ಕರಾಚಿ, ಜೂನ್ 30: ಸತತ ಎರಡು ಕೊರೊನಾ ಸೋಂಕು ಪರೀಕ್ಷೆಯಲ್ಲಿ ನೆಗೆಟಿವ್ ಫಲಿತಾಂಶ ಬಂದಿರುವ ಹಿನ್ನೆಲೆಯಲ್ಲಿ ಪಾಕಿಸ್ತಾನದ ಆರು ಮಂದಿ ಕ್ರಿಕೆಟಿಗರಿಗೆ ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲು ಸಮ್ಮತಿ ನೀಡಲಾಗಿದೆ.ಮೊಹಮ್ಮದ್ ಹಫೀಜ್, ವಹಾಬ್ ರಿಜಾಯ್, ಮೊಹಮ್ಮದ್ ಹುಸೇನ್, ಶಾದಾಬ್ ಖಾನ್, ಮೊಹಮ್ಮದ್ ರಿಜ್ವಾನ್ ಮತ್ತು ಫಖಾರ್ ಜಮಾನ್ ಅವರು ಇಂಗ್ಲೆಂಡ್ ಗೆ ಪ್ರಯಾಣಿಸಲಿದ್ದಾರೆ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಮಂಗಳವಾರ ತಿಳಿಸಿದೆ.
ಇಂಗ್ಲೆಂಡ್ ಪ್ರವಾಸಕ್ಕೆ ಆಯ್ಕೆಯಾಗಿದ್ದ ಹತ್ತು ಮಂದಿ ಕ್ರಿಕೆಟಿಗರಿಗೆ ಕೋವಿಡ್-19 ಇರುವುದು ಇತ್ತೀಚಿಗೆ ದೃಢಪಟ್ಟಿತ್ತು. ಈ ಪಟ್ಟಿಯಲ್ಲಿ ಹಫೀಜ್, ವಹಾಬ್ , ಹಸ್ನೇನ್, ಶಾದಾಬ್, ರಿಜ್ವಾನ್ ಮತ್ತು ಜಮಾನ್ ಅವರು ಈ ಪಟ್ಟಿಯಲ್ಲಿದ್ದರು. ಹೀಗಾಗಿ ಇವರನ್ನು ಬಿಟ್ಟು 20 ಸದಸ್ಯರ ತಂಡವು ಕಳೆದ ಭಾನುವಾರ ಇಂಗ್ಲೆಂಡ್ ನ ಮ್ಯಾಂಚೆಸ್ಟರ್ ಗೆಪ್ರಯಾಣಿಸಿತ್ತು.ಇದೇ ತಿಂಗಳ 26 ಮತ್ತು 29ರಂದು ಹತ್ತು ಮಂದಿಯನ್ನು ಕೋವಿಡ್ ಪರೀಕ್ಷೆ ಒಳಪಡಿಸಲಾಗಿತ್ತು. ಈ ಪೈಕಿ ಆರು ಜನರಿಗೆ ಕೊರೊನಾ ಸೋಂಕು ತಗುಲಿಲ್ಲ ಎಂಬುದು ಖಚಿತವಾಗಿದೆ.