ದತ್ತನ ಪಾದುಕೆಯ ದರ್ಶನ ಭಾಗ್ಯ ಸಧ್ಯಕಿಲ್ಲ

ಕಲಬುರಗಿ, ಜೂ.8,ನಾಡಿನ ಪ್ರಸಿದ್ಧ ಶಕ್ತಿಪೀಠ ಗಾಣಗಾಪುರದಲ್ಲಿ ದತ್ತಪಾದುಕೆಗಳ ದರ್ಶನ ಹಾಗೂ ಪೂಜೆ ಆರಂಭಿಸದಿರಲು ಜಿಲ್ಲಾಡಳಿತ ನಿರ್ಧರಿಸಿದೆ.ಈ‌ ಮೊದಲು ರಾಜ್ಯ ಸರ್ಕಾರದ ಆದೇಶದ ಅನ್ವಯ ಸೋಮವಾರದಿಂದ ಜಿಲ್ಲೆಯ ಅಫಜಲಪುರ ತಾಲೂಕಿನ ಗಾಣಗಾಪುರದ ದತ್ತಾತ್ರೇಯ ಪಾದುಕೆಯ ದರ್ಶನ ಭಾಗ್ಯ ಕಲ್ಪಿಸಲು ಸಕಲ ಸಿದ್ಧತೆ ನಡೆಸಲಾಗಿತ್ತು. ಆದರೆ, ಗಾಣಗಾಪುರಕ್ಕೆ ದತ್ತಾತ್ರೇಯ ನ ದರ್ಶನ ಪಡೆಯಲು ರಾಜ್ಯ‌ ಸೇರಿ ಮಹಾರಾಷ್ಟ್ರದಿಂದ ಹೆಚ್ಚಿನ ಭಕ್ತರು ಆಗಮಿಸುತ್ತಾರೆ. ಅಲ್ಲದೇ,ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಅತಿ ಹೆಚ್ಚಿರುವುದರಿಂದ ಈ ಸೋಂಕು ಇನ್ನಷ್ಟು ಹೆಚ್ಚು ಹರಡುವ ಸಂಭವಿರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಗಾಣಗಾಪುರದಲ್ಲಿ ದೇವಾಲಯ ತೆರೆಯದಿರಲು ಜಿಲ್ಲಾಡಳಿತ ನಿರ್ಧರಿಸಿದೆ.

ಇಂದು ಜಿಲ್ಲೆಯಲ್ಲಿ ಬಹುತೇಕ ಎಲ್ಲಾ ದೇಗುಲಗಳು  ತೆರೆದಿವೆ. ಆದರೆ,  ಗಾಣಗಾಪುರ ದತ್ತಾತ್ರೇಯ ದೇವಸ್ಥಾನ ದರ್ಶನಕ್ಕೆ ಮಾತ್ರ ಅವಕಾಶ ಕಲ್ಪಿಸಿಲ್ಲ.ಕಲಬುರಗಿ ನಗರದ ಶರಣಬಸವೇಶ್ವರ ದೇವಸ್ಥಾನ ತೆರೆಯಲಾಗಿದ್ದು, ಬೆಳಿಗ್ಗೆಯಿಂದ ದರ್ಶನ ಪಡೆಯಲು ಭಕ್ತರ ದಂಡೇ ಹರಿದು ಬರುತ್ತಿದೆ.ಕೊರೊನಾ ಸೋಂಕು ಭೀತಿ‌ ಹಿನ್ನೆಲೆಯಲ್ಲಿ  ರಾಜ್ಯ ಸರ್ಕಾರದ ನಿರ್ದೇಶನದಂತೆ ದೇವಸ್ಥಾನದಲ್ಲಿ ಭಕ್ತರಿಗೆ ಮಾಸ್ಕ್ ಕಡ್ಡಾಯಗೊಳಿಸಿದ್ದು , ಸಾಮಾಜಿಕ ಅಂತರಕ್ಕೆ ವ್ಯವಸ್ಥೆ  ಕಲ್ಪಿಸಲಾಗಿದೆ.ಪ್ರಮುಖವಾಗಿ ದರ್ಶನಕ್ಕೆ ಬರುವ ಭಕ್ತರು ಕಾಯಿ ಕರ್ಪೂರ ತರುವಂತಿಲ್ಲ . ಅಲ್ಲದೇ, ದೇವಸ್ಥಾನದಲ್ಲಿನ ತೀರ್ಥ ಪ್ರಸಾದ ಪಡೆಯುವಂತೆಯೂ  ಇಲ್ಲ ಎಂಬ ನಿಯಮ‌ ಜಾರಿ ಮಾಡಲಾಗಿದೆ.