ನವದೆಹಲಿ, ನ 4: ಸಿಖ್ ವಿರೋಧಿ ಗಲಭೆಗೆ ಸಂಬಂದಪಟ್ಟಂತೆ ಕಾಂಗ್ರೆಸ್ ಮಾಜಿ ನಾಯಕ ಸಜ್ಜನ್ ಕುಮಾರ್ ಸಲ್ಲಿಸಿರುವ ಜಾಮೀನು ಅರ್ಜಿ ವಿಚಾರಣೆಗೆ ಸುಪ್ರೀಂ ಕೋರ್ಟ್ ಸಮ್ಮತಿಸಿದೆ.
ದೆಹಲಿ ಹೈಕೋರ್ಟ್ 1984ರ ಸಿಖ್ ವಿರೋಧಿ ದಂಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರಿಗೆ ಇತ್ತೀಚೆಗೆ ಜೀವಾವಧಿ ಶಿಕ್ಷೆ ವಿಧಿಸಿದ್ದು, ಸದ್ಯ ಅವರು ಸೆರೆವಾಸದಲ್ಲಿದ್ದಾರೆ.ಈ ಸಂಬಂಧ ಹಿರಿಯ ನ್ಯಾಯವಾದಿ ಶೇಖರ್ ನಫಾಡೆ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಮುಖ್ಯನ್ಯಾಯಮೂರ್ತಿ ರಂಜನ್ ಗೊಗೋಯ್ ಪರಿಶೀಲಿಸಿ, ತ್ವರಿತ ವಿಚಾರಣೆಗೆ ಸಹಮತ ವ್ಯಕ್ತಪಡಿಸಿದ್ದಾರೆ.
ಇದಕ್ಕೂ ಮೊದಲು ಸಜ್ಜನ್ ಕುಮಾರ್ ಅವರು ದೆಹಲಿ ಹೈಕೋರ್ಟ್ ತೀರ್ಪುನ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಅಲ್ಲದೆ, ಇದರ ವಿಚಾರಣೆ ಬಾಕಿ ಇರುವ ಕಾರಣ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು.
ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ ಹತ್ಯೆ ನಡೆದ ಬೆನ್ನಲ್ಲೇ ದೆಹಲಿಯ ಕೆಲವು ಪ್ರದೇಶಗಳಲ್ಲಿ ಸಿಖ್ ವಿರೋಧಿ ಗಲಭೆ ನಡೆದಿದ್ದು ನೂರಾರು ಅಮಾಯಕರನ್ನು ಕೊಂದು ಹಾಕಲಾಗಿತ್ತು, ಇದಕ್ಕೆ ಕುಮ್ಮಕ್ಕು ನೀಡಿದ ಗುರುತರ ಆರೋಪ ಸಜ್ಜನ್ ಕುಮಾರ್ ಮೇಲಿದೆ.