ಬಳ್ಳಾರಿ, ಮೇ 21, ಮುಂಬೈ ಮೀನು ಮಾರುಕಟ್ಟೆಯಲ್ಲಿ ಕೆಲಸ ಮಾಡಿ ಜಿಲ್ಲೆಗೆ ವಾಪಸ್ಸಾದ 11 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಎಸ್. ಎಸ್.ನಕುಲ್ ತಿಳಿಸಿದ್ದಾರೆ.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಮೂರು ಕುಟುಂಬಗಳ ಸೋಂಕಿತರಲ್ಲಿ ಏಳು ಮಹಿಳೆಯರು, ಮೂವರು ಪುರುಷರು ಮತ್ತು ಒಬ್ಬ ಲಿಂಗತ್ವ ಅಲ್ಪಸಂಖ್ಯಾತರಿದ್ದಾರೆ. ಮಹಿಳೆಯರ ಪೈಕಿ ಒಬ್ಬ ಗರ್ಭಿಣಿ ಮತ್ತು ಒಬ್ಬ ಬಾಣಂತಿ ಇದ್ದಾರೆ ಎಂದು ಮಾಹಿತಿ ನೀಡಿದರು.'ಬಳ್ಳಾರಿ ನಗರದ 6, ಬಳ್ಳಾರಿ ತಾಲ್ಲೂಕಿನ ರೂಪನಗುಡಿಯ 3 ಮತ್ತು ಚಾಗನೂರಿನ ಇಬ್ಬರಿಗೆ ಸೋಂಕು ತಗುಲಿದ್ದು, ಬಾಣಂತಿಯ ಒಂಭತ್ತು ತಿಂಗಳ ಹಸುಗೂಸು ಸದ್ಯ ಅಜ್ಜ-ಅಜ್ಜಿ ಬಳಿ ಇದ್ದು, ಮಗುವಿನ ಗಂಟಲ ದ್ರವದ ಮಾದರಿಯನ್ನು ತಜ್ಞರ ನೆರವಿನೊಂದಿಗೆ ತೆಗೆದುಕೊಂಡು ನೇರವಾಗಿ ಪ್ರಯೋಗಾಲಯಕ್ಕೆ ಕಳಿಸಿಕೊಡಲಾಗುವುದು ಎಂದು ತಿಳಿಸಿದರು.
ಮೇ. 6 ರಂದು ಅನಂತಪುರದ 65 ಮಂದಿಯನ್ನು ಗುಂತಕಲ್ ರೈಲು ನಿಲ್ದಾಣ ದಿಂದ ನೇರವಾಗಿ ಕ್ವಾರಂಟೈನ್ ಕೇಂದ್ರಗಳಿಗೆ ಕರೆದೊಯ್ಯಲಾಗಿತ್ತು. ಹೀಗಾಗಿ ಅವರ ಊರುಗಳಲ್ಲಿ ಕಂಟೈನ್ಮೆಂಟ್ ಪ್ರದೇಶಗಳನ್ನು ಘೋಷಿಸುವ ಅಗತ್ಯವಿಲ್ಲ ಎಂದರು.11 ಸೋಂಕಿತರೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿದ್ದ 49 ಮಂದಿ ಸೇರಿ 187 ಜನರನ್ನು ಕ್ವಾರಂಟೈನ್ ಕೇಂದ್ರಗಳಲ್ಲಿ ಇರಿಸಿ ನಿಗಾ ವಹಿಸಲಾಗಿದೆ ಎಂದರು.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಕೆ.ಬಾಬಾ ಮಾತನಾಡಿ, ಕ್ವಾರಂಟೈನ್ ಕೇಂದ್ರಗಳಿಂದ ಕೆಲವರು ಪರಾರಿಯಾಗಿದ್ದ ಹಿನ್ನೆಲೆಯಲ್ಲಿ ಎಲ್ಲಾ ಕ್ವಾರಂಟೈನ್ ಕೇಂದ್ರಗಳಿಗೂ ಜಿಲ್ಲಾ ಸಶಸ್ತ್ರ ಮೀಸಲು ಪಡೆಯನ್ನು ನಿಯೋಜಿಸಲಾಗಿದೆ ಎಂದು ಅವರು ತಿಳಿಸಿದರು.