ಕೊರೋನಾ ವಾರಿಯರ್ಸ್‌ ಅನ್ನು ಗೌರವಿಸಿದರೆ ಮಾತ್ರ ಕೊರೋನಾ ಗೆಲ್ಲಲು ಸಾಧ್ಯ: ಸುರೇಶ್ ಕುಮಾರ್

ಬೆಂಗಳೂರು, ಮೇ 10,ಮೂರನೇ  ಮಹಾಯುದ್ಧವನ್ನು ಇಡೀ ವಿಶ್ವ ಕೊರೋನಾ ವಿರುದ್ಧ ಎದುರಿಸುತ್ತಿದ್ದು, ನಮ್ಮ ನಡೆ‌ನುಡಿಗಳ  ಮೂಲಕ ನಮ್ಮೆಲ್ಲರ ಬದುಕನ್ನು ಪೊರೆಯುತ್ತಿರುವ ಕೊರೋನಾ ವಾರಿಯರ್ಸ್‌ ಗೆ ಗೌರವಿಸಿದನ್ನು  ನಾವೆಲ್ಲಾ ಕಲಿತಲ್ಲಿ ಮಾತ್ರ ನಾವು ಈ ಮಹಾ ವಿಶ್ವ ಯುದ್ಧವನ್ನು ಗೆಲ್ಲಲು ಸಾಧ್ಯ ಎಂದು  ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.ಬೆಂಗಳೂರಿನ ರಾಜಾಜಿನಗರದ ಭಾಷ್ಯಂ ವೃತ್ತದಲ್ಲಿ  ಕೊರೋನಾ ಸೇವೆಯಲ್ಲಿ ತೊಡಗಿಸಿಕೊಂಡಿರುವ ಆಶಾ ಕಾರ್ಯಕರ್ತೆಯರು, ಆರೋಗ್ಯ, ಪೊಲೀಸ್  ಸಿಬ್ಬಂದಿ, ಪೌರ ಕಾರ್ಮಿಕರುಗಳನ್ನು ಪುಷ್ಪಾರ್ಚನೆಯ ಮೂಲಕ‌ ಸನ್ಮಾನಿಸಿ ಅವರು  ಮಾತನಾಡಿದರು. ಕೊರೊನಾ ಮಹಾಮಾರಿ ಕರ್ನಾಟಕದಲ್ಲಿ ಹೆಚ್ಚಿನ ನಿಯಂತ್ರಣದಲ್ಲಿರುವುದಕ್ಕೆ  ಹಗಲಿರುಳೆನ್ನದೇ ಜನ ಸೇವೆಯಲ್ಲಿ ತೊಡಗಿಸಿಕೊಂಡಿರುವ ನಮ್ಮೆಲ್ಲ ಕೊರೋನಾ ವಾರಿಯರ್ಸ್‌  ನೇರ ಕಾರಣವೆಂದ ಸುರೇಶ್ ಕುಮಾರ್, ಕೊರೋನಾ ಒಡ್ಡುತ್ತಿರುವ ಬಹುಮುಖಿಯಾದ ಸವಾಲುಗಳನ್ನು  ಎದುರಿಸಲು ಪ್ರತಿ ವ್ಯಕ್ತಿಯೂ ತಮ್ಮ ಆಚಾರ ವಿಚಾರಗಳಲ್ಲಿ‌ ಸಕಾರಾತ್ಮಕ ಬದಲಾವಣೆಗಳನ್ನು  ತಂದುಕೊಳ್ಳಬೇಕು, ವೈಯಕ್ತಿಕ‌ ಸ್ವಚ್ಛತೆ, ಸಮುದಾಯ ಸ್ವಚ್ಛತೆಯಷ್ಟೇ ಸಾಮಾಜಿಕ  ಸ್ವಾಸ್ಥ್ಯವನ್ನು ಪ್ರೇರೇಪಿಸುತ್ತದೆನ್ನುವುದನ್ನು ನೆನಪಿನಲ್ಲಿಡಬೇಕೆಂದರು.
ಕೊರೊನಾ  ಪೂರ್ವ ಹಾಗೂ ಕೊರೊನಾ ನಂತರದ ದಿನಗಳು ಮುಂದಿನ‌ ದಿನಗಳಲ್ಲಿ ನಮ್ಮ ಜೀವನಶೈಲಿಯಾಗುವ  ಕಾರಣ, ಇದಕ್ಕೆ ಹೊಂದಿಕೊಳ್ಳುವ ರೀತಿಯಲ್ಲಿ ನಮ್ಮ ಬದುಕನ್ನು ರೂಪಿಸಿಕೊಳ್ಳಬೇಕೆಂದ  ಸುರೇಶ್ ಕುಮಾರ್, ಈ ಹೋರಾಟದಲ್ಲಿ ಕೊನೆಯ ಗೆಲುವು ಮನುಕುಲದ್ದಾಗಬೇಕೆಂದರು.ಸುಮಾರು  ಇನ್ನೂರಕ್ಕೂ ಹೆಚ್ಚು ಪೌರ ಸಿಬ್ಬಂದಿ, ಪೊಲೀಸ್, ವೈದ್ಯರು, ವೈದ್ಯಕೀಯ ಸಿಬ್ಬಂದಿ, ಆಶಾ  ಕಾರ್ಯಕರ್ತೆಯರು ಸೇರಿದಂತೆ ಕೊರೋನಾ ವಾರಿಯರ್ಸ್‌ ಗಳನ್ನು ರಾಜಾಜಿನಗರದ‌ ಭಾಷ್ಯಂ  ವೃತ್ತದಲ್ಲಿ‌ ಇಂದು ಸನ್ಮಾನಿಸಲಾಯಿತು. ಸಚಿವರಿಗೆ ಬೆಂಗಳೂರು ನಗರ ಪೊಲೀಸ್ ಆಯುಕ್ತ‌  ಭಾಸ್ಕರ್ ರಾವ್, ಬಿಬಿಎಂಪಿ ಆಯುಕ್ತ ಅನಿಲ್‌ಕುಮಾರ್ ಹಾಗೂ ಸ್ಥಳೀಯ ಬಿಬಿಎಂಪಿ ಸದಸ್ಯೆ  ದೀಪಾ ನಾಗೇಶ್ ಸಾಥ್ ನೀಡಿದರು.