ಲೋಕದರ್ಶನ ವರದಿ
ಹೂವು, ಪೆನ್ನು, ಸಿಹಿ ನೀಡಿ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳನ್ನು ಪರೀಕ್ಷಾ ಕೇಂದ್ರಕ್ಕೆ ಸ್ವಾಗತಿಸಿದ ಡಿಸಿ, ಸಿಇಓ
ಧಾರವಾಡ 21: ಪ್ರಸಕ್ತ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಗಳು ಇಂದಿನಿಂದ ಆರಂಭವಾಗಿದ್ದು, ಇಂದಿನ ಪ್ರಥಮ ಪರೀಕ್ಷೆಗಾಗಿ ಮಾಳಮಡ್ಡಿ ಕೆ.ಇ. ಬೋರ್ಡ ಶಾಲೆಯಲ್ಲಿ ಸ್ಥಾಪಿಸಿರುವ ಪರೀಕ್ಷಾ ಕೇಂದ್ರಕ್ಕೆ ಆಗಮಿಸಿದ್ದ ಪರೀಕ್ಷಾರ್ಥಿ ವಿದ್ಯಾರ್ಥಿಗಳಿಗೆ ಜಿಲ್ಲಾಧಿಕಾರಿ ದಿವ್ಯ ಪ್ರಭು ಹಾಗೂ ಜಿಲ್ಲಾ ಪಂಚಾಯತ ಸಿಇಓ ಭುವನೇಶ ಪಾಟೀಲ ಅವರು ಗುಲಾಬಿ ಹೂವು, ಪೆನ್ನು ಮತ್ತು ಸಿಹಿ ನೀಡಿ, ಸ್ವಾಗತಿಸಿದರು. ಮತ್ತು ಶುಭ ಹಾರೈಸಿದರು. ವಿದ್ಯಾರ್ಥಿಗಳು ಉತ್ಸಾಹ ಮತ್ತು ಆತ್ಮವಿಶ್ವಾಸದಿಂದ ಪರೀಕ್ಷೆ ಬರೆಯುವುದಾಗಿ ಮತ್ತು ಮಿಷನ್ ವಿದ್ಯಾಕಾಶಿಯ ಚಟುವಟಿಕೆಗಳಿಂದ ಪರೀಕ್ಷೆಯ ಬಗ್ಗೆ ಮೂಡುವ ಭಯ, ಆತಂಕ ದೂರವಾಗಿದೆ ಎಂದರು. ನಂತರ ಜಿಲ್ಲಾಧಿಕಾರಿಗಳು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ಕಳೆದ ಒಂದು ವರ್ಷದಿಂದ ಮಿಷನ್ ವಿದ್ಯಾ ಕಾಶಿ ಮೂಲಕ ವಿವಿಧ ರೀತಿಯ ಪರೀಕ್ಷೆ, ವಿಶೇಷ ಕಾರ್ಯಕ್ರಮಗಳನ್ನು ಮಾಡಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಆತ್ಮವಿಶ್ವಾಸದಿಂದ ಪರೀಕ್ಷೆ ಬರೆಯುತ್ತಿದ್ದಾರೆ. ವಿಶೇಷವಾಗಿ ಇಂದು ಒಂದು ಹಬ್ಬದ ವಾತಾವರಣ ಸೃಷ್ಟಿ ಮಾಡಬೇಕು ಅಂತ ತುಂಬಾ ಖುಷಿಯಿಂದ ಅವರನ್ನು ಸ್ವಾಗತಿಸಲು ಈ ಸ್ವಾಗತ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ. ಇಲ್ಲಿ ನಮ್ಮ ಇಲಾಖೆಯ ಎಲ್ಲ ಹಿರಿಯ ಅಧಿಕಾರಿಗಳು, ಸಂಸ್ಥೆಯ ಎಲ್ಲ ಪದಾಧಿಕಾರಿಗಳು ಜೊತೆಗೆ ಇದ್ದಾರೆ. ಇವತ್ತು ಮಕ್ಕಳಿಗೆ ಪರೀಕ್ಷೆಯನ್ನು ಯಾವುದೇ ಭಯವಿಲ್ಲದೆ, ಯಾವುದೇ ಅಡೆತಡೆಗಳು ಇಲ್ಲದೆ ; ಆತ್ಮವಿಶ್ವಾಸದಿಂದ ಮತ್ತು ತುಂಬಾ ಖುಷಿಯಿಂದ ಪರೀಕ್ಷೆಯನ್ನು ಬರೆಯಬೇಕು ಎಂಬ ನಿಟ್ಟಿನಲ್ಲಿ ಪರೀಕ್ಷಾ ಕೇಂದ್ರಗಳಲ್ಲಿ ಒಳ್ಳೆಯ ವಾತಾವರಣ ಸೃಷ್ಟಿಸಲು ಈ ವಿಶೇಷ ಕಾರ್ಯಕ್ರಮ ಮಾಡಿ, ವಿದ್ಯಾರ್ಥಿಗಳಿಗೆ ಹೂಗುಚ್ಛ, ಸಿಹಿಯನ್ನು ನೀಡುವ ಮುಖಾಂತರ ಸ್ವಾಗತ ಮಾಡಿದ್ದೇವೆ. ಮಕ್ಕಳಿಗೂ ತುಂಬಾ ಖುಷಿ ಅನಿಸುತ್ತದೆ. ತುಂಬಾ ಫ್ರೀಯಾಗಿ ನಮ್ಮ ಜೊತೆ ಫೋಟೋವನ್ನು ತೆಗೆದುಕೊಂಡು, ಫ್ರೀ ಮೈಂಡ್‌ದಿಂದ ಬಂದಿದ್ದಾರೆ. ಇದನ್ನು ನೋಡಿ ನನಗೂ ಖುಷಿಯಾಗಿದೆ. ಇದೆ ಮೈಂಡ್ ಸೆಟ್‌ಯಿಂದ ಬರುವ ಎಲ್ಲಾ ಪರೀಕ್ಷೆಯನ್ನು ಅವರು ಯಶಸ್ವಿಯಾಗಿ ಮಾಡಲಿ. ಜಿಲ್ಲೆಗೆ ಒಂದು ಒಳ್ಳೆಯ ಹೆಸರನ್ನು ತೆಗೆದುಕೊಂಡು ಬರಲಿ. ಅದೇ ರೀತಿ ಒಳ್ಳೆಯ ರಾ್ಯಂಕ್ನ್ನು ತೆಗೆದುಕೊಂಡು ಜಿಲ್ಲೆಯ ಕೀರ್ತಿಯನ್ನು ಹೆಚ್ಚಿಸುತ್ತಾರೆ ಅಂತಾ ಅನಿಸುತ್ತದೆ ಎಂದು ಅವರು ಹೇಳಿದರು. ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ ಅವರು ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಹೂವು ನೀಡಿ, ಶುಭ ಹಾರೈಸಿದರು. ನಂತರ ಡಿಸಿ ಅವರು ಮತ್ತು ಸಿಇಓ ಅವರು ಪರೀಕ್ಷಾ ಕೊಠಡಿಗಳಿಗೆ ತೆರಳಿ, ಸಿದ್ಧತೆಗಳನ್ನು ಪರೀಶೀಲಿಸಿದರು. ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ ಸಿಂದಗಿ, ಕಾರ್ಯಕ್ರಮ ಸಂಚಾಲಕರಾದ ವಿನಾಯಕ ಜೋಶಿ, ಕೆ.ಇ.ಬೋರ್ಡ ಸಂಸ್ಥೆಯ ಕಾರ್ಯದರ್ಶಿ ಡಿ.ಎಸ್.ರಾಜಪುರೋಹಿತ, ವಿಶೇಷ ಅಭಿವೃದ್ಧಿ ಅಧಿಕಾರಿ ಗುರುರಾಜ ಜಮಖಂಡಿ, ಪ್ರಾಚಾರ್ಯ ಎನ್.ಎಸ್.ಗೋವಿಂದರೆಡ್ಡಿ, ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಎಂಜೀನೀರ್ಸ್ ಧಾರವಾಡ ಲೋಕಲ್ ಸೆಂಟರ್ ಅಧ್ಯಕ್ಷ ಸುನಿಲ ಬಾಗೇವಾಡಿ ಮತ್ತು ಸದಸ್ಯರು, ಧಾರವಾಡ ಟ್ಯುಟೋರಿಯಲ್ ಅಸೋಸಿಯೇಷನ್ ಅಧ್ಯಕ್ಷ ನಾಗೇಶ ಅಣ್ಣಿಗೇರಿ, ಮಹಾನಗರ ಪಾಲಿಕೆ (ವಾರ್ಡ್ 15ರ) ಸದಸ್ಯ ವಿಷ್ಣು ಕೊಲ್ಲಹಳ್ಳಿ, ಸುಭೋದ ಶಿಕ್ಷಣ ಸಮಿತಿ ಅಧ್ಯಕ್ಷ ಗಿರಿಧರ ಕಿನ್ನಾಳ ಹಾಗೂ ಇತರರು ಉಪಸ್ಥಿತರಿದ್ದರು.
ಪರೀಕ್ಷಾ ಹಾಜರಾತಿ: ಪ್ರಸಕ್ತ ಸಾಲಿನ ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆ-1 ರ ಇಂದಿನ ಪ್ರಥಮ ಭಾಷೆ ಪರೀಕ್ಷೆಗೆ 437 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದು, 28,130 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆ ಎಂದು ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಸ್.ಎಸ್. ಕೆಳದಿಮಠ ಅವರು ತಿಳಿಸಿದ್ದಾರೆ.