ಬೆಂಗಳೂರು, ಮೇ 8, ಕೊರೋನ ಸಾಂಕ್ರಮಿಕ ಕಾಯಿಲೆಯಿಂದ ದೇಶದಲ್ಲೆಡೆ ಲಾಕ್‌ಡೌನ್ ಘೋಷಿಸಲಾಗಿತ್ತು. ಇದರಿಂದ ವಾಯುಮಾಲಿನ್ಯ ಸಂಪೂರ್ಣ ನಿಯಂತ್ರಣಕ್ಕೆ ಬಂದಿದೆ. ಇದೇ ರೀತಿಯಲ್ಲಿ ವಾಯುಮಾಲಿನ್ಯ ನಿಯಂತ್ರಣ ಮುಂದುವರೆಯಬೇಕಿದ್ದರೆ ಲಾಕ್‌ಡೌನ್ ತೆರವಾದ ಬಳಿಕವೂ ಕಾರು, ಬೈಕು ಇತರೆ ಇಂಧನಯುಕ್ತ ವಾಹನ ಬಳಸದೇ ಬೈಸಿಕಲ್ ಬಳಸುವತ್ತ ಜನ ಜಾಗೃತರಾಗಬೇಕು. ಈ ನಿಟ್ಟಿನಲ್ಲಿ ಸೈಕಲಿಸ್ಟ್ ಹಾಗೂ ನರಶಸ್ತ್ರ ತಜ್ಞ ಡಾ. ಅರವಿಂದ ಭತೇಜ ಅವರ ತಂಡ *#ResetWithCycling* ಎಂಬ ನೂತನ ಅಭಿಯಾನ ಪ್ರಾರಂಭಿಸಿದೆ.ಪ್ರತಿಯೊಬ್ಬರು ಸೈಕಲ್ ಬಳಕೆಗೆ ಆದ್ಯತೆ ನೀಡುವಂತೆ ಪ್ರೋತ್ಸಾಹಿಸಲು ರಾಜ್ಯ ಸರಕಾರ ಹಾಗೂ ನಗರ ಪೊಲೀಸ್ ಆಯುಕ್ತರಿಗೂ ಪತ್ರದ ಮೂಲಕ ಮನವಿ ಮಾಡಿದ್ದಾರೆ.
ಲಾಕ್‌ಡೌನ್‌ನಿಂದಾಗಿ ಇಡೀ ದೇಶದ ವಾತಾವರಣ ಸಂಪೂರ್ಣ ನಿಯಂತ್ರಣಕ್ಕೆ ಬಂದಿದೆ. ಪ್ರಸ್ತುತ ಕೆಲವೆಡೆ ಲಾಕ್‌ಡೌನ್ ಸಡಿಲಿಕೆಗೆ ಅವಕಾಶ ನೀಡಲಾಗಿದೆ. ಇದರಿಂದ ಮತ್ತೆ ಮಾಯುಮಾಲಿನ್ಯ ಉಂಟಾಗಿ ಪರಿಸರ ನಾಶವಾಗಬಹುದು. ಇದಕ್ಕೆ ಅವಕಾಶ ನೀಡಬಾರದು. ಹೇಗೋ ಲಾಕ್‌ಡೌನ್‌ನಿಂದಾಗಿ ಸ್ವಚ್ಛಂದ ವಾತಾವರಣ ನಿರ್ಮಾಣವಾಗಿದೆ. ಇದನ್ನು ನಾವುಗಳು ಮುಂದುವರೆಸಿಕೊಂಡು ಹೋಗುವತ್ತ ಎಲ್ಲರು ಕೈ ಜೋಡಿಸುವಂತೆ ಮನವಿ ಮಾಡಿದ್ದಾರೆ. ಡಾ.ಅರವಿಂದ್ ಭತೇಜಾ ಮತ್ತು ಬೆಂಗಳೂರಿನ ಸೈಕ್ಲಿಸ್ಟ್ ಮತ್ತು ಬೈಸಿಕಲ್ ಮೇಯರ್ ಸತ್ಯ ಶಂಕರನ್ ಅವರು '#ResetWithCycling' ಎಂಬ ಅಭಿಯಾನವನ್ನು ಕೈಗೊಂಡಿದ್ದಾರೆ. ಆಸಕ್ತ ಸೈಕ್ಲಿಸ್ಟ್‌ಗಳು ಸಹ ಈ ಅಭಿಯಾನದಲ್ಲಿ ಭಾಗವಹಿಸಬಹುದು.
ನಾಗರಿಕರು, ವೈದ್ಯರು, ಪರಿಸರವಾದಿಗಳು, ನಗರ ಯೋಜಕರು ಮತ್ತು ಸರ್ಕಾರದ ಬೆಂಬಲದೊಂದಿಗೆ ಈ ಅಭಿಯಾನ ನಡೆಯುತ್ತಿದೆ. ಭವಿಷ್ಯದ ಪೀಳಿಗೆಗೆ ಉತ್ತಮ ನಗರವನ್ನು ನಿರ್ಮಿಸಲು , ಒತ್ತಡ, ಆರೋಗ್ಯ, ಗಾಳಿಯ ಗುಣಮಟ್ಟವನ್ನು ಸುಧಾರಿಸಲು ಮತ್ತು ನಮ್ಮ ನಗರಗಳನ್ನು ನವೀಕರಿಸಲು ಬೈಸಿಕಲ್ ಅನ್ನು ಬಳಸೋಣ” ಎಂಬ ಧ್ಯೇಯವಾಕ್ಯದೊಂದಿಗೆ ಅಭಿಯಾನ ಪ್ರಾರಂಭಿಸಿದ್ದಾರೆ.ವಿಶ್ವ ಆರೋಗ್ಯ ಸಂಸ್ಥೆ ಕೂಡ ಪ್ರತಿಯೊಬ್ಬರು ಸೈಕಲ್ ಬಳಕೆಗೆ ಆದ್ಯತೆ ನೀಡುವಂತೆ ಸಲಹೆ ನೀಡಿದೆ. ಸೈಕ್ಲಿಂಗ್ ಸಾರ್ವಜನಿಕ ಆರೋಗ್ಯ ಮತ್ತು ಜೀವನದ ಗುಣಮಟ್ಟವನ್ನು ಸುಧಾರಿಸುತ್ತದೆ ಎಂದಿದೆ. ರಾಜ್ಯ ಸರಕಾರ ಕೂಡ ಈ ಅಭಿಯಾನಕ್ಕೆ ಕೈ ಜೋಡಿಸುತ್ತಿದೆ. ಸರಕಾರ ಒಂದಷ್ಟು ನಿಯಮವನ್ನು ಕಟ್ಟು ನಿಟ್ಟಿನಿಂದ ಜಾರಿಗೆ ತರುವಂತೆ ಮನವಿ ಮಾಡಿದ್ದಾರೆ.ಲಾಕ್‌ಡೌನ್ ಸಂದರ್ಭದಲ್ಲಿ ಸೈಕಲ್ ಮೂಲಕ ಓಡಾಡುವವರಿಗೆ ಪಾಸ್ ಕಡ್ಡಾಯ ಬೇಡ., ಸೈಕಲ್ ಮಾರಾಟ ಹಾಗೂ ರಿಪೇರಿ ಅಂಗಡಿಗಳು ಸದಾ ತೆರೆಯಲು ಅವಕಾಶ ಇರಲಿದೆ. ಎಲ್ಲಾ ರಸ್ತೆಗಳಲ್ಲೂ ಸೈಕಲಿಂಗ್ ಪಾತ್ ಕಡ್ಡಾಯವಾಗಿ ನಿರ್ಮಾಣ ಮಾಡುವುದು. ಮನೆ ಹತ್ತಿರದ ಸ್ಥಳಗಳಿಗೆ ಸೈಕಲ್ ಮೂಲಕವೇ ತೆರಳುವುದು.ಜನರು ಸಹ ಈ ಅಭಿಯಾನವನ್ನು ಅತ್ಯಂತ ಮುತುವರ್ಜಿವಹಿಸಿ ಸ್ವೀಕರಿಸಬೇಕು. ತಮ್ಮ ಸ್ನೇಹಿತರು, ಕುಟುಂಬ ಸದಸ್ಯರು ಸೈಕಲ್ ಬಳಸುವಂತೆ ಉತ್ತೇಜನ ನೀಡಬೇಕು. ಪರಿಸರ ಮಾಲಿನ್ಯ ತಡೆಗಟ್ಟುವಲ್ಲಿ ನಾವು ವಿಫಲವಾದರೆ ಭವಿಷ್ಯದಲ್ಲಿ ಕೊರೋನಗಿಂತ ಅತ್ಯಂತ ಕೆಟ್ಟ ಪರಿಸ್ಥಿತಿ ಎದುರಿಸಬೇಕಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.