ಹಬ್ಬದ ವಿಷಯವಾಗಿ ಏನಾದರೂ ಬರೆಯೋಣ ಎಂದು ಯೋಚಿಸಿದೆ. ಯಾಕೋ ಮೊನ್ನೆ ನಮ್ಮನ್ನಗಲಿದ ಪುನೀತ್ ಸರ್ ಕಣ್ಣೆದುರು ಬಂದು ಈ ಹಬ್ಬದ ಸಂತೋಷ ಎನ್ನುವದು ಉಳಿಯುತ್ತಿಲ್ಲ ಹಾಗಾಗಿ ಅಗಲಿದ ಆ ಚೇತನಕ್ಕೆ ಒಂದು ಮೌನ ಗೌರವ ಸೂಚಿಸಿ ಬಿಡುತ್ತೇನೆ.
ಮುಂದಿನ ದಿನಗಳಲ್ಲಿ ನಾನು ಫಫರ್ೆಕ್ಟ್ ಆಗಿ ಬದುಕಿ ಬಿಡುತ್ತೇನೆ ಎಂದುಕೊಳ್ಳುವಾಗಲೆಲ್ಲ ಪುನೀತ್ ರಾಜಕುಮಾರ ನೆನಪಾಗಿಯೇ ಆಗುತ್ತಾರೆ. ಮನುಷ್ಯ ಹುಟ್ಟಿನಿಂದ ಕೊನೆಯವರೆಗಿನ ಪ್ರತೀ ಕ್ಷಣವೂ ಅನಿಶ್ಚಿತತೆಯಲ್ಲೇ ಕಳೆಯುತ್ತಾನೆ. ಯಾವ ಕ್ಷಣಕ್ಕೆ ಯಾವ ರೂಪದಲ್ಲಿ ಸಾವು ಎದುರಾಗುತ್ತದೆ ಎನ್ನುವದು ಯಾರಿಗೂ ತಿಳಿದಿಲ್ಲ. ಜ್ಯೋತಿಷ್ಯವನ್ನು ಹೇಳುವ ಆ ಮನುಷ್ಯನಿಗೂ ತನ್ನ ಸಾವಿನ ಬಗ್ಗೆ ತಿಳಿದಿರುವುದಿಲ್ಲ. ಹಾಗಾಗಿ ಮನುಷ್ಯ ಸಾವು ಎನ್ನುವದು ತನ್ನಿಂದ ದೂರವಿದೆ ಎಂದು ನಗುತ್ತ ಇರುತ್ತಾನೆ, ಸ್ವಾಥರ್ಿಯಾಗುತ್ತಾನೆ, ದುರಾಸೆ ಪಡುತ್ತಾನೆ, ಏನನ್ನೋ ಸಾಧಿಸಬೇಕು ಎನ್ನುವ ಹಂಬಲ ಪಡುತ್ತಾನೆ, ಗುರಿಯತ್ತ ನಡೆಯಲಾರಂಭಿಸುತ್ತಾನೆ. ಸುಖ ದುಃಖ ಎರಡನ್ನು ತನ್ನ ಎರಡು ಬುಜಗಳ ಮೇಲೆ ಹೊತ್ತು ನಡೆಯಲಾರಂಭಿಸಿ ಬಿಟ್ಟಿರುತ್ತಾನೆ. ಆದರೆ ತನ್ನ ಹುಟ್ಟಿನ ಜೊತೆ ತನ್ನ ಸಾವನ್ನು ಹುಟ್ಟಿಸಿ ಕರೆದುಕೊಂಡು ಬಂದಿದ್ದೇನೆ ಎನ್ನುವ ಸತ್ಯ ಮಾತ್ರ ಅರ್ಥವಾಗುವುದೇ ಇಲ್ಲ. ಹಾಗೇನಾದರೂ ಯೋಚನೆ ಬರುವುದಾದರೆ ನಮ್ಮ ಖಾಸಗಿಯವರು ಅಥವಾ ಸಮಾಜದಲ್ಲಿ ಎತ್ತರದಲ್ಲಿ ನಿಂತವರು ದೂರವಾದಾಗ ಮಾತ್ರ. ಆದರೆ ಅದು ಸ್ಮಶಾನ ಮೌನ.
ಸ್ಮಶಾನ ಮೌನ ಅಂದರೆ ಒಬ್ಬ ವ್ಯಕ್ತಿಯು ಸತ್ತ ನಂತರ ವಿಧಿವಿಧಾನಗಳು ಮುಗಿಸಿ ಚಿತೆಗೆ ಬೆಂಕಿಯನ್ನು ಇಡುವಲ್ಲಿಗೆ ಅಥವಾ ಹೂಳುವಲ್ಲಿಗೆ ದುಃಖ ಮುಗಿಯುತ್ತದೆ. ಅಷ್ಟರಲ್ಲಿ ಸಾಕಷ್ಟು ಅತ್ತು, ನೋವನ್ನು ಬರಮಾಡಿಕೊಂಡು ಸಂಕಟ ಪಟ್ಟಾಗಿರುತ್ತದೆ. ಚಿತೆಯ ಬೆಂಕಿ ಗಾಢವಾಗಿ ಉರಿಯುತ್ತಿದ್ದಂತೆ ತಿರುಗಿ ಹೊರಡುತ್ತೇವೆ. ಮನದಲ್ಲಿ ದುಃಖ ಮಾಯವಾಗುತ್ತದೆ ಎಂದು ಹೇಳುತ್ತಿಲ್ಲ. ಆದರೆ ತನ್ನವರು ಇಲ್ಲ ಎಂದು ಹಣೆ ಬಡಿದು ಗೋಳಾಡುವ ಹಂತವನ್ನು ಬಿಟ್ಟಿರುತ್ತೇವೆ. ನಿಧಾನಕ್ಕೆ ಹೋದವರ ಒಳ್ಳೆಯ ಗುಣವನ್ನು ಮಾತನಾಡಲು ಆರಂಭಿಸುತ್ತೇವೆ. ಮಡದಿ ಮಕ್ಕಳಿಗೆ ಆ ನೋವು ಭರಿಸಲಾಗದ್ದು. ಆದರೆ ಹತ್ತಿರ ಎನ್ನಿಸಿಕೊಂಡವರಿಗೆ ಒಂದೆಳೆಯಷ್ಟು ಆ ಅಗಲಿಕೆಯ ನೋವು ಕಣ್ಣೀರಾಗಿ ಹೋಗುತ್ತದೆ. ಮತ್ತೆ ಮನೆಗೆ ಬರುವಷ್ಟರಲ್ಲಿ ಸಮಾಧಾನ ಎನ್ನುವದು ತಕ್ಕ ಮಟ್ಟಿಗೆ ಆವರಿಸುತ್ತದೆ. ಎರಡು ದಿನಗಳ ನಂತರ ಸಹಜ ಸ್ಥಿತಿಗೆ ಬರುತ್ತದೆ.
ಈ ಸ್ಮಶಾನದಲ್ಲಿ ಒಂದಷ್ಟು ಹೊತ್ತು ನಿಂತಾಗ ಬರುವ ಯೋಚನೆಗಳು ಇವೆಯಲ್ಲ ಅದು ನಾವು ವಿರಾಗಿಯಾಗಿ ಬಿಡಬೇಕು ಎನ್ನಿಸುತ್ತದೆ. ಈ ಜೀವನ ಇಷ್ಟೆ. ನಾವು ಇರುವ ಮೂರು ದಿನದಲ್ಲಿ ಒಳಿತನ್ನೇ ಮಾಡಿ ಬಿಡಬೇಕು. ನಮ್ಮಿಂದ ಏನೆಲ್ಲ ಸಾಧ್ಯವೋ ಅದೆಲ್ಲವನ್ನು ಬೇಗನೇ ಮುಗಿಸಬೇಕು. ನಮ್ಮ ಜವಬ್ದಾರಿಗಳನ್ನು ಹೋರುತ್ತಲೇ ನಮ್ಮ ನಂತರದವರಿಗೆ ತಿಳಿಸಿ ಹೇಳಿಡಬೇಕು ಹೀಗೆ ಅನೇಕ ಯೋಚನೆಗಳು ಮುತ್ತಿಕೊಳ್ಳುತ್ತದೆ. ಅದೇ ಮನೆಗೆ ಬಂದು ತಲೆಯ ಮೇಲಿಂದ ಸ್ನಾನ ಮಾಡುವಷ್ಟರಲ್ಲಿ ಮತ್ತೆ ಸಾಂಸಾರಿಕ ಜಂಜಾಟಗಳಿಗೆ ಸಿಲುಕಿ ಹಿಂದಿನ ಜೀವನಕ್ಕೆ ಮರಳಿಬಿಡುತ್ತೇವೆ.
ಕೆಲವು ತಿಂಗಳುಗಳ ಹಿಂದೆ ಪರಿಚಯಸ್ಥರೊಬ್ಬರು ತಮ್ಮ ಮಡದಿ ಇಬ್ಬರು ಪುತ್ರರನ್ನು ಬಿಟ್ಟು ದೇವಲೋಕಕ್ಕೆ ನಡೆದೇ ಬಿಟ್ಟರು. ದೊಡ್ಡ ಮಗ ಇಂಜೀನೀಯರ್. ಎರಡನೆಯವನು ಪಿಯುಸಿ ಮೊದಲ ವರ್ಷ. ಇಬ್ಬರೂ ವಯಸ್ಸಿನ ಪ್ರಕಾರ ದೊಡ್ಡವರಾಗಿದ್ದಾರೆ. ಆದರೆ ಅವರ ಹೆಗಲಿಗೆ ಯಾವ ಜವಬ್ದಾರಿಯೂ ಬೀಳದೆ ಇನ್ನು ಚಿಕ್ಕ ಮಕ್ಕಳಂತೆ ಅಪ್ಪ ಅಮ್ಮನ ಆಸರೆಯಲ್ಲಿ ನಿಶ್ಚಿಂತರಾಗಿದ್ದವರು. ಅಪ್ಪ ತೀರಿ ಹೋದ ಎಂದಾಕ್ಷಣ ಅವರಿಬ್ಬರ ಹೆಗಲಿಗೆ ಬಿದ್ದ ಜವಬ್ದಾರಿ ನಿಭಾಯಿಸಲಾಗದೇ ಕಂಗಾಲಾದರು. ಮನೆ, ತೋಟದ ದೇಖರಿಕೆ, ಆಸ್ತಿ ಪತ್ರಗಳ ನಿರ್ವಹಣೆ, ಮನೆಗೆ ಬಂದು ಹೋಗುವವರ ಊಟೋಪಚಾರದ ವ್ಯವಸ್ಥೆ ಯಾವುದೊಂದು ಬಗೆಹರಿಯದಂತಾಗಿ ಆಕಾಶವೇ ತಲೆಯ ಮೇಲೆ ಬಿದ್ದಂತೆ ಕುಸಿದು ಕುಳಿತರು. ಆ ಮಕ್ಕಳ ಅಜ್ಜ ಮತ್ತು ಮಾವ ಸುಮಾರು ಆರುತಿಂಗಳ ಕಾಲ ಮಕ್ಕಳಿಗೆ ಎಲ್ಲ ವ್ಯವಹಾರವನ್ನು ಕಲಿಸಿದ ನಂತರ ಅವರ ಮನೆಗೆ ತೆರಳುವಂತಾಗಿತ್ತು. ಆಗೆಲ್ಲ ಅನ್ನಿಸುತ್ತದೆ ಈಗ ನಾವು ಮಕ್ಕಳಿಗೆ ಮುದ್ದಿನ ಹೆಸರಿನಲ್ಲಿ, ಶಿಕ್ಷಣ ಕಲಿಯುವ ಮಕ್ಕಳು ಎನ್ನುವದಕ್ಕಾಗಿ ಮನೆಯ ಜವಬ್ದಾರಿಯನ್ನು ವಹಿಸುತ್ತಿಲ್ಲ. ಸಣ್ಣ ಪುಟ್ಟ ವ್ಯವಹಾರಗಳನ್ನು ಸಹ ಕಲಿಸುತ್ತಿಲ್ಲ. ಹೊಲ, ಗದ್ದೆ, ತೋಟಕ್ಕೆ ಯಾವ ಸಮಯದಲ್ಲಿ ಯಾವ ಗೊಬ್ಬರ ಹಾಕಬೇಕು ಎನ್ನುವ ಸಣ್ಣ ಕಲ್ಪನೆಯೂ ಇಲ್ಲದೇ ಹೋದರೆ ಮುಂದಿನ ದಿನದಲ್ಲಿ ಒಂದಾನೂವೇಳೆ ಏಕಾಏಖಿ ಜವಬ್ದಾರಿ ಹೋರುವ ಪ್ರಸಂಗ ಬಂದರೆ ಆಗ ತಡೆದುಕೊಳ್ಳುವುದು ತುಂಬಾ ಕಷ್ಟವಾಗಿ ಬಿಡುತ್ತದೆ.
ಸಾವುಗಳು ನಮ್ಮೊಳಗೊಂದು ಮೌನವನ್ನು ಸೃಷ್ಟಿಸಿ ಬಿಡುತ್ತದೆ. ಆ ಮೌನದಲ್ಲಿ ಮಂಥನಗಳು ನಡೆಯುತ್ತವೆ. ಸತ್ತ ವ್ಯಕ್ತಿಯ ಗುಣಗಳು ಹೇಗಿದ್ದವು. ನಾವು ಹೇಗಿರಬೇಕು ಎನ್ನುವ ಕಿಡಿಯೊಂದು ಹಚ್ಚುತ್ತದೆ. ಅದೊಂದು ಕಿಡಿ ಅದೆಷ್ಟೋ ಸಲ ನಮ್ಮ ಜೀವನವನ್ನು ಬದಲಾಯಿಸಿಬಿಡುವುದು ಉಂಟು.
ನಮ್ಮ ಮರಣಕ್ಕೂ ಮುನ್ನ ಕೆಲವೊಂದು ಸೂಚನೆಗಳು ಸಿಗುತ್ತವೆ. ಆದರೆ ಅದನ್ನು ನಾವು ಸೂಕ್ಷ್ಮವಾಗಿ ಗಮನಿಸಿರುವುದಿಲ್ಲ ಎಂದು ಶಿವಪುರಾಣ ಹೇಳುತ್ತದೆ. ಮರಣವೆಂದರೆ ಅಂತ್ಯವಾಗುವುದು, ಈ ಜಗತ್ತಿನಲ್ಲಿ ಇಲ್ಲವಾಗುವುದು, ದೇಹ ಆತ್ಮ ಬೇರೆಯಾಗುವುದು ಹೀಗೆ ಹೇಳುತ್ತೇವೆ. ಆದರೆ ಈ ಮರಣವು ಜೀವಿಯೊಂದರಲ್ಲಿ ಇರುವ ಎಲ್ಲಾ ಜೈವಿಕ ಕಾರ್ಯಗಳು ಮುಕ್ತಾಯಗೊಳ್ಳುವುದು ಹೌದು.
'ಮರಣವೆಂದರೆ ಸರ್ವನಾಶವಲ್ಲ. ಒಂದರಿಂದ ಇನ್ನೊಂದರ ಮಾಪರ್ಾಡು. ಮರಣವು ನವಜನ್ಮದ ತಾಯಿ. ನವ ಜೀವನದ ಬಸಿರು. ಮುಂದುವರೆದ ಜೀವನಕ್ಕೆ ಹೊಸ ಏಪರ್ಾಡು. ಮರಣದಿಂದ ಹಳೆಯ ಭೂಮಿಕೆಯ ಸೀಮೆ ದಾಟಿ ಹೊಸ ಸೀಮೆಯಲ್ಲಿ ಕಾಲಿರಿಸುವ ಬದಲಾವಣೆ' ಎಂಬುದಾಗಿ ಶರಣರೊಬ್ಬರು ಹೇಳುತ್ತಾರೆ.
ಮನುಷ್ಯ ಎಷ್ಟೆಲ್ಲ ಬೆಳೆದರೂ, ಏನೆಲ್ಲ ಸಾಧಿಸಿದರೂ, ಸಾಕಷ್ಟು ಬಂಧು ಬಾಂಧವರು, ಅಭಿಮಾನಿಗಳು ಸಂಸಾರವನ್ನು ಹೊಂದಿದ್ದರೂ ವೈಜ್ಞಾನಿಕವಾಗಿ, ವೈಚಾರಿಕವಾಗಿ ಪ್ರಕೃತಿಗೆ ವಿರುದ್ಧವಾಗಿ ಬದುಕುವಗೋಸ್ಕರ ಏನೆಲ್ಲ ಮಾಡಿದ್ದರೂ ಸಾವೆಂಬುದೊಂದು ವಿಸ್ಮಯ. ಈ ಸಾವು ಎಂದರೇನು ಅಂದು ಹೇಳುವುದು ಇರಲಿ, ಸರಿಯಾದ ಒಂದು ವ್ಯಾಖ್ಯಾನವನ್ನು ಕೊಡಲು ನಮ್ಮಿಂದ ಸಾಧ್ಯವಾಗಿಲ್ಲ. ನಮ್ಮ ಜೊತೆ ನೆನಪುಗಳನ್ನು ಇರಿಸಿಕೊಳ್ಳಬಹುದೇ ಹೊರತು ಆ ವ್ಯಕ್ತಿಯಾಗಲಿ, ಆ ವ್ಯಕ್ತಿಯ ದೇಹವಾಗಲಿ, ಅಥವಾ ವ್ಯಕ್ತಿಯ ಆತ್ಮವನ್ನಾಗಲಿ ಇರಿಸಿಕೊಳ್ಳಲು ಸಾಧ್ಯವೇ ಇಲ್ಲ. ಒಂದು ಸಣ್ಣ ಮುನ್ಸುಚನೆಯನ್ನು ಕೊಡದೇ ಬರುವ ಸಾವು ಕಾಲಾತೀತ, ಪಕ್ಷಾತೀತ, ಜಾತ್ಯಾತೀತ.