ಬೆಂಗಳೂರು, ಮೇ 22, ಕೊರೊನಾ ವಾರಿಯರ್ಸ್ ಗೂ ಕೊರೊನಾ ಬೆನ್ನಟ್ಟಿದ್ದು, ಇದೀಗ ನಗರ ಸಂಚಾರ ಠಾಣೆಯ ಪೊಲೀಸ್ ಕಾನ್ ಸ್ಟೆಬಲ್ ಓರ್ವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ.ರಾಮಕೃಷ್ಣ ಹೆಗಡೆ ನಗರದ ನಿವಾಸಿಯಾಗಿರುವ ಕಾನ್‌ಸ್ಟೆಬಲ್, ಠಾಣೆಯೊಂದರಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಅಲ್ಲದೇ, ಕೆಲ ಬಾರಿ ಫ್ರೇಜರ್ ಟೌನ್ ಭಾಗದಲ್ಲಿಯೂ ಕಾರ್ಯ ಕರ್ತವ್ಯ ನಿರ್ವಹಿಸಿದ್ದರು ಎಂದು ತಿಳಿದು ಬಂದಿದೆ. ಕೊರೊನಾ ಕರ್ತವ್ಯದಲ್ಲಿದ್ದ ಕಾನ್ ಸ್ಟೇಬಲ್ ಮುಂಜಾಗ್ರತಾ ಕ್ರಮವಾಗಿ ಕಳೆದ ಏಪ್ರಿಲ್ ತಿಂಗಳಿನಲ್ಲೇ ಅವರ ಕುಟುಂಬದವರನ್ನು ತಮ್ಮೂರಿಗೆ ಕಳುಹಿಸಿ, ಮನೆಯಲ್ಲಿ ಒಬ್ಬರೇ ವಾಸವಾಗಿದ್ದರು.
ಇದೇ ತಿಂಗಳ 20ರಂದು ಪೇದೆ, ನಗರದ ಸಿ.ವಿ.ರಾಮನ್ ಆಸ್ಪತ್ರೆಯಲ್ಲಿ ಕೋವಿಡ್ -19 ವೈದ್ಯಕೀಯ ತಪಾಸಣೆಗೆ ಒಳಪಟ್ಟಿದ್ದು, ಗುರುವಾರ ರಾತ್ರಿ ಅವರಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ.ಸದ್ಯ ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ. ಪೇದೆ ಅವರ ಜೊತೆಗೆ ಸಂಪರ್ಕದಲ್ಲಿದ್ದ ಕೆಲವರನ್ನು ಈಗಾಗಲೇ ಕ್ವಾರಂಟೈನ್ ಗೆ ಒಳಪಡಿಸಲಾಗಿದೆ.
ಪೇದೆಗೆ ಕೊರೊನಾ ಸೋಂಕು ತಗುಲಿದ್ದರಿಂದ ಠಾಣೆಯನ್ನು ಸ್ಯಾನಿಟೈಸ್ ಮಾಡಲು ಹಾಗೂ ಅವರೊಂದಿಗೆ ಸಂಪರ್ಕ ಇಟ್ಟುಕೊಂಡಿದ್ದವರ ಬಗ್ಗೆ ಮಾಹಿತಿ ನೀಡುವಂತೆ ಸೂಚಿಸಲಾಗಿದೆ ಎಂದು ಸಂಚಾರ ವಿಭಾಗದ (ಪೂರ್ವ) ಡಿಸಿಪಿ ನಾರಾಯಣ ತಿಳಿಸಿದ್ದಾರೆ.