ಬೆಂಗಳೂರು, ಮೇ 10,ರಾಜ್ಯದಲ್ಲಿ ಕೇವಲ ಅರ್ಧ ದಿನದಲ್ಲಿ 53 ಕೊರೋನಾ ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ. ಇದು ಕೊರೋನಾ ಸೋಂಕು ಪತ್ತೆಯಾದ ನಂತರ ರಾಜ್ಯದಲ್ಲಿ ದಾಖಲಾಗಿರುವ ಅತಿ ಹೆಚ್ಚಿನ ಪ್ರಕರಣವಾಗಿದೆ. ಜೊತೆಗೆ, ಶನಿವಾರ ಸಂಜೆ ಬೆಂಗಳೂರು ನಗರ ನಿವಾಸಿಯಾಗಿದ್ದ 56 ವರ್ಷದ ಮಹಿಳೆ ಸೋಂಕಿನಿಂದ ಮೃತಪಟ್ಟಿದ್ದಾರೆ. ಇದರಿಂದ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 847ಕ್ಕೇರಿಕೆಯಾಗಿದೆ. ಇಲ್ಲಿಯವರೆಗೆ 32 ಜನರು ಮೃತಪಟ್ಟಿದ್ದು, 405 ಮಂದಿ ಗುಣಮುಖರಾಗಿದ್ದಾರೆ. ಇವರಲ್ಲಿ ಬಹುತೇಕರು ತಬ್ಲಿಘಿ ಸಂಘಟನೆಗೆ ಸೇರಿದವರಾಗಿದ್ದಾರೆ. ಗುಜರಾತ್ ನ ಅಹಮದಾಬಾದ್ ಹಾಗೂ ರಾಜಸ್ತಾನದ ಅಜಮೀರ್ ಗೆ ಭೇಟಿ ನೀಡಿದವರು ಈಗ ರಾಜ್ಯಕ್ಕೆ ಹಿಂದಿರುಗಿದ್ದು, ಹೆಚ್ಚಿನವರಲ್ಲಿ ಸೋಂಕು ಪತ್ತೆಯಾಗಿದೆ.
ಶಿವಮೊಗ್ಗದ ಶಿಕಾರಿಪುರಕ್ಕೆ ಗುಜರಾತ್ ಅಹಮದಾಬಾದ್ ನಿಂದ ಆಗಮಿಸಿದ 8 ಮಂದಿ, ಬೆಳಗಾವಿಗೆ ರಾಜಸ್ತಾನದ ಅಜಮೀರ್ ನಿಂದ ಆಗಮಿಸಿದ 22 ಜನರು, ಉತ್ತರ ಕನ್ನಡ ಭಟ್ಕಳದಲ್ಲಿ 7, ಕಲಬುರಗಿಯಲ್ಲಿ ಮಹಾರಾಷ್ಟ್ರಗೆ ಪ್ರಯಾಣಿಸಿದ ಓರ್ವರು ಮತ್ತು ಸೋಂಕಿತರ ಸಂಪರ್ಕ ಹೊಂದಿದ್ದ ಓರ್ವರಲ್ಲಿ ಸೋಂಕು ಪತ್ತೆಯಾಗಿದೆ.ಬಾಗಲಕೋಟೆಯಲ್ಲಿ ರಾಜಸ್ಥಾನದ ಅಜಮೀರ್ ಗೆ ಪ್ರಯಾಣ ಬೆಳೆಸಿದ 8, ಇಲ್ಲಿಂದಲೇ ಆಗಮಿಸಿದ ಬೆಳಗಾವಿಯ ಓರ್ವ ವ್ಯಕ್ತಿ, ದಾವಣಗೆರೆಯ ಓರ್ವ ವ್ಯಕ್ತಿಗೆ ಸೋಂಕು ಪತ್ತೆಯಾಗಿದೆ. ಚಿಕ್ಕಬಳ್ಳಾಪುರ, ಚಿಂತಾಮಣಿಯ ಓರ್ವ ವ್ಯಕ್ತಿ, ಬೆಂಗಳೂರಿನ ಮೂವರಲ್ಲಿ ಸೋಂಕು ಪತ್ತೆಯಾಗಿದೆ.