ಮಂಗಳೂರು, ಮೇ 15, ಕೋವಿಡ್-19 ಹಿನ್ನೆಲೆಯಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯವು ಬೆಂಗಳೂರಿನ ಆರ್ಟಿಸ್ಟ್ (ಏಷ್ಯನ್ ರೀಸರ್ಚ್ ಅಂಡ್ ಟ್ರೈನಿಂಗ್ ಇನ್ಸ್‍ಟಿಟ್ಯೂಟ್ ಫಾರ್ ಸ್ಕಿಲ್ ಟ್ರಾನ್ಸ್‌ಫರ್)ನೊಂದಿಗೆ ಕರ್ನಾಟಕದಾದ್ಯಂತ ತಾಯಿ ಮತ್ತು ಮಗುವಿನ ಆರೋಗ್ಯ ಸೇವೆಯಲ್ಲಿ ತೊಡಗಿರುವ ಸೇವಾ ಕಾರ್ಯಕರ್ತರಿಗೆ, ಸ್ತ್ರೀರೋಗ ಮತ್ತು ಪ್ರಸೂತಿತಜ್ಞರು, ಶುಶ್ರೂಷಕ ಸಿಬ್ಬಂದಿ ಮತ್ತು ಸಹಾಯಕ ಸಿಬ್ಬಂದಿಗೆ ತರಬೇತಿ ಕಾರ್ಯಕ್ರಮವನ್ನು ಸಂಘಟಿಸುತ್ತಿದೆ.
ಈ ತರಬೇತಿ ಕಾರ್ಯಕ್ರಮವನ್ನು ವಿಡಿಯೋ ಪ್ರಾತ್ಯಕ್ಷಿಕೆ ಮೂಲಕ ರಾಜ್ಯದಲ್ಲಿ ಕರ್ನಾಟಕ ರಾಜ್ಯ ಪ್ರಸೂತಿ ಮತ್ತು ಸ್ತ್ರೀರೋಗ ಸಂಸ್ಥೆಯ ಮೂಲಕ ಅನುಷ್ಠಾನಗೊಳಿಸಲಾಗುತ್ತದೆ. ಇದು ಸರ್ಕಾರಿ ಆಸ್ಪತ್ರೆಗಳು ಮತ್ತು ಖಾಸಗಿ ಆಸ್ಪತ್ರೆಗಳಿಗೆ ಸಂಬಂಧಿಸಿದಂತೆ ಎಲ್ಲ ಆಯಾಮಗಳನ್ನೂ ಒಳಗೊಂಡಿದ್ದು ಅದರಲ್ಲಿ ರೋಗಿಗಳ ಪರೀಕ್ಷೆ ಮತ್ತು ಪ್ರವೇಶದ್ವಾರದಲ್ಲಿ ಭೇಟಿ ನೀಡುವವರ ವಿವರ, ರೋಗದ ಮುನ್ಸೂಚನೆ, ರೋಗಿಗಳನ್ನು ಪ್ರತ್ಯೇಕವಾಗಿ ಸಂಘಟಿಸುವುದು, ಸ್ವಚ್ಛತೆಯ ನಿಯಮಗಳು, ಪಿಪಿಇ ಕಿಟ್ ಬಳಸುವ ರೀತಿ, ಪ್ರಸೂತಿ ಗೃಹ ಮತ್ತು ಶಸ್ತ್ರಚಿಕಿತ್ಸಾ ಕೊಠಡಿಯ ನಿರ್ವಹಣೆಯ ಮಾನದಂಡಗಳು, ವಿಭಾಗಗಳ ನಿರ್ವಹಣೆ, ಬಿಡುಗಡೆ ಮತ್ತು ಫಾಲೋ-ಅಪ್ ಸಾರಾಂಶ, ಭೇಟಿಯ ಅವಧಿ ಮತ್ತು ದೂರ ಸಂವಹನಗಳನ್ನು ವಿಡಿಯೋ ಪ್ರಾತ್ಯಕ್ಷಿಕೆ ಮೂಲಕ ಒದಗಿಸಲಾಗುತ್ತದೆ. ಆರ್ಟಿಸ್ಟ್ ತಂಡದಿಂದ ಪ್ರತಿನಿತ್ಯ ಆನ್‍ಲೈನ್ ತರಬೇತಿ ಕೋರ್ಸ್‍ಗಳನ್ನು ನಡೆಸಲಾಗುತ್ತದೆ. ಇದರ ನೇತೃತ್ವವನ್ನು ಆರೋಗ್ಯ ಸೇವಾಕ್ಷೇತ್ರದ ಮುಂಚೂಣಿಯಲ್ಲಿರುವ ಹಾಗೂ ಖ್ಯಾತ ಸ್ತ್ರೀರೋಗ ತಜ್ಞೆ ಡಾ.ಹೇಮಾ ದಿವಾಕರ್ ವಹಿಸಿಕೊಂಡಿದ್ದಾರೆ.
ಈ ತರಬೇತಿಯನ್ನು ಕರ್ನಾಟಕ ರಾಜ್ಯ ಪ್ರಸೂತಿ ಮತ್ತು ಸ್ತ್ರೀರೋಗ ಸಂಸ್ಥೆ (ಕೆಎಸ್‍ಒಜಿಎ) ಮೂಲಕ ನಿರ್ವಹಿಸಲಾಗುತ್ತಿದೆ. ಕರ್ನಾಟಕದ ಮತ್ತು ಇತರೆ ರಾಜ್ಯಗಳಲ್ಲಿ ಆಯ್ಕೆ ಮಾಡಲಾದ ಆಸ್ಪತ್ರೆಗಳಲ್ಲಿ ವಿಡಿಯೋಕಾನ್ಫರೆನ್ಸಿಂಗ್ ಮೂಲಕ ಸಿಬ್ಬಂದಿಗೆ ಪ್ರತಿನಿತ್ಯ ತರಬೇತಿ ನೀಡಲಾಗುತ್ತದೆ. ಇಲ್ಲಿಯವರೆಗೆ ತರಬೇತಿಯು ರಾಜ್ಯದ ವಿಜಯಪುರ, ಬೆಳಗಾವಿ, ಹುಬ್ಬಳ್ಳಿ, ಧಾರವಾಡ, ಹಾಸನ, ಚನ್ನರಾಯಪಟ್ಟಣ, ಗದಗ, ಕೊಪ್ಪಳ, ಕಲ್ಬುರ್ಗಿ ಮತ್ತು ಮಂಡ್ಯಗಳಲ್ಲಿ ಪೂರ್ಣಗೊಳಿಸಲಾಗಿದೆ. ಮುಂದಿನ 12 ದಿನಗಳಲ್ಲಿ ಬಾಗಲಕೋಟೆ, ಉಡುಪಿ, ಬಳ್ಳಾರಿ, ಮಂಗಳೂರು ಚಿಕ್ಕಮಗಳೂರು, ಮೈಸೂರು, ಬೆಂಗಳೂರು, ಚಿತ್ರದುರ್ಗ, ತುಮಕೂರು, ರಾಯಚೂರು, ಶಿವಮೊಗ್ಗ, ದಾವಣಗೆರೆ ಮತ್ತು ಬೀದರ್ ಜಿಲ್ಲೆಗಳಲ್ಲಿ ತರಬೇತಿ ನಡೆಸಲಿದೆ.
ಹೆಚ್ಚಿನ ಮಾಹಿತಿಗಾಗಿ ಸಿಇಒ ಮತ್ತು ಅಧ್ಯಕ್ಷರು, ಆರ್ಟಿಸ್ಟ್, ಭಾರತ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ತಾಂತ್ರಿಕ ಸಲಹೆಗಾರರು ಐಡಿಎಫ್ (ಇಂಟರ್‍ನ್ಯಾಷನಲ್ ಡಯಾಬಿಟಿಸ್ ಫೆಡರೇಷನ್)ನ ಆಗ್ನೇಯ ಏಷ್ಯಾದ ವಕ್ತಾರೆ ಡಾ.ಹೇಮಾ ದಿವಾಕರ್ (ಮೊಬೈಲ್ ಸಂಖ್ಯೆ 9844046724 ) ಸಂಪರ್ಕಿಸಲು ಪ್ರಕಟಣೆ ತಿಳಿಸಿದೆ.