ಬೆಂಗಳೂರು, ಜೂ 4, ಕೋವಿಡ್ -19 ಹರಡುವುದನ್ನು ತಡೆಯಲು ಹಿನ್ನೆಲೆಯಲ್ಲಿ ರಾಜ್ಯದ ಜಿಲ್ಲಾ, ಕೌಟುಂಬಿಕ ನ್ಯಾಯಾಲಯಗಳಿಗೆ ನೀಡಲಾಗಿದ್ದ ರಜೆಯನ್ನು ಒಂದು ತಿಂಗಳ ಕಾಲ ವಿಸ್ತರಿಸಿರುವುದನ್ನು ವಿರೋಧಿಸಿ ನಗರದಲ್ಲಿ ವಕೀಲರು ಪ್ರತಿಭಟನೆ ನಡೆಸಿದರು. ಕೋ ಆರ್ಡಿನೇಟಂಗ್ ಕಮಿಟಿ ಫಾರ್ ಅಡ್ವೊಕೇಟ್ಸ್ ವೆಲಫೇರ್ ಕೋವಿಡ್-19' ನೇತೃತ್ವದಲ್ಲಿ ಸಿಟಿ ಸಿವಿಲ್ ನ್ಯಾಯಾಲಯ ಎದುರು ನೂರಾರು ವಕೀಲರು ಪ್ರತಿಭಟನೆ ನಡೆಸಿದರು. ಕಳೆದ ಮೂರು ತಿಂಗಳಿಂದ ರಾಜ್ಯದಲ್ಲಿ ಲಾಕ್ ಡೌನ್ ಘೋಷಣೆಯಾಗಿದ್ದರಿಂದ ಅನೇಕ ವಕೀಲರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಬ್ಬರು ವಕೀಲರು ಈಗಾಗಲೇ ಮೃತಪಟ್ಟಿದ್ದಾರೆ. ಜೂನ್ 1ರಿಂದ ಕಾರ್ಯಾಂಗ ಸಂಪೂರ್ಣ ಪ್ರಮಾಣದಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಆದರೆ, ನ್ಯಾಯಾಂಗಕ್ಕೆ ಮಾತ್ರ ನಿರ್ಬಂಧ ವಿಧಿಸಲಾಗಿದೆ. ತಕ್ಷಣ ನ್ಯಾಯಲಯಗಳು ಪೂರ್ಣ ಪ್ರಮಾಣದ ಕಲಾಪ ಆರಂಭಿಸಬೇಕು.
ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.ಕೋವಿಡ್-19ರ ಪರಿಣಾಮ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ವಕೀಲರಿಗೆ ಕೂಡಲೇ ತಲಾ 1 ಲಕ್ಷ ರೂ. ಪರಿಹಾರ ವಿತರಿಸಬೇಕು ಎಂದು ಆಗ್ರಹಿಸಿದರು. ವಿಡಿಯೊ ಕಾನ್ಫರೆನ್ಸ್ ಮುಖಾಂತರ ಕಲಾಪ ನಡೆಸಲು ಎಲ್ಲೆಡೆ ಡಿಜಿಟಲ್ ಮೂಲ ಸೌಕರ್ಯ ಇಲ್ಲ. ಹಲವೆಡೆ ನೆಟ್ ವರ್ಕ್ ಕೊರತೆ ಇದೆ. ಹೀಗಾಗಿ ವಿಡಿಯೊ ಕಾನ್ಫರೆನ್ಸ್ ವಿಚಾರಣೆ ವೇಳೆ ವಕೀಲರು, ನ್ಯಾಯಾಧೀಶರು ತೊಂದರೆ ಅನುಭವಿಸುತ್ತಿದ್ದಾರೆ ಎಂದರು. ನ್ಯಾಯಾಲಯಗಳನ್ನು ತಕ್ಷಣ ಪುನರಾಂಭಿಸಬೇಕು, ರಾಜ್ಯ ವಕೀಲರ ಪರಿಷತ್ ಮತ್ತು ಬೆಂಗಳೂರು ವಕೀಲರ ಸಂಘ ನ್ಯಾಯಮಿತ್ರ ಬ್ಯಾಂಕ್ ಮತ್ತು ಸಹಕಾರ ಬ್ಯಾಂಕುಗಳ ಮುಖಾಂತರ ಹಣಕಾಸಿನ ನೆರವು ಒದಗಿಸಲು ಮುಂದಾಗಬೇಕು ಎಂಬ ಬೇಡಿಕೆಗಳನ್ನು ವಕೀಲರು ಮುಂದಿರಿಸಿದ್ದಾರೆ.ಮುಂದಿನ ದಿನಗಳಲ್ಲಿ ಪ್ರತಿಭಟನೆಯನ್ನು ರಾಜ್ಯಾದ್ಯಂತ ವಿಸ್ತರಿಸಲಾಗುವುದು ಮತ್ತು ನಾಳೆಯಿಂದ ಸರಣಿ ಉಪವಾಸ ಆರಂಭಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.ಪ್ರತಿಭಟನೆಯಲ್ಲಿ ವಕೀಲರಾದ ಬಾಲನ್, ಭಕ್ತವತ್ಸಲ, ಮುನಿಯಪ್ಪ, ದೊರೆರಾಜು, ಭರತ್, ಸುಮನಾ ಹೆಗಡೆ, ನಿರ್ಮಲಾ, ವೀಣಾ ಮತ್ತಿತರರು ಇದ್ದರು.