ಕೊರೋನಾ ವೈರಸ್ ತಡೆಗೆ ಸಹಕಾರ: ಮುಖ್ಯಮಂತ್ರಿಯಿಂದ ಮುಸ್ಲಿಂ ಮುಖಂಡರೊಂದಿಗೆ ಸಭೆ

ಬೆಂಗಳೂರು, ಏ.3, ಕೊರೋನಾ ವೈರಸ್‌  ಹರಡದಂತೆ ಸರ್ಕಾರದೊಂದಿಗೆ ಸಹಕಾರ ನೀಡುವಂತೆ ಕೋರಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದು ವಿಧಾನಸೌಧದಲ್ಲಿ ರಾಜ್ಯದ ಮುಸ್ಲಿಂ ಮುಖಂಡರು ಹಾಗೂ ಶಾಸಕರೊಂದಿಗೆ ಸಭೆ ನಡೆಸಿದರು.ಸಭೆಯಲ್ಲಿ ಶಾಸಕರಾದ ಸಿ.ಎಂ. ಇಬ್ರಾಹಿಂ,  ಎನ್.ಎ.  ಹ್ಯಾರಿಸ್, ಜಮೀರ್ ಅಹಮದ್, ನಸೀರ್ ಅಹಮದ್,  ರಿಜ್ವಾನ್ ಅರ್ಷದ್,  ಅಖಂಡ, ಶ್ರೀನಿವಾಸಮೂರ್ತಿ, ಮುಖಂಡರಾದ ಸಲೀಮ್ ಅಹಮದ್  ಅವರೊಂದಿಗೆ ಸಭೆ ನಡೆಸಿ, ಕರೋನಾ ವೈರಸ್ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಮುಸ್ಲಿಂ ಸಮುದಾಯದವರ  ಸಹಕಾರ ಕುರಿತಂತೆ ಮನವಿ ಮಾಡಿದರು ಇದಕ್ಕೆ ಅವರು ಸಕಾರಾತ್ಮಕವಾಗಿ ಸ್ಪಂದಿಸಿ, ಸಂಪೂರ್ಣ ಸಹಕಾರ ನೀಡುವುದಾಗಿಯೂ ಮುಸ್ಲಿಂ ಮುಖಂಡರು ಭರವಸೆ ನೀಡಿದ್ದಾರೆ.
ನಿಜಾಮುದ್ದೀನ್ ತಬ್ಲೀಗ್‌ ಮರ್ಕಜ್ ಗೆ ಭೇಟಿ ನೀಡಿದ ರಾಜ್ಯದ ವ್ಯಕ್ತಿಗಳ ಮಾಹಿತಿ ನೀಡಿ,  ಅವರು ವೈದ್ಯಕೀಯ ಪರೀಕ್ಷೆಗೆ ಒಳಗಾಗುವಂತೆ ಹಾಗೂ ಕ್ವಾರಂಟೈನ್‍ಅನ್ನು ಕಟ್ಟುನಿಟ್ಟಾಗಿ  ಪಾಲಿಸುವಂತೆ ಮನವೊಲಿಸಲು ಸಹಕಾರ ನೀಡುವುದಾಗಿ ಶಾಸಕರು ಭರವಸೆ ತಿಳಿಸಿದ್ದಾರೆ.ಕೊರೋನಾ ವೈರಸ್ ನಿಯಂತ್ರಣಕ್ಕೆ ಮುನ್ನೆಚ್ಚರಿಕೆಯೊಂದೇ ಪರಿಹಾರ. ಲಾಕ್‍ಡೌನ್ ಅವಧಿ  ಮುಗಿಯುವವರೆಗೆ ಎಲ್ಲರ ಆರೋಗ್ಯದ ದೃಷ್ಟಿಯಿಂದ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಜಾತಿ,  ಧರ್ಮ ಭೇದ ಮರೆತು ಶ್ರಮಿಸಬೇಕಾಗಿದೆ ಎಂದು ಎಲ್ಲ ಮುಖಂಡರೂ ಸರ್ವಾನುಮತದ ಅಭಿಪ್ರಾಯ  ವ್ಯಕ್ತಪಡಿಸಿದರು.ಆರೋಗ್ಯ ಕಾರ್ಯಕರ್ತರಿಗೆ ಎಲ್ಲ ರೀತಿಯ ಸಹಕಾರ ನೀಡುವಂತೆ ತಮ್ಮ ಸಮುದಾಯದ ಜನರ ಮನವೊಲಿಸುವುದಾಗಿ ಭರವಸೆ ನೀಡಿದ್ದಾರೆ. ಯಾವುದೇ ವದಂತಿಗಳಿಗೆ ಕಿವಿಗೊಡಬೇಡಿ.  ನಾವೆಲ್ಲರೂ ಒಟ್ಟಾಗಿ ಮುನ್ನೆಚ್ಚರಿಕೆ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ, ಕರೋನಾ  ವಿರುದ್ಧದ ಸಮರ ಜಯಿಸೋಣ ಎಂದು ಮುಖ್ಯಮಂತ್ರಿ ಮನವಿ ಮಾಡಿದ್ದಾರೆ.