ಬೆಳಗಾವಿ/ಕಾರವಾರ/ಬೆಂಗಳೂರು, ಆ 7 ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಹಾಮಳೆಗೆ ಜನರು ತತ್ತರಿಸಿದ್ದು, ಕರಾವಳಿ, ಉತ್ತರ ಕನರ್ಾಟಕ, ಮಲೆನಾಡಿನಲ್ಲಿ ಇಂದು ಕೂಡ ಮಳೆ ಮುಂದುವರಿದಿದೆ.
ಪ್ರವಾಹ ಪರಿಸ್ಥಿತಿಯಿಂದ ನೂರಾರು ಗ್ರಾಮಗಳು ಜಲಾವೃತವಾಗಿದ್ದು, ಸಾವಿರಾರು ಮಂದಿ ಸಂತ್ರಸ್ತರಾಗಿದ್ದಾರೆ. ಬೆಳಗಾವಿ, ಗೋಕಾಕ್, ಧಾರವಾಡ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಕೊಡಗು, ಚಿಕ್ಕಮಗಳೂರು, ಹಾಸನ, ಧಾರವಾಡ, ಕಾರವಾರ ಸೇರಿದಂತೆ 15ಕ್ಕೂ ಅಧಿಕ ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ಸೃಷ್ಟಿಯಾಗಿದೆ. ರಾಜ್ಯಾದ್ಯಂತ ಮಳೆ ಮತ್ತು ಪ್ರವಾಹದ ಹಾನಿಯಿಂದ ಈವರೆಗೆ 6 ಮಂದಿ ಸಾವನ್ನಪ್ಪಿದ್ದಾರೆ.
ಬೆಳಗಾವಿ ಜಿಲ್ಲೆ ಅತಿ ಹೆಚ್ಚು ತತ್ತರಿಸಿದ್ದು, ಗೋಕಾಕ್ನಲ್ಲಿ ನೂರಾರು ಕುಟುಂಬ ನಿರಾಶ್ರಿತರಾಗಿದ್ದಾರೆ. ಕೃಷ್ಣಾ ನದಿಯಲ್ಲಿ ಪ್ರವಾಹ ಅಪಾಯದಮಟ್ಟ ಮೀರಿದೆ , ತೀರ ಪ್ರದೇಶದ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗುತ್ತಿದೆ. ಸಂತ್ರಸ್ತರಿಗಾಗಿ ನಿರಾಶ್ರಿತ ಕೇಂದ್ರಗಳನ್ನು ತೆರೆದು ಅವರಿಗೆ ಊಟ, ವಸತಿ ಸೌಲಭ್ಯ ಕಲ್ಪಿಸಲಾಗಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಅಬ್ಬರದ ಮಳೆ ಮತ್ತೆ ಮುಂದುವರಿದಿದ್ದು, ಕರಾವಳಿಯಲ್ಲಿ ಮಂಗಳವಾರ ರಾತ್ರಿಯಿಂದ ಸ್ವಲ್ಪ ಬಿಡುವು ನೀಡಿತ್ತು. ಆದರೆ, ಬುಧವಾರ ಬೆಳಿಗ್ಗೆಯಿಂದ ಮತ್ತೆ ಅಬ್ಬರಿಸುತ್ತಿದೆ.
ಕುಮಟಾ ತಾಲೂಕಿನ ಕೆಲವೆಡೆ ಮಣ್ಣು ಕುಸಿದಿದ್ದು, ಸಂಚಾರ ಅಸ್ತವ್ಯಸ್ತವಾಗಿದೆ. ಆದರೆ ಯಾವುದೇ ಹಾನಿಯಾಗಿಲ್ಲ.
ಚಂಡಿಕಾ ಹೊಳೆಯಲ್ಲಿ ನೀರಿನ ಮಟ್ಟ ಇಳಿಕೆಯಾಗಿದ್ದು, ಕುಮಟಾ- ಶಿರಸಿ ನಡುವೆ ಬಸ್ ಸಂಚಾರ ಆರಂಭಗೊಂಡಿದೆ ಆದರೆ, ಅಂಕೋಲಾ- ಯಲ್ಲಾಪುರ ನಡುವೆ ವಾಹನ ಸಂಚಾರ ಪುನರಾರಂಭಗೊಂಡಿಲ್ಲ. ಸುಂಕಸಾಳದಲ್ಲಿ ಗಂಗಾವಳಿ ನದಿಯ ನೀರು ರಾಷ್ಟ್ರೀಯ ಹೆದ್ದಾರಿ 63ರಲ್ಲಿ ಹರಿಯುತ್ತಿದೆ.
ಸುಂಕಸಾಳ ಗ್ರಾಮದ ಬಳಿ ಜಲಾವೃತಗೊಂಡಿದ್ದ ಹೈಲ್ಯಾಂಡ್ ಹೊಟೇಲ್ ನಿಂದ 112 ಜನ ಪ್ರಯಾಣಿಕರನ್ನು ದೋಣಿಗಳ ಮೂಲಕ ಸುರಕ್ಷಿತವಾಗಿ ಕರೆತರಲಾಗಿದೆ. ಅವರನ್ನು ವಿಶೇಷ ವಾಹನದ ಮೂಲಕ ಅಂಕೋಲಾದ ತಾತ್ಕಾಲಿಕ ಪುನರ್ವಸತಿ ಕೇಂದ್ರಕ್ಕೆ ತಲುಪಿಸಲಾಗಿದೆ ಎಂದು ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಕಾರವಾರ ತಾಲೂಕಿನ ಕದ್ರಾ ಅಣೆಕಟ್ಟೆಯಿಂದ 1.7 ಲಕ್ಷ ಕ್ಯುಸೆಕ್ ನೀರನ್ನು ಕಾಳಿ ನದಿಗೆ ಹರಿಸಲಾಗುತ್ತಿತ್ತು. ಅದನ್ನು ಬೆಳಿಗ್ಗೆ 10ರಿಂದ ಮಧ್ಯಾಹ್ನ 1ರವರೆಗೆ 1.5 ಲಕ್ಷ ಕ್ಯುಸೆಕ್ ಗೆ ಇಳಿಸಲಾಗುವುದು. ಈ ಸಂದರ್ಭದಲ್ಲಿ ವಿವಿಧ ತಾತ್ಕಾಲಿಕ ಪುನರ್ವಸತಿ ಕೇಂದ್ರಗಳಿಗೆ ಆಹಾರ ಮತ್ತು ಇತರ ಅಗತ್ಯ ವಸ್ತುಗಳನ್ನು ಸರಬರಾಜು ಮಾಡಲಾಗುವುದು. ನದಿಗೆ ಹರಿಯುವ ನೀರಿನ ಪ್ರಮಾಣ ಕಡಿಮೆ ಮಾಡುವುದು ಕೇವಲ ತಾತ್ಕಾಲಿಕ ವ್ಯವಸ್ಥೆ. ಹಾಗಾಗಿ ಈ ಸಂದರ್ಭದಲ್ಲಿ ಜನರು ತಮ್ಮ ಮನೆಗಳಿಗೆ ಹೋಗಬಾರದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಚಿಕ್ಕಮಗಳೂರಿನಲ್ಲಿಯೂ ಮಳೆ ಮುಂದುವರಿದಿದ್ದು, ಭದ್ರಾ ನದಿ ತುಂಬಿ ಹರಿಯುತ್ತಿದ್ದು, ಶೃಂಗೇರಿಗೆ ಸಂಪರ್ಕ ಕಲ್ಪಿಸುವ ಇಟ್ಟನಟ್ಟಿ ರಸ್ತೆಯಲ್ಲಿ ಸಂಚಾರ ಸ್ಥಗಿತಗೊಂಡಿದೆ.
ಕೊಡಗು ಜಿಲ್ಲೆಯಾದ್ಯಂತ ಮಳೆ ಅಬ್ಬರ ಮುಂದುವರೆದಿದ್ದು ನಿನ್ನೆಗಿಂತಲೂ ಬುಧವಾರ ತೀವ್ರತೆ ಪಡೆದುಕೊಂಡಿದ್ದು ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಭಾಗಮಂಡಲದಲ್ಲಿ ಇನ್ನಷ್ಟು ನೀರು ಸಂಗ್ರಹಗೊಂಡಿದ್ದು ದ್ವೀಪವಾಗಿದೆ. ಜಿಲ್ಲೆಯಲ್ಲಿ ಪ್ರವಾಹ ಸ್ಥಿತಿ ನಿರ್ಮಾಣವಾಗಿದ್ದು ಗ್ರಾಮೀಣ ಪ್ರದೇಶಗಳು ಕತ್ತಲೆಯಲ್ಲಿ ಮುಳುಗಿವೆ. ಕಾವೇರಿ, ಲಕ್ಷ್ಮಣ ತೀರ್ಥ ನದಿಗಳು ಉಕ್ಕಿ ಹರಿಯುತ್ತಿವೆ. ಕರಡಿಗೋಡು, ನಾಪೋಕ್ಲು, ಭೇತ್ರಿ ಭಾಗದಲ್ಲಿ ಕಾವೇರಿ ನದಿಯು ಉಕ್ಕಿ ಹರಿಯುತ್ತಿರುವ ಪರಿಣಾಮ ನೂರಾರು ಎಕರೆ ಜಮೀನು ಜಲಾವೃತಗೊಂಡಿದೆ.
ಈ ವರ್ಷ ಮೊದಲ ಬಾರಿಗೆ ಹಾರಂಗಿ ಜಲಾಶಯದ ಒಳಹರಿವು 9 ಸಾವಿರ ಕ್ಯುಸೆಕ್ ದಾಟಿದೆ. ಮಧ್ಯಾಹ್ನದ ವೇಳೆಗೆ ಮತ್ತಷ್ಟು ಹೆಚ್ಚಾಗಲಿದೆ. 2,859 ಅಡಿ ಗರಿಷ್ಠ ಸಾಮಥ್ರ್ಯದ ಜಲಾಶಯದಲ್ಲಿ ಪ್ರಸ್ತುತ 2,842.55 ಅಡಿ ನೀರು ಸಂಗ್ರಹವಿದೆ. ನಿನ್ನೆ ಸಂಜೆಯಿಂದ ಇಂದು ಬೆಳಗ್ಗೆ 8ರ ಸುಮಾರಿಗೆ ಜಲಾಶಯಕ್ಕೆ 6 ಅಡಿಯಷ್ಟು ನೀರು ಹರಿದುಬಂದಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೂ ಭಾರೀ ಮಳೆಯಾಗುತ್ತಿದ್ದು, ನಿರಂತರ ಭಾರೀ ಭೂ ಕುಸಿತದ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ಹಾಗೂ ಮಂಗಳೂರು ನಡುವೆ ಸಂಪರ್ಕ ಕಲ್ಪಿಸುವ ಚಾರ್ಮಡಿ ಘಾಟಿ ರಸ್ತೆಯಲ್ಲಿ ವಾಹನ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಸಂಚಾರ ಬಂದ್ ಹಿನ್ನೆಲೆಯಲ್ಲಿ ವಾಹನ ಸವಾರರು ಪರದಾಡುವಂತಾಗಿದೆ. ಘಾಟಿ ರಸ್ತೆಯಲ್ಲಿ ಕಿ.ಮೀ. ಉದ್ದಕ್ಕೂ ವಾಹನಗಳು ಸಾಲುಗಟ್ಟಿ ನಿಂತಿವೆ. ಘಾಟಿಯಲ್ಲಿ ನಿರಂತರ ಭೂ ಕುಸಿತ ಮುಂದುವರಿದಿರುವುದರಿಂದ ರಸ್ತೆಯನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ ಎಂದು ದ.ಕ. ಜಿಲ್ಲಾಡಳಿತ ತಿಳಿಸಿದೆ.
ಮಳೆಗೆ ಸಂಬಂಧಿಸಿ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಇರುವವರೆಗೆ ಚಾರ್ಮಡಿ ರಸ್ತೆಯಲ್ಲಿ ಯಾವುದೇ ವಾಹನಗಳ ಸಂಚಾರಕ್ಕೆ ಅವಕಾಶ ಇರುವುದಿಲ್ಲ ಎಂದು ಜಿಲ್ಲಾಡಳಿತ ತಿಳಿಸಿದೆ.
ಮಂಗಳವಾರ ರಾತ್ರಿ ಘಾಟಿ ಪ್ರದೇಶದಲ್ಲಿ ಭಾರೀ ವೇಳೆಯಾಗಿದ್ದು, ಘಾಟಿ ರಸ್ತೆಯ ವಿವಿಧೆಡೆ ಭೂಕುಸಿತಗಳಾಗಿವೆ.
ತಡ ರಾತ್ರಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಚಾರ್ಮಡಿ ಘಾಟಿಗೆ ಭೇಟಿ ನೀಡಿ ಪರಿಸ್ಥಿತಿಯ ಅವಲೋಕನ ನಡೆಸಿದರು. ಪೊಲೀಸರು, ಅಗ್ನಿಶಾಮಕ ದಳದವರು ಸ್ಥಳೀಯರ ಸಹಕಾರದೊಂದಿಗೆ ಘಾಟಿಯಲ್ಲಿ ಸಿಲುಕಿದ್ದವರನ್ನು ಅಲ್ಲಿಂದ ಸುರಕ್ಷಿತ ಸ್ಥಳಗಳಿಗೆ ಕರೆದೊಯ್ದರು.
ಬೆಳ್ತಂಗಡಿ ವೃತ್ತ ನಿರೀಕ್ಷಕ ಸಂದೇಶ, ಧರ್ಮಸ್ಥಳ ಠಾಣಾಧಿಕಾರಿ ಅವಿನಾಶ್, ಬೆಳ್ತಂಗಡಿ ತಹಶೀಲ್ದಾರ್ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ರಾತ್ರಿಯಿಡೀ ಘಾಟಿಯಲ್ಲಿದ್ದು ಕಾರ್ಯಾಚರಣೆ ನಿರ್ವಹಿಸಿದರು. ಭೂಕುಸಿತದ ನಡುವೆಯೇ ಘಾಟಿ ರಸ್ತೆಯಲ್ಲಿ ಉರುಳಿಬಿದ್ದಿರುವ ಮರ ಹಾಗೂ ಭೂ ಕುಸಿತದ ಮಣ್ಣು ತೆರವು ಕಾರ್ಯಾಚರಣೆ ಮುಂದುವರಿದಿದೆ
ಬಾಗಲಕೋಟೆಯಲ್ಲಿಯೂ ಭಾರೀ ಮಳೆಯಿಂದ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಘಟಪ್ರಭಾ ನದಿ ತುಂಬಿ ಹರಿಯುತ್ತಿದೆ. ಮುದೋಳ ತಾಲೂಕಿನ ಮಿರ್ಜಿ ಗ್ರಾಮ ಸಂಪೂರ್ಣ ಜಲಾವೃತವಾಗಿದ್ದು, ಗ್ರಾಮಸ್ಥರು ಆತಂಕಕ್ಕೊಳಗಾಗಿದ್ದಾರೆ.
60-70 ಕುಟುಂಬಗಳು ನಿರಾಶ್ರಿತರಾಗಿದ್ದು, ಸ್ಥಳಕ್ಕೆ ಯಾವ ಅಧಿಕಾರಿಗಳು, ಶಾಸಕರು ಭೇಟಿ ನೀಡಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಧಾರವಾಡದಲ್ಲಿಯೂ ಮಳೆ ಮುಂದುವರಿದಿದ್ದು, ತುಪ್ಪರಿಹಳ್ಳ ಎಂಬಲ್ಲಿ ರಸ್ತೆ ಕೊಚ್ಚಿ ಹೋಗಿವೆ. ರಾಯಚೂರಿನಲ್ಲಿಯೂ ಮಳೆ ಮುಂದುವರಿದಿದ್ದು, ಯರಗೋಡಿನಲ್ಲಿ ಸಂತ್ರಸ್ತರಿಗೆ ನಿರಾಶ್ರಿತ ಕೇಂದ್ರ ತೆರೆಯಲಾಗಿದೆ.
ರಾಜಧಾನಿ ಬೆಂಗಳೂರಿನಲ್ಲಿಯೂ ತುಂತುರು ಮಳೆಯಾಗುತ್ತಿದ್ದು, ಕಳೆದೆರಡು ದಿನಗಳಿಂದ ಮೋಡಕವಿದ ವಾತಾವರಣ ಸೃಷ್ಟಿಯಾಗಿದೆ. ತಾಪಮಾನ ಇಳಿಕೆಯಾಗಿದ್ದು, ಚಳಿಯ ಅನುಭವ ಉಂಟಾಗಿದ