ಬೆಂಗಳೂರು, ಏ.1, ಕೊರೊನಾ ಸೋಂಕು ನಿಯಂತ್ರಿಸಲು ಈಗಾಗಲೇ 21 ದಿನಗಳ ಕಾಲ ಪ್ರಧಾನಿ ನರೇಂದ್ರ ಮೋದಿ ಅವರು ಇಡೀ ದೇಶದಲ್ಲಿ ಲಾಕ್ ಡೌನ್ ಘೋಷಿಸಿದ್ದಾರೆ.ಆದರೂ, ವಾಹನ ಸವಾರರರು ರಸ್ತೆಗಿಳಿಯುವ ಸಂಖ್ಯೆಯಲ್ಲಿ ಮಾತ್ರ ಇಳಿಮುಖವಾಗುತ್ತಿಲ್ಲ . ಈಗಾಗಲೇ ಪೊಲೀಸರು ಮನೆಯಿಂದ ರಸ್ತೆಗೆ ಬಂದವರಿಗೆ ಲಾಠಿ ಏಟು, ಬಸ್ಕಿ ಹೊಡೆಸುವುದು, ಊದುಬತ್ತಿಯಿಂದ ಪೂಜೆ, ಮಂಗಳಾರತಿ ಇತ್ಯಾದಿ ಶಿಕ್ಷೆ ನೀಡುವುದರ ಮೂಲಕ ಅವಮಾನ ಮಾಡಿ ಮನೆಯಿಂದ ಹೊರಗೆ ಬರ ಬೇಡಿ ಎಂದು ವಿಭಿನ್ನ ಪ್ರಯತ್ನ ಮಾಡಿದ್ದರು. ಅಲ್ಲದೇ, ಕೊರೊನಾ ವೈರಸ್ ಸೋಂಕು ಹರಡುವ ಕುರಿತು ನಗರ ಸಂಚಾರಿ ಪೊಲೀಸರು ವೈರಸ್ ನಂತಹ ಹೆಲ್ಮೆಟ್ ಧರಿಸಿ, ಅಣುಕು ಪ್ರದರ್ಶನ ಮಾಡುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿದ್ದಾರೆ.
ಏಪ್ರಿಲ್ 14ರ ವರೆಗೆ ಲಾಕ್ಡೌನ್ ಚಾಲ್ತಿಯಲ್ಲಿದ್ದು, ಕೊರೊನಾ ಸೋಂಕು ಪೀಡಿತರ ಸಂಖ್ಯೆ ದಿನೇದಿನೇ ಹೆಚ್ಚಾಗುತ್ತಿದ್ದಂತೆ ಪೊಲೀಸ್ ಇಲಾಖೆಯೂ ಕಟ್ಟುನಿಟ್ಟಿನ ನಿಯಮಜಾರಿಗೆ ತರಲು ಆರಂಭಿಸಿದೆ.ಇತ್ತೀಚೆಗಷ್ಟೇ ಬೆಂಗಳೂರಿನಲ್ಲಿ ಅನವಶ್ಯಕವಾಗಿ ಬೈಕ್ ಮೇಲೆ ಸುತ್ತಾಡುತ್ತಿದ್ದವರ ವಾಹನವನ್ನು ಪೊಲೀಸರು ಜಪ್ತಿ ಮಾಡಿ ನಂತರ ಎಚ್ಚರಿಕೆ ನೀಡುವ ಮೂಲಕ ವಾಪಸ್ಸು ನೀಡಿದ್ದರು. ಇದೀಗ ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಖಡಕ್ ಆದೇಶ ವೊಂದನ್ನು ಹೊರಡಿಸಿದ್ದಾರೆ.ಈ ಬಗ್ಗೆ ಟ್ವೀಟ್ ಮಾಡಿರುವ ಪ್ರವೀಣ್ ಸೂದ್ ಅವರು, ಇದು ಏಪ್ರಿಲ್ ಫೂಲ್ ಅಲ್ಲ. ಸೀರಿಯಸ್ ನೋಟಿಸ್. ಇನ್ನು 14 ದಿನಗಳ ಕಾಲ ದ್ವಿಚಕ್ರ ಹಾಗೂ ನಾಲ್ಕು ಚಕ್ರ ವಾಹನಗಳು ಓಡಾಡುವಂತಿಲ್ಲ. ಯಾರೇ ವಾಹನಗಳನ್ನು ರಸ್ತೆ ಮೇಲೆ ತಂದರೆ ಮುಲಾಜಿಲ್ಲದೆ ಜಪ್ತಿ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ