ಹೈದರಾಬಾದ್, ಮಾರ್ಚ್ 28, ಕೊರೊನಾ ಭೀತಿ ಹಿನ್ನೆಲೆಯಲ್ಲಿ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಗುರುವಾರ ಘೋಷಿಸಿರುವ ಕೆಲವು ಉಪಕ್ರಮಗಳಿಂದಾಗಿ ಬ್ಯಾಂಕ್ ಗಳಲ್ಲಿ ದಟ್ಟಣೆ ಹೆಚ್ಚಾಗಲಿದೆ ಎಂದು ಅಖಿಲ ಭಾರತ ಬ್ಯಾಂಕ್ ಉದ್ಯೋಗಿಗಳ ಸಂಘ ಎಐಬಿಇಎ ಶನಿವಾರ ಆತಂಕ ವ್ಯಕ್ತಪಡಿಸಿದೆ. ಹಣಕಾಸು ಸಚಿವೆಯ ಉಪಕ್ರಮಗಳಿಂದಾಗಿ ಗ್ರಾಮೀಣ ಮತ್ತು ಅರೆ ಗ್ರಾಮೀಣ ಪ್ರದೇಶಗಳಲ್ಲಿನ ಬ್ಯಾಂಕ್ ಗಳಲ್ಲಿ ದಿಢೀರ್ ದಟ್ಟಣೆ ಉಂಟಾಗಲಿದೆ. ಈ ಬ್ಯಾಂಕ್ ಶಾಖೆಗಳಲ್ಲಿ ಸಿಬ್ಬಂದಿಯೂ ಕಡಿಮೆ ಇರಲಿದ್ದು ಬ್ಯಾಂಕಿಂಗ್ ಕಾರ್ಯನಿರ್ವಹಣೆ ತೀವ್ರ ಕಷ್ಟಕರವಾಗಲಿದೆ ಎಂದು ಎಐಬಿಇಎ ವಿವರಿಸಿದೆ. ಹಣಕಾಸು ಸೇವೆಗಳ ಇಲಾಖೆಯ ಕಾರ್ಯದರ್ಶಿ ದಿಬಾಸಿಶ್ ಪಾಂಡೆ ಅವರಿಗೆ ಎಐಬಿಇಎ ಪ್ರಧಾನ ಕಾರ್ಯದರ್ಶಿ ವೆಂಕಟಾಚಲಂ ಬರೆದಿರುವ ಪತ್ರದಲ್ಲಿ, ಈ ಉಪಕ್ರಮಗಳಿಂದಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂಬ ಮೂಲ ಉದ್ದೇಶವೇ ಈಡೇರದಂತಾಗಿ ಬ್ಯಾಂಕ್ ಸಿಬ್ಬಂದಿಗೆ ಹಾಗೂ ಗ್ರಾಹಕರಿಗೆ ಸೋಂಕು ತಗುಲುವ ಅಪಾಯ ಹೆಚ್ಚು ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಜನರ ಓಡಾಟಕ್ಕೂ ತೀವ್ರ ನಿರ್ಬಂಧಗಳಿರುವಾಗ ಸಮಸ್ಯೆಯೇ ಹೆಚ್ಚು ಎಂದು ಅವರು ವಿವರಿಸಿದ್ದಾರೆ.ಸರ್ಕಾರದ ಉಪಕ್ರಮಗಳ ಜಾರಿಗೆ ಬ್ಯಾಂಕ್ ಸಿಬ್ಬಂದಿಗೆ ವಾಹನ ಸೇವೆ, ಬ್ಯಾಂಕ್ ಹೊರಗೆ ಜನರನ್ನು ನಿಯಂತ್ರಿಸಲು ಪೊಲೀಸ್ ಬಂದೋಬಸ್ತ್ ಮೊದಲಾದ ಕ್ರಮಗಳ ಅಗತ್ಯವಿದೆ ಎಂದು ಪತ್ರದಲ್ಲಿ ಕೋರಲಾಗಿದೆ.