ಮುಂದುವರೆದ ಲ್ಯಾಪ್ ಟಾಪ್ ಗಲಾಟೆ: ಅರ್ಧ ದಿನ ಸದನ ಮುಂದೂಡಿಕೆ

ಬೆಂಗಳೂರು,  ಮಾ‌ 24, ಲ್ಯಾಪ್ ಟಾಪ್ ಖರೀದಿಯಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರದ  ತನಿಖೆಗಾಗಿ  ಸದನ ಸಮಿತಿ ರಚಿಸುವಂತೆ ಒತ್ತಾಯಿಸಿ ಪ್ರತಿಪಕ್ಷಗಳು ನಡೆಸಿದ ಧರಣಿ  ಮುಂದುವರೆದ ಪರಿಣಾಮ ಕೊನೆಯ ಮೇಲ್ಮನೆಯ ಬೆಳಗಿನ ಕಲಾಪವನ್ನು ನುಂಗಿಹಾಕಿದ್ದು  ಸದನವನ್ನು  ಸಭಾಪತಿಗಳು ಎರಡು ಬಾರಿ ಮುಂದೂಡಿದರು. ಸದನ ಸಮಾವೇಶಗೊಳ್ಳುತ್ತಿದ್ದಂತೆಯೇ  ಸಭಾನಾಯಕ ಕೋಟಾ ಶ್ರೀನಿವಾಸ ಪೂಜಾರಿ ರಾಜ್ಯದಲ್ಲಿ ಕೊರೊನಾ ವೈರಸು ಸೋಂಕು  ಹೆಚ್ಚುತ್ತಿರುವ ಕಾರಣ ಕೆಳಮನೆಯಲ್ಲಿನ ತೀರ್ಮಾನದಂತೆ ಅಧಿವೇಶನವನ್ನು ಇಂದಿಗೆ  ಮೊಟಕುಗೊಳಿಸಿ ಅನಿರ್ದಿಷ್ಟಾವಧಿಗೆ ಮುಂದೂಡುವಂತೆ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿಗೆ  ಮನವಿ ಮಾಡಿದರು.ಈ ವೇಳೆ ಕಾಂಗ್ರೆಸ್ ಜೆಡಿಎಸ್ ಸದಸ್ಯರು ಲ್ಯಾಪ್ ಟಾಪ್ ಖರೀದಿಯಲ್ಲಿನ  ಅವ್ಯವಹಾರ ಬಗ್ಗೆ ಸದನ ಸಮಿತಿ ರಚಿಸುವಂತೆ ಒತ್ತಾಯಿಸಿ ಸರ್ಕಾರಕ್ಕೆ ಧಿಕ್ಕಾರ ಕೂಗಿದವು.  ನಿನ್ನೆಯ ಪ್ರತಿಭಟನೆಯನ್ನು ಇಂದೂ ಸಹ ಮುಂದುವರೆಸಿದವು. ಸದನದಲ್ಲಿ ಗಲಾಟೆ  ತಾರಕಕ್ಕೇರಿದಾಗ ಸಭಾಪತಿಗಳು ಕಲಾಪವನ್ನು ಅರ್ಧಗಂಟೆ ಮುಂದೂಡಿದರು.ಮತ್ತೆ  ಅರ್ಧಗಂಟೆ ಬಳಿಕ ಸದನ ಸೇರಿದಾಗಲೂ ಸಭಾಪತಿ ಪೀಠದ ಮುಂಭಾಗ ವಿಪಕ್ಷ ಸದಸ್ಯರು ಜಮಾಯಿಸಿ  ಸದನ ಸಮಿತಿ ಆಗಲೇಬೇಕು ಆಗಲೇಬೇಕೆಂದು ಪ್ರತಿಭಟಿಸುತ್ತಾ‌ ದೊಡ್ಡ ಧ್ವನಿಯಲ್ಲಿ ಕೂಗಿದವು.  ಗಲಾಟೆ ಮಧ್ಯೆ ವಿಪಕ್ಷ ನಾಯಕ ಎಸ್‌.ಆರ್.ಪಾಟೀಲ್ ಮಾತನಾಡಿ, ಕೋಟ್ಯಾಂತರ  ರೂ.ಅವ್ಯವಹಾರ ನಡೆಸಿದ್ದರೂ ಸದನ ಸಮಿತಿ ಏಕೆ ರಚನೆ ಮಾಡುತ್ತಿಲ್ಲ ಎಂದು ಪ್ರಶ್ನಿಸಿದರು.  ಆಡಳಿತ ಪ್ರತಿಪಕ್ಷಗಳ ಗಲಾಟೆ ಆರೋಪ ಪ್ರತ್ಯಾರೋಪ ಮಾಡಿದಾಗ ಸದನದಲ್ಲಿ ಮತ್ತಷ್ಟು ಗದ್ದಲ  ಹೆಚ್ಚಿದಾಗ ಸಭಾಪತಿಗಳು ಕಲಾಪವನ್ನು ಅರ್ಧದಿನಕ್ಕೆ ಮುಂದೂಡಿದರು.