಾಮಯ್ಯ ಜಾರಿಕೊಂಡರು.