ಅಮೆರಿಕದಲ್ಲಿ ಕರೋನ ಅಟ್ಟ ಹಾಸ, ಒಂದೇ ದಿನ 47 ಸಾವಿರ ಪ್ರಕರಣ ದಾಖಲು

ವಾಷಿಂಗ್ಟನ್, ಜುಲೈ 1: ಕರೋನ ಸೋಂಕಿಗೆ  ತತ್ತರಿಸಿ ಹೋಗಿರುವ ಅಮೆರಿಕಾದಲ್ಲಿ ಕಳೆದ 24 ಗಂಟೆಗಳಲ್ಲಿ ಬೆಚ್ಚಿಬೀಳಿಸುವ ರೀತಿಯಲ್ಲಿ 47,ಸಾವಿರ  ಜನರಿಗೆ ಸೋಂಕು ತಗುಲಿದೆ. ವೈರಾಣು ಕಾಣಿಸಿಕೊಂಡಾಗಿನಿಂದ ಇದೇ ಮೊದಲ ಬಾರಿಗೆ ಇಷ್ಟೊಂದು ಪ್ರಮಾಣದ ಹೊಸ ಪ್ರಕರಣಗಳು ವರದಿಯಾಗಿದೆ ಎಂದು  ಸುದ್ದಿ ಸಂಸ್ಥೆ  ವರದಿ ಮಾಡಿದೆ.

     ವಿಪರ್ಯಾಸವೆಂದರೇ ಈಗಿರುವ ಪ್ರಮಾಣಕ್ಕಿಂತಲೂ ಎರಡು ಪಟ್ಟು ಅಧಿಕ ಮಂದಿ ಸೊಂಕಿಗೆ ತುತ್ತಾಗುವ ಕಾಲ ದೂರವಿಲ್ಲ ಎಂದು ಸರ್ಕಾರದ ಉನ್ನತ ಮಟ್ಟದ ಸಾಂಕ್ರಾಮಿಕ ರೋಗ ತಜ್ಞರೊಬ್ಬರು ಅಭಿಪ್ರಾಯಪಟ್ಟಿದ್ದಾರೆ.

     ಇಷ್ಟು ದಿನ ನ್ಯೂಯಾರ್ಕ್ ಕರೋನ  ಕೇಂದ್ರಬಿಂದುವಾಗಿತ್ತು. ಇದೀಗ ಕ್ಯಾಲಿಫೋರ್ನಿಯಾ, ಟೆಕ್ಸಾಸ್ , ಆರಿಜೋನಾ ಗಳಲ್ಲೂ ಕರೋನ  ಅಟ್ಟಹಾಸ  ಮೆರೆಯುತ್ತಿದೆ. ಪರಿಸ್ಥಿತಿ ಕೈ ಮೀರಿದ್ದು ಸೋಂಕು ನಿಯಂತ್ರಣಕ್ಕೆ ಸಿಗುತ್ತಿಲ್ಲ. ಇದೇ ರೀತಿ ಮುಂದುವರೆದರೆ ಪ್ರತಿನಿತ್ಯ 1 ಲಕ್ಷ ಮಂದಿ ಸೋಂಕಿಗೆ ಬಾಧಿತರಾಗುತ್ತಾರೆ. ಇದರಿಂದ ಇಡೀ ದೇಶ ಅಪಾಯಕ್ಕೆ ತುತ್ತಾಗುತ್ತದೆ ಎಂದು ಸಾಂಕ್ರಮಿಕ ರೋಗಗಳ ತಜ್ಞ ಡಾ. ಆಂಥೋನಿ ಫೌಸಿ ಸೆನೆಟ್ ಗೆ ಮಾಹಿತಿ ನೀಡಿದ್ದಾರೆ.