ಹೈದರಾಬಾದ್, ಮೇ ೮, ಜೆಇಇ ಅಡ್ವಾನ್ಸ್ಡ್ ಪರೀಕ್ಷೆ ಆಗಸ್ಟ್ ೨೩ ರಂದು ನಡೆಸಲಾಗುವುದು ಎಂದು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ದಿ ಸಚಿವ ರಮೇಶ್ ಪೋಖ್ರಿಯಾಲ್ ಗುರುವಾರ ಪ್ರಕಟಿಸಿದ್ದಾರೆ.ಈ ತಿಂಗಳ ೧೭ ರಂದು ನಡೆಯಬೇಕಾಗಿದ್ದ ಈ ಪರೀಕ್ಷೆಯನ್ನು ಕೊರೊನಾ ಕಾರಣದಿಂದ ಮುಂದೂಡಲಾಗಿದೆ. ಜೆಇಇ ಮೇನ್ಸ್ ಪರೀಕ್ಷೆಯಲ್ಲಿ ಅರ್ಹತೆ ಸಾಧಿಸಿದ ಟಾಪ್ ೨.೫ ಲಕ್ಷ ಮಂದಿ ವಿದ್ಯಾರ್ಥಿಗಳು ಜೆ ಇಇ ಅಡ್ವಾನ್ಸ್ ಡ್ ಪರೀಕ್ಷೆಗೆ ಆಯ್ಕೆಯಾಗಲಿದ್ದಾರೆ.ಜೆಇಇ ಮುಖ್ಯ ಪರೀಕ್ಷೆಗಳು ಜುಲೈ ೧೮ರಿಂದ ನಡೆಯಲಿವೆ, ಇದರಿಂದಾಗಿ ಎರಡೂ ಪರೀಕ್ಷೆಗಳ ನಡುವೆ ಒಂದು ತಿಂಗಳ ಸಮಯ ಲಭ್ಯವಾಗಲಿದೆ. ಜೆಇಇ ಅಡ್ವಾನ್ಸ್ಡ್ ಪರೀಕ್ಷೆಯನ್ನು ಆಗಸ್ಟ್ ೨೩ ರಂದು ನಡೆಸುವುದರಿಂದ ಐಐಟಿ, ಎನ್‌ಐಟಿಗಳಲ್ಲಿ ಈ ವರ್ಷದ ಶೈಕ್ಷಣಿಕ ವರ್ಷ ಸೆಪ್ಟಂಬರ್ ೧ ರಂದು ಆರಂಭಗೊಳ್ಳುವುದು ಅಸಾಧ್ಯವೆನಿಸಿದೆ. ಮುಖ್ಯ, ಅಡ್ವಾನ್ಸ್ಡ್ ಪರೀಕ್ಷಾ ಕೇಂದ್ರಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ಎನ್ ಟಿ ಎ ಆಲೋಚನೆ ನಡೆಸುತ್ತಿದೆ.ನೀಟ್ ಪರೀಕ್ಷೆ ಬರೆಯುವ ಸಮಯದಲ್ಲಿ ಪ್ರತಿ ವಿದ್ಯಾರ್ಥಿ ನಡುವೆ ಕನಿಷ್ಟ ೨ ಮೀಟರ್ ಅಂತರ ಇರುವಂತೆ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್ ಟಿ ಎ) ಕ್ರಮ ಕೈಗೊಂಡಿದೆ. ಪರೀಕ್ಷಾ ಕೇಂದ್ರಗಳ ಸಂಖ್ಯೆ ದುಪ್ಪಟ್ಟು ಗೊಳಿಸುವುದಾಗಿ ಪ್ರಕಟಿಸಿದೆ. ಪರೀಕ್ಷಾ ಕೇಂದ್ರಗಳನ್ನು ೩ ಸಾವಿರದಿಂದ ೬ ಸಾವಿರಕ್ಕೆ ಹೆಚ್ಚಿಸುವುದಾಗಿ ತಿಳಿಸಿದೆ.