ದುಬೈನಿಂದ ಬಂದಿದ್ದ ಇಬ್ಬರು ಭಟ್ಕಳ ವ್ಯಕ್ತಿಗಳಲ್ಲಿ ಕೊರೊನಾ ಸೋಂಕು ದೃಢ

ಭಟ್ಕಳ್, ಮಾ 24,  ಕಳೆದ ಮಾರ್ಚ್ 21 ರಂದು  ದುಬೈನಿಂದ  ಮಂಗಳೂರು ವಿಮಾನ ನಿಲ್ದಾಣಕ್ಕೆ  ಬಂದಿಳಿದಿದ್ದ   ಇಬ್ಬರು  ಭಟ್ಕಳದ ವ್ಯಕ್ತಿಗಳಲ್ಲಿ ಮಾರಕ ಕೊರೊನಾ ವೈರಸ್  ಇರುವುದು ದೃಢಪಟ್ಟಿದೆ.40 ವರ್ಷದ ವ್ಯಕ್ತಿಯಲ್ಲಿ  ಮಾರಕ ಕೋವಿಡ್  -19  ಸೋಂಕು  ಇರುವುದು ಪರೀಕ್ಷೆಯಿಂದ ದೃಢಪಟ್ಟಿದ್ದು,   ಅಂದಿನ ದಿನವೇ ದುಬೈನಿಂದ ಬಂದಿದ್ದ  65 ವರ್ಷದ ವ್ಯಕ್ತಿಯಲ್ಲೂ  ವೈರಾಣು ಇರುವುದು ಪತ್ತೆಯಾಗಿದೆ.ಈ ವ್ಯಕ್ತಿ   ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ನಂತರ ಮಂಗಳೂರು- ಭಟ್ಕಳ್ ರೈಲಿನಲ್ಲಿ ತಲುಪಿದ್ದ  ಎಂದು ವರದಿಯಾಗಿದೆ. ಈ ಇಬ್ಬರೂ ವ್ಯಕ್ತಿಗಳು  ಭಟ್ಕಳದವರಾಗಿದ್ದು, ಪ್ರಸ್ತುತ ಅವರನ್ನು  ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕಲ್ಪಿಸಲಾಗಿದೆ. ಈ ಇಬ್ಬರೊಂದಿಗೆ ಸಂಪರ್ಕಕಕ್ಕೆ   ಬಂದಿದ್ದವರ ಪತ್ತೆಗೆ   ಆರೋಗ್ಯ  ಅಧಿಕಾರಿಗಳು  ಶ್ರಮಿಸುತ್ತಿದ್ದಾರೆ.
ದುಬೈನಿಂದ  ಭಟ್ಕಳ್ ಗೆ  ಬಂದ ಮೂರನೇ ವ್ಯಕ್ತಿಯಲ್ಲಿ ಮಾರಕ ಸೋಂಕು ಕಾಣಿಸಿಕೊಂಡಿದ್ದು,  ಇದಕ್ಕೂ ಮೊದಲು 22 ವರ್ಷದ ಯುವಕನಿಗೆ  ಸೋಂಕು ತಗುಲಿರುವುದು ದೃಢಪಟ್ಟಿತ್ತು. ಆದರೆ, ಭಟ್ಕಳ  ಪಟ್ಟಣದ  ಜನರು ಯಾವುದೇ ಭೀತಿಗೊಳಗಾವ   ಆಗತ್ಯವಿಲ್ಲ. ಇಡೀ ಪಟ್ಟಣ  ಲಾಕ್ ಡೌನ್ ಮಾಡಲಾಗಿದೆ ಎಂದು ಉತ್ತರ ಕನ್ನಡ ಜಿಲ್ಲಾಧಿಕಾರಿ ಡಾ. ಹರೀಶ್ ಕುಮಾರ್   ಧೈರ್ಯ ಹೇಳಿದ್ದಾರೆ.  ಜನರು ಯಾವುದೇ ತುರ್ತು ಪರಿಸ್ಥಿತಿಯನ್ನು   ಹೊರತುಪಡಿಸಿ ಲಾಕ್ ಡೌನ್  ಅವಧಿಯಲ್ಲಿ ಮನೆಯಿಂದ ಹೊರಬರಬಾರದು ಎಂದು ಮನವಿ ಮಾಡಿದ್ದಾರೆ.