ಕೊರೋನಾ ನಿಯಂತ್ರಣ ಕರ್ತವ್ಯದಲ್ಲಿದ್ದ ಆರೋಗ್ಯ ನಿರೀಕ್ಷಕ ಸಾವು

ಕೋಲಾರ, ಏ.6,  ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಕರ್ತವ್ಯದಲ್ಲಿದ್ದ ಆರೋಗ್ಯ  ನಿರೀಕ್ಷಕರೊಬ್ಬರು ಎದೆ ನೋವಿನಿಂದ ಕುಸಿದು ಬಿದ್ದು ಮೃತಪಟ್ಟಿರುವ ಘಟನೆ ಜಿಲ್ಲೆಯ  ಮುಳಬಾಗಿಲು ತಾಲೂಕಿನ ಹೆಬ್ಬಣಿ ಚೆಕ್ ಪೋಸ್ಟ್ ಬಳಿ ಭಾನುವಾರ ರಾತ್ರಿ  ನಡೆದಿದೆ.45 ವರ್ಷದ ಸರವಣಂ ಮೃತ ಪಟ್ಟ ಕಿರಿಯ ಆರೋಗ್ಯ ನಿರೀಕ್ಷಕ. ಮೃತರು ಮುಳಬಾಗಿಲು ತಾಲೂಕಿನ ಊರುಕುಂಟೆ ಮಿಟ್ಟೂರು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದರು‌. ರಾಜ್ಯದಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಾಗಿನಿಂದಲೂ ಅವರು ಮಿಟ್ಟೂರು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೊರೊನಾ ತಡೆ ಕರ್ತವ್ಯದಲ್ಲಿದ್ದರು.ಭಾನುವಾರ  ರಾತ್ರಿ ಕೂಡ ಕರ್ತವ್ಯದಲ್ಲಿದ್ದ ಅವರಿಗೆ  ಎದೆನೋವು ಕಾಣಿಸಿಕೊಂಡ ಪರಿಣಾಮ ಕುಸಿದು  ಬಿದ್ದಿದ್ದಾರೆ. ತಕ್ಷಣವೇ ಅವರನ್ನು ಆಸ್ಪತ್ರೆಯಲ್ಲಿ ಪರೀಕ್ಷೆ ಮಾಡಲಾಗಿತ್ತು. ಆದರೆ,  ಅಷ್ಟರಲ್ಲಿಯೇ ಅವರು ಕೊನೆಯುಸಿರೆಳೆದಿದ್ದಾರೆ ಎಂದು  ತಿಳಿದು ಬಂದಿದೆ.