ಕೊರೊನಾ ವೈರಾಣು ಸೋಂಕು : ನಿಗಾ ವಹಿಸುವಂತೆ ರಾಜ್ಯ, ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಸರ್ಕಾರ ಸೂಚನೆ

ನವದೆಹಲಿ, ಫೆ 3, ಹೊಸದಾಗಿ ಕಾಣಿಸಿಕೊಂಡಿರುವ ಕೊರೊನಾ ವೈರಾಣು ಸೋಂಕು ಹರಡದಂತೆ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ನಿಗಾ ವಹಿಸಬೇಕು ಎಂದು ಎಲ್ಲಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯಮಂತ್ರಿಗಳಿಗೆ ಮತ್ತು ಲೆಫ್ಟಿನೆಂಟ್ ಗವರ್ನರ್ ಗಳಿಗೆ ಕೇಂದ್ರ ಸರ್ಕಾರ ಪತ್ರ ಬರೆದಿದೆ. ಕೇರಳ ರಾಜ್ಯದಲ್ಲಿ ಪ್ರಸ್ತುತ ಎರಡು ಕೊರೊನಾ ವೈರಾಣು ಸೋಂಕು ಪ್ರಕರಣಗಳು ದೃಢಪಟ್ಟಿವೆ. ಈ ಸ್ಥಿತಿಯ ಸಂಬಂಧ ಕೇರಳ ರಾಜ್ಯಕ್ಕೆ ಎಲ್ಲ ಸಾಧ್ಯ ನೆರವು ನೀಡುವುದಾಗಿ ಕೇಂದ್ರ ಸರ್ಕಾರ ಭರವಸೆ ನೀಡಿದೆ. 

 ಈ ಬೆಳವಣಿಗೆಗಳ ಸಂಬಂಧ ಕೇಂದ್ರ ಸರ್ಕಾರ ನಿಗಾ ವಹಿಸಿದೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಹೇಳಿದ್ದಾರೆ. ಮುನ್ನೆಚ್ಚರಿಕಾ ಕ್ರಮವಾಗಿ ಥಾಯ್ಲೆಂಡ್ ಮತ್ತು ಸಿಂಗಾಪುರಗಳಿಂದ ಭಾರತಕ್ಕೆ ಬರುವ ಜನರನ್ನು ವಿಮಾನ ನಿಲ್ದಾಣಗಳಲ್ಲಿಯೇ ತಪಾಸಣೆಗೆ ಒಳಪಡಿಸಲಾಗಿದೆ. ಈವರೆಗ ಚೀನಾ ಮತ್ತು ಹಾಂಕಾಂಗ್ ನಿಂದ ಭಾರತಕ್ಕೆ ಬರುವವರನ್ನು ಮಾತ್ರ ತಪಾಸಣೆಗೆ ಒಳಪಡಿಸಲಾಗಿತ್ತು ಎಂದು ಸಚಿವರು ಮಾಹಿತಿ ನೀಡಿದ್ದಾರೆ. ಇತ್ತೀಚೆಗೆ ಈ ಪ್ರದೇಶಗಳಿಂದ ಹಿಂದಿರುಗಿದವರೂ ಕೂಡ ನಿಯಂತ್ರಣ ಕೊಠಡಿಗಳನ್ನು ಸಂಪರ್ಕಿಸಿ ವೈದ್ಯಕೀಯ ತಪಾಸಣೆಗೆ ಒಳಪಡುವಂತೆ ಸೂಚನೆ ನೀಡಲಾಗಿದೆ. ಅವರು ಮನೆಯಲ್ಲಿಯೇ ಪ್ರತ್ಯೇಕವಾಗಿರುವಂತೆ ಕೋರಲಾಗಿದ್ದು ಸೋಂಕು ಹರಡದಂತೆ ತಡೆಯಲು ಎರಡು ವಾರಗಳ ಕಾಲ ನಿಗಾದಲ್ಲಿರುವಂತೆ ಸೂಚಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.