ಬೀಜಿಂಗ್, ಫೆ 6 : ಚೀನಾದಲ್ಲಿ ಒಟ್ಟು 19 ವಿದೇಶಿ ಪ್ರಜೆಗಳು ಕರೋನವೈರಸ್ ಸೋಂಕು ದೃಢಪಟ್ಟಿದ್ದು, ಈ ಪೈಕಿ ಇಬ್ಬರು ಗುಣಮುಖರಾಗಿ ಆಸ್ಪತ್ರೆಯಿಂದ ಮನೆಗೆ ತರಳಿದ್ದು, ಉಳಿದ 17 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಪ್ರತ್ಯೇಕ ವಾರ್ಡ್ ಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಸರ್ಕಾರದ ವಕ್ತಾರರು ಗುರುವಾರ ತಿಳಿಸಿದ್ದಾರೆ.
ಚೀನಾದಲ್ಲಿನ ದೇಶವಾಸಿಗಳು ಮತ್ತು ವಿದೇಶಿ ಪ್ರಜೆಗಳ ಜೀವನ ಮತ್ತು ಆರೋಗ್ಯವನ್ನು ಸರ್ಕಾರ ತನ್ನ ಮೊದಲ ಆದ್ಯತೆಯಾಗಿರಿಸಿದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಹುವಾ ಚುನೈಂಗ್ ಆನ್‌ಲೈನ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಚೀನಾದಲ್ಲಿ ಸಾಂಕ್ರಾಮಿಕ ರೋಗ ತಡೆಗಟ್ಟುವಿಕೆ ಮತ್ತು ನಿಯಂತ್ರಣದ ಕುರಿತು ಸರ್ಕಾರ ಸಮಯೋಚಿತ, ಬಹುಭಾಷಾ ಮಾಹಿತಿ ಮತ್ತು ಸಲಹಾ ಸೇವೆಗಳನ್ನು ಒದಗಿಸಿದೆ ಎಂದು ಅವರು ಹೇಳಿದ್ದಾರೆ.
ವಿದೇಶಾಂಗ ಸಚಿವಾಲಯ ಮತ್ತು ಸಂಬಂಧಿತ ಸ್ಥಳೀಯ ಸರ್ಕಾರಗಳು ಆತಂಕಗಳಿಗೆ ಸಮಯೋಚಿತವಾಗಿ ಸ್ಪಂದಿಸಲು ಚೀನಾದಲ್ಲಿನ ವಿದೇಶಿ ರಾಯಭಾರ ಕಚೇರಿಗಳು ಮತ್ತು ದೂತಾವಾಸಗಳಿಗೆ ಸಮಗ್ರ ಮಾಹಿತಿಯನ್ನು ನೀಡುತ್ತಿವೆ ಎಂದು ಹುವಾ ಹೇಳಿದ್ದಾರೆ.
ವಿದೇಶೀಯರ ಅಗತ್ಯತೆಗಳನ್ನು ಪೂರೈಸಲು, ಸಾಂಕ್ರಾಮಿಕ ತಡೆಗಟ್ಟುವಿಕೆಗೆ ಅನೇಕ ಪ್ರಾಂತ್ಯಗಳು ಮತ್ತು ನಗರಗಳಲ್ಲಿ ವಾಸಿಸುತ್ತಿರುವ ವಿದೇಶಿಯರನ್ನು ಸ್ಥಳೀಯ ಸರ್ಕಾರಗಳು ಮತ್ತು ಸಮುದಾಯಗಳು ತಮ್ಮ ಕಾರ್ಯ ಕಾರ್ಯವಿಧಾನದಲ್ಲಿ ಸೇರಿಸಿಕೊಂಡಿವೆ ಎಂದು ಅವರು ಹೇಳಿದ್ದಾರೆ.
ಚೀನಾದಲ್ಲಿ ವಿಶೇಷವಾಗಿ ಹುಬೈ ಪ್ರಾಂತ್ಯದ ವುಹಾನ್ ನಲ್ಲಿರುವ ವಿದೇಶಿ ಪ್ರಜೆಗಳ ಕಾಳಜಿ ಮತ್ತು ಸಮಸ್ಯೆಗಳನ್ನು ಪರಿಹರಿಸಲು ಸರ್ಕಾರ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಿದೆ ಎಂದು ಹುವಾ ತಿಳಿಸಿದ್ದಾರೆ.