ಬೆಂಗಳೂರು, ಮೇ 14, ರಾಜ್ಯದಲ್ಲಿ ಬುಧವಾರ ಸಂಜೆಯಿಂದ ಗುರುವಾರ ಮಧ್ಯಾಹ್ನದವರೆಗೆ ಮಾರಣಾಂತಿಕ ಕೊರೋನಾ ಸೋಂಕಿಗೆ ಇಬ್ಬರು ಬಲಿಯಾಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ 80 ವರ್ಷದ ಮಹಿಳೆ ಸೋಂಕಿನಿಂದ ಮೃತಪಟ್ಟಿದ್ದಾರೆ. ಇವರು ಏ.26ರಂದು ಪಾರ್ಶ್ವವಾಯುವಿನ ಕಾರಣದಿಂದ ಆಸ್ಪತ್ರೆಗೆ ದಾಖಲಾಗಿದ್ದರು. ನಂತರ ಅವರಲ್ಲಿ ಸೊಂಕು ಪತ್ತೆಯಾಗಿದ್ದರಿಂದ ಐಸಿಯುಗೆ ವರ್ಗಾಯಿಸಲಾಗಿತ್ತು. ಗುರುವಾರ ಬೆಳಗ್ಗೆ ಅವರು ಸೆಪ್ಟಿಕ್ ಶಾಕ್ ನಿಂದ ಮೃತಪಟ್ಟಿದ್ದಾರೆ.
ನ್ಯುಮೋನಿಯಾ ಮತ್ತು ಉಸಿರಾಟದ ಸಮಸ್ಯೆಯಿಂದ ಬೆಂಗಲೂರಿನ ಆಸ್ಪತ್ರೆಗೆ ದಾಖಲಾಗಿದ್ದ ಆಂದ್ರಪ್ರದೇಶದ ಅನಂತಪುರದ 60 ವರ್ಷದ ವೃದ್ಧ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಇವರು ಕಡಿಮೆ ರಕ್ತದ ಒತ್ತಡ ಮತ್ತು ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದರು ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಜೊತೆಗೆ, ರಾಜ್ಯದಲ್ಲಿ ಹೊಸ 22 ಹೊಸ ಕೊರೋನಾ ಪ್ರಕರಣಗಳು ವರದಿಯಾಗಿವೆ. ಇದರಿಂದ ಒಟ್ಟು ಸೋಂಕಿತರ ಸಂಖ್ಯೆ 981ಕ್ಕೇರಿಕೆಯಾಗಿದ್ದು, 36 ಜನರು ಮೃತಪಟ್ಟಿದ್ದಾರೆ. ಒಟ್ಟು 456 ಮಂದಿ ಗುಣಮುಖರಾಗಿದ್ದಾರೆ.ಬೆಳಗಾವಿಯ 27 ವರ್ಷದ ಗರ್ಭಿಣಿಯಲ್ಲಿ ಸೋಂಕು ಪತ್ತೆಯಾಗಿದೆ. ಇವರು ಮಹಾರಾಷ್ಟ್ರಕ್ಕೆ ಪ್ರಯಾಣ ಬೆಳೆಸಿದ ಹಿನ್ನೆಲೆ ಹೊಂದಿದ್ದು, ಬಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದಂತೆ ದಾವಣಗೆರೆಯಲ್ಲಿ 1, ಮಂಡ್ಯದಲ್ಲಿ ಮುಂಬೈಗೆ ಪ್ರಯಾಣ ಬೆಳೆಸಿದ ನಾಲ್ವರು, ಬೆಂಗಳೂರು ನಗರದಲ್ಲಿ 5, ಗದಗದ 4, ದಾವಣಗೆರೆಯ 2, ಬಾಗಲಕೋಟೆಯಲ್ಲಿ 1 ಮತ್ತು ಬೀದರ್ ನಲ್ಲಿ 4 ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ.