ಬಳ್ಳಾರಿಯ ಒಂದೇ ಕುಟುಂಬದ ಮೂವರಿಗೆ ಕೊರೋನಾ ಸೋಂಕು- ಶ್ರೀರಾಮುಲು

ಬೆಂಗಳೂರು, ಮಾ 31 ,ರಾಜ್ಯದಲ್ಲಿ ಕೊರೋನಾ ವೈರಾಣು - ಕೋವಿಡ್ ೧೯ ಸೋಂಕಿನ ಪ್ರಕರಣಗಳು ಮತ್ತಷ್ಟು ಹೆಚ್ಚಳವಾಗಿದ್ದು, ಇದರೊಂದಿಗೆ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ ೯೧ಕ್ಕೆ ಏರಿಕೆಯಾಗಿದೆ. ಒಂದು ವಾರ ಕಟ್ಟುನಿಟ್ಟಿನ ಕ್ರಮ ಕೈಗೊಂಡಲ್ಲಿ, ಸಮುದಾಯದಲ್ಲಿ ಸೋಂಕು ಹರಡುವುದನ್ನು ನಿಯಂತ್ರಿಸಬಹುದಾಗಿದ್ದು, ಬಳ್ಳಾರಿ ಜಿಲ್ಲೆಯ ಹೊಸಪೇಟೆಯಲ್ಲಿ ಒಂದೇ ಕುಟುಂಬದ ಮೂವರಿಗೆ ಕೊರೋನಾ ಸೋಂಕು ತಗುಲಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಹೇಳಿದ್ದಾರೆ.ಈ ಕುರಿತು ಟ್ವೀಟ್ ಮಾಡಿರುವ ಅವರು, ಸೋಂಕಿತರನ್ನು ಪ್ರತ್ಯೇಕಿಸಲ್ಪಟ್ಟ ಕೇಂದ್ರದಲ್ಲಿ ಇರಿಸಲಾಗಿದ್ದು, ಚಿಕಿತ್ಸೆ ಮುಂದುವರಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.ಇದೇ ಮೊದಲ ಬಾರಿಗೆ ಬಳ್ಳಾರಿ ಜಿಲ್ಲೆಯಲ್ಲಿ ಕೊರೋನಾ ಸೋಂಕು ಪತ್ತೆಯಾಗಿದೆ. ಸೋಂಕಿತರನ್ನು ಕಳೆದ ಎರಡು ದಿನಗಳ ಹಿಂದೆಯೇ ಬಳ್ಳಾರಿಯ ಜಿಲ್ಲಾಸ್ಪತ್ರೆಗೆ ಕರೆತಂದು ಐಸೊಲೇಷನ್ ವಾರ್ಡನಲ್ಲಿ ಇರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಸ್.ಎಸ್. ನಕುಲ್ ತಿಳಿಸಿದ್ದಾರೆ.
ಇಂದಿನಿಂದ ಹೊಸಪೇಟೆ ನಗರವನ್ನು ಸಂಪೂರ್ಣ ಬಂದ್ ಮಾಡುತ್ತಿದ್ದು, ಬೆಳಿಗ್ಗೆ ೯ ರಿಂದ ೧೦ ರವರೆಗೆ ಮಾತ್ರ ದಿನ ನಿತ್ಯದ ಅಗತ್ಯ ವಸ್ತುಗಳ ಖರೀದಿಗೆ ಹೊರ ಬರಬಹುದು. ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು  ಹೊಸಪೇಟೆ ನಗರದ ಪ್ರತಿಯೊಂದು ಮನೆಗೂ ಭೇಟಿ ನೀಡಿ ಪರಿಶೀಲನೆ ಮಾಡಲಿದ್ದಾರೆ ಎಂದರು.ಬಳ್ಳಾರಿಯಲ್ಲಿ ನಿನ್ನೆವರೆಗೆ ೫೮ ಸಾವಿರದ ೭೭೭ ಜನರನ್ನು ತಪಾಸಣೆ ಮಾಡಲಾಗಿದ್ದು, ಇದುವರೆಗೆ ಸೋಂಕು ಪತ್ತೆಗೆ ಕಳುಹಿಸಲಾದ ೪೯ ಸ್ಯಾಂಪಲ್‌ಗಳ  ಪೈಕಿ ೪೨ ವರದಿಗಳು ನೆಗೆಟಿವ್ ಆಗಿವೆ. ಜಿಲ್ಲೆಯಲ್ಲಿ ೫೩೬ ಜನ  ಗೃಹಬಂಧನದಲ್ಲಿದ್ದಾರೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.