ಡಿ.15,17 ಭುವನೇಶ್ವರದಲ್ಲಿ 22ನೇ ಅಖಿಲ ಭಾರತ ಸಮ್ಮೇಳನ,

December 15, 17 22nd All India Conference at Bhubaneswar

ಡಿ.15,17 ಭುವನೇಶ್ವರದಲ್ಲಿ 22ನೇ ಅಖಿಲ ಭಾರತ ಸಮ್ಮೇಳನ 

       ಬಳ್ಳಾರಿ 12: ಎಐಯುಟಿಯುಸಿ ಬಳ್ಳಾರಿ ಜಿಲ್ಲಾ ಸಮಿತಿಯಿಂದ, ಜಿಲ್ಲಾ ಕಛೇರಿಯಲ್ಲಿ ಎಐಯುಟಿಯುಸಿ ಅಖಿಲ ಭಾರತ ಸಮ್ಮೇಳನದ ಪೋಸ್ಟರ್‌ನ್ನು ಬಿಡುಗಡೆ ಮಾಡಲಾಯಿತು. ರಾಜ್ಯ ಕಾರ್ಯದರ್ಶಿಗಳಾದ ಕಾ.ಸೋಮಶೇಖರ್ ಯಾದಗಿರಿ ಅವರ ಪತ್ರಿಕಾ ಹೇಳಿಕೆಯನ್ನು ಸಹ ಬಿಡುಗಡೆ ಮಾಡಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷರಾದ ಎ.ದೇವದಾಸ್, ಕಾರ್ಯದರ್ಶಿ ಡಾ.ಪ್ರಮೋದ್‌.ಎನ್, ಉಪಾಧ್ಯಕ್ಷರಾದ, ಸೋಮಶೇಖರ ಗೌಡ, ಎ.ಶಾಂತಾ, ಶರ್ಮಾಸ್, ಜಂಟಿ ಕಾರ್ಯದರ್ಶಿ ಸುರೇಶ್ ಹಾಗೂ ವಿವಿಧ ಯುನಿಯನ್‌ನ ಮುಖಂಡರು ಭಾಗವಹಿಸಿದ್ದರು. 

         ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್ (ಎಐಯುಟಿಯುಸಿ) ತನ್ನ 22ನೇ ಅಖಿಲ ಭಾರತ ಸಮ್ಮೇಳನವನ್ನು ಇದೇ ಡಿಸೆಂಬರ್ 15ರಿಂದ 17ರವರೆಗೆ ಒರಿಸ್ಸಾದ ಭುವನೇಶ್ವರದಲ್ಲಿ ಹಮ್ಮಿಕೊಂಡಿದೆ. ಈ ಸಮ್ಮೇಳನದಲ್ಲಿ ದೇಶದ ವಿವಿಧ ರಾಜ್ಯಗಳ ಸ್ಕೀಮ್ ಕಾರ್ಯಕರ್ತೆಯರು ಸೇರಿದಂತೆ ಸಂಘಟಿತ ಹಾಗೂ ಅಸಂಘಟಿತ ವಲಯಗಳ ಸಾವಿರಾರು ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.  

ಎಐಯುಟಿಯುಸಿ 22 ನೇ ಅಖಿಲ ಭಾರತ ಸಮ್ಮೇಳನದ ಅಂಗವಾಗಿ ಡಿಸೆಂಬರ್ 15 ರಂದು ಬೆಳಿಗ್ಗೆ ಒರಿಸ್ಸಾದ ರಾಜಧಾನಿ ಭುವನೇಶ್ವರದಲ್ಲಿ ಪಿಎಂಜಿ ಸ್ಕೆ-್ವರ್ ಹತ್ತಿರ ಬಹಿರಂಗ ಅಧಿವೇಶನವು ಜರುಗಲಿದ್ದು, ಇದರ ಅಧ್ಯಕ್ಷತೆಯನ್ನು ಎಐಯುಟಿಯುಸಿ ಅಖಿಲ ಭಾರತ ಅಧ್ಯಕ್ಷರಾದ ಕಾಽ ಕೆ ರಾಧಾಕೃಷ್ಣ ಅವರು ವಹಿಸಲಿದ್ದಾರೆ. ಇತರ ರಾಷ್ಟ್ರೀಯ ನಾಯಕರಾದ ಕಾಽ ಸತ್ಯವಾನ್, ಕಾಽ ಸ್ವಪನ್ ಘೋಷ್, ಕಾಽ ಅರುಣ್ ಕುಮಾರ್ ಸಿಂಗ್ ಹಾಗೂ ಪ್ರಧಾನ ಕಾರ್ಯದರ್ಶಿಗಳಾದ ಕಾಽ ಶಂಕರ್ ದಾಸ್ ಗುಪ್ತ ಅವರು ಭಾಷಣಕಾರರಾಗಿ ಮಾತನಾಡಲಿದ್ದಾರೆ. ಒರಿಸ್ಸಾ ಎಐಯುಟಿಯುಸಿ ರಾಜ್ಯ ನಾಯಕರಾದ ಕಾಽ ಜೈಸನ್ ಮೆಹೆರ್ ಸ್ವಾಗತ ಭಾಷಣ ಮಾಡಲಿದ್ದಾರೆ.  

ಡಿಸೆಂಬರ್ 15 ರಂದು ಸಂಜೆ ಹಾಗೂ ನಂತರದ ಎರಡು ದಿನಗಳ ಕಾಲ ರಾಯಲ್ ರೆಸಾರ್ಟ್‌ ಆವರಣದಲ್ಲಿ ಪ್ರತಿನಿಧಿ ಅಧಿವೇಶನ ಜರುಗಲಿದ್ದು, ಈ ಅಧಿವೇಶನದಲ್ಲಿ ದುಡಿಯುವ ವರ್ಗದ ಸಮಸ್ಯೆಗಳ ಕುರಿತು ಚರ್ಚಿಸಲಾಗುವುದಲ್ಲದೆ, ಆಳುವ ವರ್ಗವು ದೇಶದ ಏಕಸ್ವಾಮ್ಯ ಕಾರ​‍್ೊರೇಟ್ ಮನೆತನಗಳ ಹಿತಾಸಕ್ತಿಯಲ್ಲಿ ದೇಶದ ಸಾರ್ವಜನಿಕ ಉದ್ದಿಮೆಗಳ ಸಾರಾಸಗಟಾಗಿ ಖಾಸಗೀಕರಣಗೊಳಿಸುತ್ತಿರುವುದು, ದುಡಿಯುವ ಜನರ ಹಕ್ಕುಗಳ ಹರಣದ ವಿರುದ್ಧ ಹಾಗೂ ಕನಿಷ್ಠ ವೇತನದ ಹೆಚ್ಚಳ, ಪಿಎಫ್ ಹಾಗೂ ಇಎಸ್‌ಐ ಗಳಂಥ ಸಾಮಾಜಿಕ ಭದ್ರತೆಗಳನ್ನು ಬಲಪಡಿಸುವ ಕುರಿತು ವಿಶೇಷ ಗೊತ್ತುವಳಿಗಳನ್ನು ಕೈಗೊಳ್ಳಲಿದೆ. ಮುಂಬರುವ ದಿನಗಳಲ್ಲಿ ಕಾರ್ಮಿಕ ವರ್ಗ ಕೈಗೊಳ್ಳಬೇಕಾದ ಚಳುವಳಿಯ ಬೇಡಿಕೆಗಳ ಪಟ್ಟಿ (ಚಾರ್ಟರ್ ಆಫ್ ಡಿಮ್ಯಾಂಡ್ಸ್‌) ಅನ್ನು ಸಹ ಪ್ರತಿನಿಧಿ ಅಧಿವೇಶನ ರೂಪಿಸಲಿದೆ.  

ಈ ಸಮ್ಮೇಳನದ ವಿಶೇಷ ಆಹ್ವಾನಿತರಾಗಿ ಎಸ್‌ಯುಸಿಐ ಕಮ್ಯುನಿಸ್ಟ್‌ ಪಕ್ಷದ ಪ್ರಧಾನ ಕಾರ್ಯದರ್ಶಿಗಳಾದ ಕಾಮ್ರೇಡ್ ಪ್ರವಾಶ್ ಘೋಷ್ ರವರು ಪ್ರತಿನಿಧಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಈ ಸಮ್ಮೇಳನದ ಪ್ರತಿನಿಧಿ ಅಧಿವೇಶನದ ಉದ್ಘಾಟನಾ ಸಮಾರಂಭದಲ್ಲಿ ದೇಶದ ವಿವಿಧ ಕೇಂದ್ರೀಯ ಕಾರ್ಮಿಕ ಸಂಘಟನೆಗಳು ಹಾಗೂ ವಿವಿಧ ದೇಶಗಳಿಂದ ಕಾರ್ಮಿಕ ಸಂಘಟನೆಗಳ ವಿವಿಧ ಮುಖಂಡರು ಸೋದರ ಪ್ರತಿನಿಧಿಗಳಾಗಿ ಆಗಮಿಸಲಿದ್ದಾರೆ. ಈ ಅಖಿಲ ಭಾರತ ಸಮ್ಮೇಳನಕ್ಕೆ ಕರ್ನಾಟಕದಿಂದ ವಿವಿಧ ವಲಯಗಳ ಸುಮಾರು 200 ಕಾರ್ಮಿಕ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.