ಬೆಂಗಳೂರು, ಜೂ.3,ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕಾಂಗ್ರೆಸ್ ಹಿರಿಯ ನಾಯಕಿ ಕೇಂದ್ರದ ಮಾಜಿ ಸಚಿವೆ ಮಾರ್ಗರೇಟ್ ಆಳ್ವಾ ಅವರನ್ನು ಭೇಟಿಯಾಗಿ ವಿಧಾನ ಪರಿಷತ್, ರಾಜ್ಯಸಭೆ ಚುನಾವಣೆ ಹಾಗೂ ಪ್ರಸಕ್ತ ರಾಜಕೀಯ ಬೆಳವಣಿಗೆಗಳು ಮತ್ತು ಪಕ್ಷ ಸಂಘಟನೆ ಕುರಿತು ಸಮಾಲೋಚನೆ ನಡೆಸಿದರು.ಭೇಟಿ ವೇಳೆಯಲ್ಲಿ ಪುತ್ರ ನಿವೇದಿತ್ ಆಳ್ವಾ ಗೆ ವಿಧಾನಪರಿಷತ್ ಚುನಾವಣೆಗೆ ಬಿ.ಫಾರಂ ನೀಡುವಂತೆ ಮಾರ್ಗರೇಟ್ ಆಳ್ವಾ ಅವರು ಶಿವಕುಮಾರ್ ಜೊತೆ ಚರ್ಚಿಸಿದರು.
ಈ ಹಿಂದಿನಿಂದಲೂ ಪುತ್ರನಿಗೆ ಪಕ್ಷದಿಂದ ಬಿ.ಫಾರಂ ಕೇಳುತ್ತಾ ಬಂದಿದ್ದರೂ ಪಕ್ಷ ಟಿಕೆಟ್ ನೀಡಿಲ್ಲ. 2018 ರಲ್ಲಿ ನಡೆದಿದ್ದ ವಿಧಾನಪರಿಷತ್ ಚುನಾವಣೆಯಲ್ಲಿ ನಿವೇದಿತ್ ಆಳ್ವಾ ಹೆಸರು ಮುಂಚೂಣಿಯಲ್ಲಿತ್ತು. ಅಲ್ಲದೇ ನಿವೇದಿತ್ ಆಳ್ವಾ ರನ್ನು ವಿಧಾನಸಭೆಯಿಂದ ಮೇಲ್ಮನೆಗೆ ಕಳುಹಿಸಿಕೊಡಲು ಡಾ.ಜಿ.ಪರಮೇಶ್ವರ್ ಒಲವು ತೋರಿಸಿದ್ದರೂ ಅದು ಸಾಧ್ಯವಾಗಿರಲಿಲ್ಲ. ಅಲ್ಲದೇ ಕಳೆದ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಕೂಡ ಉತ್ತರ ಕನ್ನಡ ಕ್ಷೇತ್ರದಿಂದ ನಿವೇದಿತ್ ಆಳ್ವಾಗೆ ಟಿಕೆಟ್ ಕೊಡುವಂತೆ ಮಾರ್ಗರೇಟ್ ಆಳ್ವಾ ಲಾಭಿ ನಡೆಸಿದ್ದರಾದರೂ ಮೈತ್ರಿಯಿಂದಾಗಿ ಟಿಕೆಟ್ ಜೆಡಿಎಸ್ ಪಾಲಾಗಿತ್ತು.
ಇದೀಗ ಮತ್ತೆ ವಿಧಾನಪರಿಷತ್ ಚುನಾವಣೆಗೆ ಪುತ್ರನಿಗೆ ಬಿ.ಫಾರಂ ನೀಡುವಂತೆ ಮಾರ್ಗರೇಟ್ ಆಳ್ವಾ ಈಗಾಗಲೇ ಪಕ್ಷದ ಹಿರಿಯ ನಾಯಕರು, ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಸೇರಿದಂತೆ ಹೈಕಮಾಂಡ್ ಗೂ ಪತ್ರ ಬರೆದಿದ್ದಾರೆ. ಈ ಹಿನ್ನೆಲೆಯಲ್ಲಿ ಪಕ್ಷದ ಸ್ಥಿತಿಗತಿ ಕುರಿತು ಚರ್ಚಿಸಲು ಟಿಕೆಟ್ ಪಡೆಯಲು ಹೈಕಮಾಂಡ್ ವಿಧಿಸಿರುವ ಷರತ್ತು ಸೇರಿದಂತೆ ಅನೇಕ ಮಹತ್ತರ ವಿಚಾರಗಳ ಬಗ್ಗೆ ಡಿ.ಕೆ.ಶಿವಕುಮಾರ್ ಮಾರ್ಗರೇಟ್ ಆಳ್ವಾರೊಂದಿಗೆ ಚರ್ಚಿಸಿದರು.
ಈ ಬಾರಿ ಸ್ಪರ್ಧೆ ಬಹಳ ಕಷ್ಟವಾಗಿದೆ. ಅಲ್ಪಸಂಖ್ಯಾತರ ಕೋಟಾಕ್ಕೂ ದೊಡ್ಡಮಟ್ಟದ ಶಿಫಾರಸು ಲಾಭಿಯೇ ಇದೆ. ಈ ಬಾರಿ ಮೇಲ್ಮನೆಗೆ ಆಕಾಂಕ್ಷಿಗಳ ಬಹಳ ದೊಡ್ಡಪಟ್ಟಿಯೇ ಇದೆ. ನಿವೇದಿತ್ ಆಳ್ವಾ ಸ್ಪರ್ಧೆ ವಿಚಾರವನ್ನು ಹೈಕಮಾಂಡ್ ಗಮನಕ್ಕೆ ತರಲಾಗುತ್ತದೆಯಾದರೂ ಹೈಕಮಾಂಡ್ ನ ಲೆಕ್ಕಾಚಾರ ರಾಜಕೀಯ ಲಾಭ-ನಷ್ಟವನ್ನು ಅಳೆದುತೂಗಿಯೇ ಬಿ.ಫಾರಂ ನೀಡಲಾಗುತ್ತಿದೆ. ಏನೇ ಇರಲಿ ತಾವು ಯಾವುದಕ್ಕೂ ಅಸಮಾಧಾನಗೊಳ್ಳದೇ ಪಕ್ಷವನ್ನು ಸಂಘಟಿಸಿ, ಮಹಿಳಾ ಘಟಕವನ್ನು ಬಲಪಡಿಸಿ, ಹೆಚ್ಚೆಚ್ಚು ಮಹಿಳೆಯರು ಪಕ್ಷದತ್ತ ಒಲವು ತೋರುವಂತೆ ನೋಡಿಕೊಳ್ಳುವಂತೆ ಡಿ.ಕೆ.ಶಿವಕುಮಾರ್ ಮನವಿ ಮಾಡಿದರು ಎಂದು ತಿಳಿದುಬಂದಿದೆ.