ಅಹಿಂಸಾ ತತ್ವಗಳ ಪ್ರತಿಪಾದಕ ಭಗವಾನ್ ಮಹಾವೀರ

Lord Mahavira, the proponent of the principles of non-violence

ಅಹಿಂಸಾ ತತ್ವಗಳ ಪ್ರತಿಪಾದಕ ಭಗವಾನ್ ಮಹಾವೀರ 

ಕೊಪ್ಪಳ 11: ಜಗತ್ತಿಗೆ ಅಹಿಂಸಾ ತತ್ವಗಳನ್ನು ಪ್ರತಿಪಾದಿಸಿದವರು ಭಗವಾನ್ ಮಹಾವೀರರು. ಪರಿಶುದ್ಧವಾದ ಬ್ರಹ್ಮಚರ್ಯ, ವೃತಗಳ ಆಚರಣೆಯಿಂದ ಮನುಷ್ಯನಿಗೆ ಮುಕ್ತಿ ದೊರೆಯುತ್ತದೆ ಎಂದು ಸಾರಿದ ವರ್ಧಮಾನ ಮಹಾವೀರರ ಸಂದೇಶಗಳು ಇಂದಿನ ಕಲುಷಿತ ಸಮಾಜಕ್ಕೆ ತೀರಾ ಅವಶ್ಯವೆಂದು ಕನ್ನಡ ಉಪನ್ಯಾಸಕರಾದ ಡಾ.ಸಿದ್ಧಲಿಂಗಪ್ಪ ಕೊಟ್ನೆಕಲ್ ಅವರು ನುಡಿದರು. ಅವರು ಹುಲಿಗಿ ಗ್ರಾಮದಲ್ಲಿ ಜೈನ ಸಮಾಜದಿಂದ ಪಾರ್ಶ್ವನಾಥ ದಿಗಂಬರ ಜೈನ ಬಸದಿಯಲ್ಲಿ ಭಗವಾನ್ ಮಹಾವೀರರ ಜನ್ಮಕಲ್ಯಾಣ ಕಾರ್ಯಕ್ರಮದಲ್ಲಿ ಮಾತನಾಡಿದರು.  

ಮುಂದುವರೆದು ಮಹಾವೀರರು ಸಮ್ಯಕ್ ದರ್ಶನ, ಸಮ್ಯಕ್ ಜ್ಞಾನ, ಸಮ್ಯಕ್ ಚಾರಿತ್ರ್ಯ ಹೊಂದಿದಲ್ಲಿ ಮನುಷ್ಯನು ಪರಿಪೂರ್ಣನಾಗುತ್ತಾನೆ. ಪೂಜೆ ಅಥವಾ ಪ್ರಾರ್ಥನೆಗಳಿಂದ ಪಾಪ ತೊಲಗುವುದಿಲ್ಲ, ಸದ್ಗುಣ ನಡವಳಿಕೆಗಳಿಂದ ಮಾತ್ರ ಮನುಷ್ಯನಿಗೆ ಮುಕ್ತಿ ದೊರೆಯುತ್ತದೆ ಎಂಬ ಸಂದೇಶವನ್ನು ಮಹಾವೀರರು ಸಾರಿದ್ದಾರೆಂದು ನುಡಿದರು. ಪ್ರಾರಂಭದಲ್ಲಿ ಜೈನಸಮಾಜದ ಅಧ್ಯಕ್ಷರಾದ ಡಾ.ಚಂದ್ರನಾಥ ತವನಪ್ಪನವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಕುಮಾರಿ ಸಮಾಂತ ಪಾಟೀಲ್ ಹಾಗೂ ವಿವಾಂತ ಪಾಟೀಲ್ ಪ್ರಾರ್ಥನೆಗೈದರೆ, ಸುಹಾಸ ಇಜಾರಿ ಕಾರ್ಯಕ್ರಮದ ನಿವಾರ್ಹಣೆ ಮಾಡಿದರು. ಕೊನೆಗೆ ಪುಷ್ಪದಂತ ಪಾಟೀಲ್ ವಂದಿಸಿದರು. ಮೊದಲು ದಿಽಽ ಬಾಲನಗೌಡ್ರು ಪಾಟೀಲರವರ ಮನೆಯ ಬಾವಿಪೂಜೆ, ಮಹಾವೀರರಿಗೆ ಪಂಚಾಮೃತ ಅಭಿಷೇಕದ ನಂತರ ಭಗವಾನ್ ಮಹಾವೀರರ ಭಾವಚಿತ್ರದೊಂದಿಗೆ ಮಹಿಳೆಯರ ಕುಂಭ, ವಾದ್ಯಗಳ ಮೆರವಣಿಗೆ ಮೂಲಕ ಬಸದಿಗೆ ಆಗಮಿಸಲಾಯಿತು. ಬಸದಿಯಲ್ಲಿ ಭಗವಾನ್ ಮಹಾವೀರ ಮತ್ತು ತೀರ್ಥಂಕರರ ಬಿಂಬಗಳಿಗೆ ಪೂಜೆ ಸಲ್ಲಿಸಲಾಯಿತು. ಈ ಕಾರ್ಯಕ್ರಮದಲ್ಲಿ ಸಮಾಜದ ಅನೇಕ ಮುಖಂಡರು, ಊರಿನ ಹಿರಿಯರು ಉಪಸ್ಥಿತರಿದ್ದರು.