ಕೋವಿಡ್-19: ನೆಮ್ಮದಿಯಲ್ಲಿ ಜವಾಬ್ದಾರಿಯಿಂದ ನುಣುಚಿಕೊಳ್ಳದಿರಿ- ಸಿ.ಸಿ.ಪಾಟೀಲ

ಗದಗ, ಮೇ 10, ಗದಗ ಜಿಲ್ಲೆಯ ಚಿಕಿತ್ಸೆಯಲ್ಲಿದ್ದ ಕೊವಿಡ್-19  ಸೋಂಕಿತರು ಸಂಪೂರ್ಣವಾಗಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿರುವುದು ನಮಗೆಲ್ಲ  ಒಂದು ಹಂತದ ನೆಮ್ಮದಿ ನೀಡಿದೆ. ಆದರೆ ಕೊವಿಡ್-19 ಸೋಂಕು ತಡೆ ಕುರಿತ ಜಿಲ್ಲೆಯ  ಸಾರ್ವಜನಿಕರು, ಯುವಜನರ ಮತ್ತು ಅಧಿಕಾರಿ ಸಿಬ್ಬಂದಿಯಾದಿಯಾಗಿ ಸರ್ವರೂ ಹೆಚ್ಚಿನ  ಜವಾಬ್ದಾರಿಯಿಂದ ಜೀವನವನ್ನು ನಡೆಸಬೇಕಾದ ಕುರಿತು ರಾಜ್ಯದ ಗಣಿ ಭೂವಿಜ್ಞಾನ ಇಲಾಖೆ ಹಾಗೂ  ಗದಗ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ ಎಚ್ಚರಿಕೆಯ ಮನವಿ ಮಾಡಿದ್ದಾರೆ. ಕೊವಿಡ್-19 ಸೋಂಕಿನ  ತಡೆ ಮತ್ತು ನಿಯಂತ್ರಣ ಕುರಿತು ಎಲ್ಲರೂ  ಸಾಮಾಜಿಕ ಅಂತರ  ಕಾಯ್ದುಕೊಳ್ಳುವ, ಅನವಶ್ಯಕ ಓಡಾಟ, ಪ್ರಯಾಣ ನಿಲ್ಲಿಸುವ, ಮುಖಕ್ಕೆ ಮಾಸ್ಕ,  ಸ್ಯಾನಿಟೈಜರ್ ಉಪಯೋಗ , ಆಗಾಗ  ಕೈಗಳನ್ನು ಚೆನ್ನಾಗಿ ತೊಳೆದುಕೊಳ್ಳುವದು ನಮ್ಮ ನಿತ್ಯದ  ಅಭ್ಯಾಸವಾಗಬೇಕು. ಎಲ್ಲರೂ ಈ ಮುಂಜಾಗ್ರತಾ ಮುನ್ನೆಚ್ಚರಿಕೆ ಕ್ರಮಗಳನ್ನು ತಪ್ಪದೇ  ಪಾಲಿಸಿದಲ್ಲಿ ಮಾತ್ರ ಕೊವಿಡ್-19 ಸೋಂಕನ್ನು ಯಶಸ್ವಿಯಾಗಿ ತಡೆಗಟ್ಟಬಹುದು, ಕೊವಿಡ್-19  ಈಗ ದೇಶದ ಸರ್ಕಾರದ ಸಮಸ್ಯೆ ಮಾತ್ರವಲ್ಲ ಪ್ರತಿ ವ್ಯಕ್ತಿ, ಕುಟುಂಬ, ಸಮಾಜಗಳ ಅಳಿವು  ಉಳಿವಿನ ಪ್ರಶ್ನೆ ಎಂಬುದನ್ನು ನಾವು ಅರಿತುಕೊಂಡು ತಪ್ಪದೇ ವೈಯಕ್ತಿಕ, ಸಾಮಾಜಿಕ   ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಲು ಸಚಿವ ಸಿ.ಸಿ.ಪಾಟೀಲ ಮನವಿ ಮಾಡಿದ್ದಾರೆ.