ಒಣಗುತ್ತಿರುವ ಬೆಳೆ; ಕಂಗಾಲಾದ ರೈತರುವಿಶೇಷ ವರದಿ: ಕುಮಾರ ರೈತ

ಬೆಂಗಳೂರು, ಫೆ.15 :  ಕಾವೇರಿ ನದಿ ಒಡ್ಡಿನ ನಾಲೆಗಳ ಅಚ್ಚುಕಟ್ಟು ಪ್ರದೇಶದ ಕಬ್ಬು, ಭತ್ತ, ತೆಂಗು ಬಾಳೆ ಮತ್ತು ತರಕಾರಿ ಬೆಳೆಗಳು ನೀರಿಲ್ಲದೇ ಒಣಗುತ್ತಿವೆ. ಬೆಳೆ ದಕ್ಕದಿದ್ದರೆ ಮುಂದಿನ ಪಾಡೇನು ಎಂದು ರೈತರು  ಕಂಗಾಲಾಗಿದ್ದಾರೆ. ಸರ್ಕಾರ ನೆರವಿಗೆ ಧಾವಿಸದಿರುವುದು ಇವರ ದುಗುಡವನ್ನು ಮತ್ತಷ್ಟು ಹೆಚ್ಚಿಸಿ ವಿಷಕೊಡಿ ಎಂಬ ಮಟ್ಟಕ್ಕೆ ಸ್ಥಿತಿ ಉಲ್ಬಣಿಸಿದೆ.ಕೆ.ಆರ್.ಎಸ್ ಜಲಾಶಯದ ನೀರಿನ ಮಟ್ಟ ಉತ್ತಮವಾಗಿದೆ. ಫೆಬ್ರುವರಿ ತಿಂಗಳಿನಲ್ಲಿಯೂ ಇಷ್ಟೊಂದು ಉತ್ತಮ ಮಟ್ಟ ಕಾಯ್ದುಕೊಂಡಿರುವುದು ಇದೇ ಮೊದಲು. ನೀರಿದೆ ಎಂಬ ಭರವಸೆಯಿಂದ ಕಾವೇರಿ ಒಡ್ಡಿನ ನಾಲೆಗಳಾದ ಬಂಗಾರದೊಡ್ಡಿ, ವಿರಿಜಾ, ಚಿಕ್ಕದೇವರಾಯಸಾಗರ ನಾಲೆಗಳ ಅಚ್ಚುಕಟ್ಟು ಪ್ರದೇಶದ ರೈತರು ಭತ್ತದ ಬಿತ್ತನೆ ಮಾಡಿದ್ದರು. ಈಗ ಪೈರುಗಳು ಬೆಳೆದು ನಿಂತಿದ್ಸು ಅವುಗಳನ್ನು ಉಳಿಸಿಕೊಳ್ಳಲು ನೀರಿನ ಅವಶ್ಯಕತೆ ಇದೆ. ಆದರೆ ಸಂಬಂಧಿಸಿದ ಅಧಿಕಾರಿಗಳು ನೀರು ಹಾಯಿಸಲು ನಿರಾಕರಿಸುತ್ತಿದ್ದಾರೆ. ಇದರಿಂದ ಭತ್ತದ ಪೈರುಗಳ ಜತೆಗೆ ಕಟಾವಿನ ಹಂತಕ್ಕೆ ಬಂದಿರುವ ಕಬ್ಬು ಸಹ ಒಣಗುತ್ತಿದೆ. ನೀರು ಒದಗಿಸಲು ಬೇರೆ ಮೂಲಗಳೇ ಇಲ್ಲದ ಕಾರಣ ಅಪಾರ ಬೆಲೆ ಬಾಳುವ ಬೆಳೆಗಳು ದಕ್ಕದೇ ಹೋಗಬಹುದು ಎಂಬ ಆತಂಕ ಎದುರಾಗಿದೆ. ಶ್ರೀರಂಗಪಟ್ಟಣ ಸನಿಹದ ಬಂಗಾರದೊಡ್ಡಿ ನಾಲೆ ವ್ಯಾಪ್ತಿಯಲ್ಲಿ 998 ಎಕರೆ, ವಿರಿಜಾ ನಾಲೆ ವ್ಯಾಪ್ತಿಯಲ್ಲಿ 13, 244 ಎಕರೆ, ಚಿಕ್ಕದೇವರಾಜ ಸಾಗರ ನಾಲೆ ವ್ಯಾಪ್ತಿಯಲ್ಲಿ 25,900 ಎಕರೆ ಅಚ್ಚುಕಟ್ಟು ಪ್ರದೇಶವಿದೆ. ಇಲ್ಲಿನ ಸಾಂಪ್ರದಾಯಿಕ ಭತ್ತ, ಕಬ್ಬು ಬೆಳೆಗಳ ಜತೆಗೆ ತೆಂಗು ಸೇರಿದಂತೆ ಇತರ ತೋಟಗಾರಿಕಾ ಬೆಳೆಗಳಿವೆ. ಸಾಕಷ್ಟು ಮಂದಿ ರೈತರು ತರಕಾರಿಗಳನ್ನು ಬೆಳೆಯುತ್ತಾರೆ. ಈಗ ಸಕಾಲದಲ್ಲಿ ನಾಲೆಗೆ ನೀರು ಹರಿಸದೇ ಇರುವುದು ಸಂಕಷ್ಟ ತಂದೊಡ್ಡಿದೆ.ನಾಲೆಗಳಿಗೆ ನೀರು ಹರಿಸಿ ಎಂದರೆ ಅಧಿಕಾರಿಗಳು ಕಾವೇರಿ ನ್ಯಾಯದೀಕರಣ  ತೀರ್ಪಿನ ಬಗ್ಗೆ ಹೇಳುತ್ತಿದ್ಸಾರೆ. ಇದರ ಪ್ರಕಾರ ವಿಶ್ವೇಶ್ವರಯ್ಯ ಮತ್ತು ಆರ್.ಬಿ.ಎಲ್.ಎಲ್. ನಾಲೆಗಳ ವ್ಯಾಪ್ತಿಯಲ್ಲಿನ ಬೆಳೆಗಳಿಗೆ ಮಾತ್ರ ನೀರು ಹರಿಸಲು ಅವಕಾಶವಿದೆ. ಇತರ ನಾಲೆಗಳಿಗೆ ನೀರು ಹರಿಸಲು ಸಾಧ್ಯವಿಲ್ಲ ಎನ್ನುತ್ತಿರುವುದೇ ಕಾವೇರಿ ಒಡ್ಡಿನ ನಾಲೆಗಳ ವ್ಯಾಪ್ತಿಯಲ್ಲಿರುವ ಬೆಳೆಗಳು ಒಣಗುವ ಸ್ಥಿತಿ ತಂದಿಟ್ಟಿದೆ. ಈಗಾಗಲೇ ಈ ನಾಲೆಗಳ ವ್ಯಾಪ್ತಿಯಲ್ಲಿ ಭತ್ತ ಬಿತ್ತನೆ ಮಾಡಿ ತಿಂಗಳು ಸಮೀಪಿಸುತ್ತಾ ಬಂದಿದೆ. ತುರ್ತಾಗಿ ನೀರು ಹರಿಸಬೇಕಾದ ಸ್ಥಿತಿ ಇದೆ. ಬೇಸಿಗೆ ಬೆಳೆಗೆ ನೀರು: ಬೆಂಗಳೂರಿನಲ್ಲಿ ಜನವರಿ 29, 2020 ರಂದು ಸುದ್ದಿಗಾರರೊಂದಿಗೆ ಮಾತನಾಡಿದ ಉಪ ಮುಖ್ಯಮಂತ್ರಿ ಲಕ್ಷ್ಮಣ್ ಸವದಿ ( ಆಗ ಕೃಷಿ ಖಾತೆಯೂ ಇವರ ಬಳಿಯೇ ಇತ್ತು) ರಾಜ್ಯದ ಜಲಾಶಯಗಳಿಂದ ಬೇಸಿಗೆ ಬೆಳೆಗೂ ನೀರು ಹರಿಸುವುದಾಗಿ ಪ್ರಕಟಿಸಿದ್ದರು. ಬೇಸಿಗೆಯಲ್ಲಿ ಕುಡಿಯುವ ಸಲುವಾಗಿ ಅಗತ್ಯವಿರುವ ನೀರಿನ ಮಟ್ಟ ಉಳಿಸಿಕೊಂಡು ಉಳಿದ ಹೆಚ್ವುವರಿ ನೀರನ್ನು ಬೇಸಿಗೆ ಬೆಳೆ ಅಗತ್ಯಕ್ಕೆ ತಕ್ಕಂತೆ ಹರಿಸಲು ತೀರ್ಮಾನ ಕೈಗೊಳ್ಳಲಾಗಿದೆ. ಬೇಸಿಗೆ ಸಮೀಪಿಸಿದ್ದರೂ ಜಲಾಶಯಗಳಲ್ಲಿ ನೀರಿನ ಸಂಗ್ರಹ ಉತ್ತಮವಾಗಿರುವ ಹಿನ್ನೆಲೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದರು. ಆದರೂ ಕಾವೇರಿ ಒಡ್ಡಿನ ನಾಲೆಗಳಿಗೆ ನೀರು ಹಾಯಿಸದೇ ಇರುವುದರಿಂದ ಉಪ ಮುಖ್ಯಮಂತ್ರಿ ತೀರ್ಮಾನಕ್ಕೂ ಕಿಮ್ಮತ್ತು ಇಲ್ಲದಂತಾಗಿದೆ.ನೀರುಕೊಡಿ ಇಲ್ಲ ವಿಷಕೊಡಿ: ಬೇಸಿಗೆ ಬೆಳೆಗೆ ನೀರು ಹರಿಸುವುದಿಲ್ಲ ಎನ್ನುತ್ತಿರುವ ಅಧಿಕಾರಿಗಳು ವಿಷ ನೀಡಲಿ ಎಂದು ರೈತರು ದುಃಖ ವ್ಯಕ್ತಪಡಿಸುತ್ತಿದ್ದಾರೆ. ಕಾವೇರಿ ನ್ಯಾಯಾಧೀಕರಣಕ್ಕೆ ರಾಜ್ಯ ಸರ್ಕಾರ ವಾಸ್ತವ ಮನದಟ್ಟು ಮಾಡಿಸಲು ವಿಫಲವಾಗಿರುವುದೇ ಈ ದುಸ್ಥಿತಿಗೆ ಕಾರಣ. ನೀರು ಹರಿಸದಿದ್ದರೆ ಬೆಳೆಗಳು ದಕ್ಕುವುದಿಲ್ಲ. ಒಂದು ವೇಳೆ ನೀರು ಹರಿಸಲು ಸಾಧ್ಯವಾಗದಿದ್ದರೆ ನಷ್ಟವಾದ ಬೆಳೆಗೆ ಸೂಕ್ತ ಪರಿಹಾರ ಘೋಷಿಸಬೇಕೆಂದು ಬೆಳಗೊಳ ಕೃಷ್ಣ, ನಗುವನಹಳ್ಳಿ ಶಿವಸ್ವಾಮಿ, ಪ್ರಕಾಶ್, ಎಂ.ಸಂತೋಷ್ ಒತ್ತಾಯಿಸುತ್ತಾರೆ. ರಾಜ್ಯ ಸರ್ಕಾರ ತಕ್ಷಣವೇ ರೈತರ ನೆರವಿಗೆ ಧಾವಿಸಬೇಕಾದ ಸ್ಥಿತಿ ಇದೆ.ಯು.