ಬೆಂಗಳೂರು, ಆಗಸ್ಟ್ 18 ಕರ್ನಾಟಕ ಪ್ರಿಮೀಯರ್ ಲೀಗ್-2019 ಕ್ರಿಕೆಟ್ ಪಂದ್ಯಾವಳಿಯ ಬೆಟ್ಟಿಂಗ್ ನಡೆಸುತ್ತಿದ್ದ ಇಬ್ಬರನ್ನು ಸಿಸಿಬಿ ಪೊಲೀಸರು ಬಂಧಿಸಿ, 1.97 ಲಕ್ಷ ರೂ ಹಾಗೂ 2 ಮೊಬೈಲ್ ಫೋನ್ ವಶಪಡಿಸಿಕೊಂಡಿದ್ದಾರೆ. ಬನಶಂಕರಿಯ ಮಹೇಶ್ (46) ಮತ್ತು ದಾಸರಹಳ್ಳಿಯ ಹರೀಶ್ (39) ಬಂಧಿತರು. ಶನಿವಾರ ರೇಸ್ ಕೋರ್ಸ್ ರಸ್ತೆಯ ಸ್ವಿಸ್ ಕಾಂಪ್ಲೆಕ್ಸ್ ಮುಂಭಾಗದಲ್ಲಿ ಹುಬ್ಬಳ್ಳಿ ಟೈಗರ್ಸ್ ಮತ್ತು ಶಿವಮೊಗ್ಗ ಲಯನ್ಸ್ ತಂಡಗಳ ಫಲಿತಾಂಶದ ಬಗ್ಗೆ ಸಾರ್ವಜನಿಕರಿಂದ ಫೋನ್ ಮೂಲಕ ಕ್ರಿಕೆಟ್ ಬೆಟ್ಟಿಂಗ್ ಹಣ ಕಟ್ಟಿಸಿಕೊಳ್ಳಲಾಗುತ್ತಿದೆ ಎಂಬ ಖಚಿತ ಮಾಹಿತಿ ಸಿಸಿಬಿ ಪೊಲೀಸರಿಗೆ ದೊರಕಿತ್ತು. ಈ ಮಾಹಿತಿ ಆಧಾರದ ಮೇಲೆ ಸಿಸಿಬಿ ಅಧಿಕಾರಿಗಳು ಕಾರ್ಯಾಚರಣೆ ಕೈಗೊಂಡುಆರೋಪಿಗಳನ್ನು ಬಂಧಿಸಿದ್ದಾರೆ. ಈ ಸಂಬಂಧ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.