ಮೈಸೂರು, ಆ.25 ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿದ್ದು, ಮೊದಲ ಹಂತದ ಗಜಪಡೆ ನಾಳೆ ಅರಮನೆಗೆ ಆಗಮಿಸಲಿವೆ. ಈ ನಿಟ್ಟಿನಲ್ಲಿ ಅರಮನೆ ಆವರಣದಲ್ಲಿ ಗಜಪಡೆ ಸ್ವಾಗತಕ್ಕೆ ಸಂಪೂರ್ಣ ಸಿದ್ಧತೆ ಮಾಡಿಕೊಳ್ಳಲಾಗಿದೆ. ಈಗಾಗಲೇ ಗಜಪಡೆಗೆ ಹಾಗೂ ಮಾವುತರಿಗೆ ತಾತ್ಕಾಲಿಕ ಶೆಡ್ ನಿರ್ಮಾಣ ಮಾಡಲಾಗುತ್ತಿದ್ದು, ಇಂದು ಬೆಳಿಗ್ಗೆಯಿಂದಲ್ಲೆ ಶೆಡ್ ನಿರ್ಮಾಣ ಕಾರ್ಯ ಆರಂಭವಾಗಿದೆ. ಮೊದಲ ಹಂತದ ಗಜಪಡೆ ಹಾಗೂ ಮಾವುತರಿಗೆ ಪ್ರತ್ಯೇಕವಾಗಿ ತಾತ್ಕಾಲಿಕ ಶೆಡ್ ನಿರ್ಮಾಣ ಮಾಡಲಾಗುತ್ತಿದ್ದು, ಬರುವ ಮಾವುತರ ಮಕ್ಕಳಿಗೆ ತಾತ್ಕಾಲಿಕ ಟೆಂಟ್ ಶಾಲೆ ಹಾಗೂ ಆಸ್ಪತ್ರೆ ನಿರ್ಮಾಣ ಮಾಡಲಾಗುತ್ತಿದೆ. ಈಗಾಗಲೇ ಅಶೋಕಪುರಂನ ಅರಣ್ಯಭವನದಲ್ಲಿ ಬಿಡುಬಿಟ್ಟಿರುವ ಮೊದಲ ಹಂತದ ಗಜಪಡೆಗೆ ನಾಳೆ ಅದ್ದೂರಿ ಸ್ವಾಗತ ನೀಡಲು ಅರಮನೆ ಮಂಡಳಿ ಸಜ್ಜುಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹುಣಸೂರು ತಾಲೂಕಿನ ವಿ?ರನಹೊಸಳ್ಳಿಯ ನಾಗರಹೊಳೆ ಅಭಯಾರಣ್ಯದ ಗೇಟ್ನಲ್ಲಿ ಅರ್ಜುನ, ವಿಜಯ, ಅಭಿಮನ್ಯು, ವರಲಕ್ಷ್ಮಿ, ಧನಂಜಯ, ಈಶ್ವರ ಆನೆಗಳ ಪಾದ ಪೂಜೆ ಮಾಡುವುದರೊಂದಿಗೆ ದಸರಾ ಹಬ್ಬದ ಚಟುವಟಿಕೆಗಳಿಗೆ ಆ.22ರಂದು ಅಧಿಕೃತವಾಗಿ ಚಾಲನೆ ನೀಡಲಾಗಿತ್ತು. ಸೋಮವಾರ ನಗರಕ್ಕೆ ಆಗಮಿಸಲಿರುವ ಗಜಪಡೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಹಾಗೂ ಜಿಲ್ಲಾಡಳಿತ ನಾಳೆ ಬರಮಾಡಿಕೊಳ್ಳಲಿದೆ.