ಕುಂದಾಪುರ, ಜೂನ್ ೩, ಉಡುಪಿ ಜಿಲ್ಲೆಯಲ್ಲಿ ಕೊರೊನಾ ವೈರಾಣು ಪ್ರಕರಣಗಳ ಸಂಖ್ಯೆ ಹೆಚ್ಚಳಗೊಳ್ಳುತ್ತಿರುವ ಹಿನ್ನಲೆಯಲ್ಲಿ ಕುಂದಾಪುರ ತಾಲ್ಲೊಕು ಆಸ್ಪತ್ರೆ ಹಾಗೂ ಕೊಲ್ಲೂರು ಲಲಿತಾಂಬಿಕಾ ಅತಿಥಿ ಗೃಹವನ್ನು ಆದಷ್ಟು ಶೀಘ್ರ ಕೋವಿಡ್ -೧೯ ಆಸ್ಪತ್ರೆಗಳನ್ನಾಗಿ ಪರಿವರ್ತಿಸಲಾಗುವುದು ಎಂದು ಜಿಲ್ಲಾಧಿಕಾರಿ ಜಿ. ಜಗದೀಶ ಬುಧವಾರ ತಿಳಿಸಿದ್ದಾರೆ. ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ಕಲ್ಪಿಸಲು ತಾಲೊಕಿನಲ್ಲಿ ೪೦೦ ಹಾಸಿಗೆಗಳ ಆಸ್ಪತ್ರೆಯ ಅಗತ್ಯವಿದ್ದು, ತಾಲ್ಲೊಕು ಆಸ್ಪತ್ರೆಯಲ್ಲಿ ಈಗಾಗಲೇ ೧೨೦ ಹಾಸಿಗೆ, ಆದರ್ಶ ಆಸ್ಪತ್ರೆಯಲ್ಲಿ ೬೦ ಹಾಸಿಗೆಗಳನ್ನು ವ್ಯವಸ್ಥೆ ಮಾಡಲಾಗಿದ್ದು, ಹಾಗಾಗಿ ತಾಲ್ಲೊಕು ಆಸ್ಪತ್ರೆಯನ್ನು ಪೂರ್ಣ ಪ್ರಮಾಣದ ಕೋವಿಡ್ -೧೯ ಆಸ್ಪತ್ರೆಯನ್ನಾಗಿ ಪರಿವರ್ತಿಸಲು ನಿರ್ಧರಿಸಲಾಗಿದೆ ಎಂದು ಜಗದೀಶ ವಿವರಿಸಿದ್ದಾರೆ.
ಗರ್ಭಿಣಿ ಮಹಿಳೆಯರು ಹಾಗೂ ಬಾಣಂತಿಯರು ಒಳಗೊಂಡ ಕುಂದಾಪುರ ತಾಲೊಕು ಆಸ್ಪತ್ರೆಯನ್ನು ಕೋಟಾ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಹೊರರೋಗಿಗಳ ವಿಭಾಗವನ್ನು ಹಳೆಯ ವಿನಯ್ ಆಸ್ಪತ್ರೆಗೆ ಸ್ಥಳಾಂತರಿಸಲಾಗುವುದು ಎಂದು ತಿಳಿಸಿದ್ದಾರೆ. ಕೊಲ್ಲೂರು ಲಲಿತಾಂಬಿಂಕಾ ಅತಿಥಿ ಗೃಹವನ್ನು ೧೦೦ ಹಾಸಿಗೆಗಳ ಕೋವಿಡ್ -೧೯ ಆಸ್ಪತ್ರೆಯನ್ನಾಗಿ ಪರಿವರ್ತಿಸಲಾಗುವುದು. ಯಾವುದೇ ಲಕ್ಷಣ ಹೊಂದಿರದ ಪಾಸಿಟಿವ್ ಪ್ರಕರಣಗಳಿಗೆ ಕುಂದಾಪುರ ಹಾಗೂ ಕೊಲ್ಲೂರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕಲ್ಪಿಸಲಾಗುವುದು. ಗರ್ಭಿಣಿ ಮಹಿಳೆಯರು ಸೇರಿದಂತೆ ಗಂಭೀರ ಸ್ವರೂಪದ ಪ್ರಕರಣಗಳನ್ನು ಟಿ ಎಂ ಎ ಪೈ ಆಸ್ಪತ್ರೆಯಲ್ಲಿ ಚಿಕಿತ್ಸೆ ಕಲ್ಪಿಸಲಾಗುವುದು ಎಂದು ವಿವರಿಸಿದ್ದಾರೆ.