ಮನಸು ಗಟ್ಟಿಮಾಡಿ ರಾಜ್ಯಸಭೆಗೆ ಸ್ಪರ್ಧೆ:ಹೆಚ್.ಡಿ.ದೇವೇಗೌಡ

ಬೆಂಗಳೂರು, ಜೂ 9,ಮನಸು ಗಟ್ಟಿಮಾಡಿ ರಾಜ್ಯಸಭೆಗೆ ಸ್ಪರ್ಧಿಸಿದ್ದೇನೆ. ಹೆಚ್.ಡಿ.ಕುಮಾರಸ್ವಾಮಿ, ಹೆಚ್.ಡಿ.ರೇವಣ್ಣ ಅವರ ಒತ್ತಡಕ್ಕಾಗಿ ತಾವು ಸ್ಪರ್ಧಿಸದೇ ಪಕ್ಷದ ಶಾಸಕರ ಅಭಿಪ್ರಾಯಕ್ಕೆ ಮನ್ನಣೆಕೊಟ್ಟು ಜೂನ್ 5 ರಂದು ನಡೆದ ಶಾಸಕಾಂಗ ಪಕ್ಷದಲ್ಲಿ ಕೈಗೊಂಡ ತೀರ್ಮಾನದಂತೆ ಕಣಕ್ಕಿಳಿದಿದ್ದೇನೆ ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ.ದೇವೇಗೌಡ ಹೇಳಿದ್ದಾರೆ.ರಾಜ್ಯಸಭೆಗೆ ಜೆಡಿಎಸ್ ನಿಂದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಬಳಿಕ ವಿಧಾನಸೌಧದ ಜೆಡಿಎಸ್ ಶಾಸಕಾಂಗ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಬಾವುಕರಾಗಿ ಮಾತನಾಡಿದ ಅವರು, ತಮ್ಮ ಜೀವಮಾನದುದ್ದಕ್ಕೂ ಜಾತ್ಯತೀತ ತತ್ವ ಅನುಸರಿಸಿಕೊಂಡು ಬಂದಿದ್ದು, ಮುಂದೆಯೂ ಇದೇ ನಿಲುವಿಗೆ ಬದ್ಧನಾಗಿರುತ್ತೇನೆ ಎಂದರು.  ಕಳೆದ ಲೋಕಸಭಾ ಚುನಾವಣೆಗೆ ಮೊದಲೇ ಸಂಸತ್ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಬಹಿರಂಗವಾಗಿ ಹೇಳಿದ್ದೆ. ಆದರೆ ವಿಧಿ ಸ್ಪರ್ಧಿಸುವಂತೆ ಮಾಡಿತು. ಆದರೆ ಸ್ಪರ್ಧಿಸಿ ಸೋಲುಂಡೆ. ನಂತರ ಮತ್ತೆ ಮನಸು ಗಟ್ಟಿಮಾಡಿಕೊಂಡು ಮತ್ತೆ ಚುನಾವಣೆಗೆ ಸ್ಪರ್ಧಿಸುವುದು ಬೇಡವೆಂದು ತೀರ್ಮಾನಿಸಿದ್ದೆ. ಪಕ್ಷ ಸಂಘಟನೆಯನ್ನಷ್ಟೇ ಮಾಡಿಕೊಂಡು ಇರೋಣ ಎಂದು ನಿರ್ಧರಿಸಿದ್ದೆ. ಆದರೆ ಪಕ್ಷದ ಶಾಸಕರು ರಾಜ್ಯಸಭೆಗೆ ಹೋಗಬೇಕೆಂದು ಒತ್ತಾಯಿಸಿದರು.

ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಮಲ್ಲಿಕಾರ್ಜುನ ಖರ್ಗೆ ಅವರೊಬ್ಬರ ಹೆಸರನ್ನೇ ಘೊಷಣೆ ಮಾಡಿದರು. ಸೋನಿಯಾಗಾಂಧಿ ಅವರು ನನ್ನ ಜೊತೆ ದೂರವಾಣಿಯಲ್ಲಿ ಮಾತನಾಡುವಾಗ “ವಿ ಮಿಸ್ ಯೂ ಇನ್ ಲೋಕಸಭೆ’’ ಎಂಬ ಅಭಿಪ್ರಾಯ ವ್ಯಕ್ತಪಡಿಸಿ, ರಾಜ್ಯಸಭೆಗೆ ಸ್ಪರ್ಧಿಸುವಂತೆ ಮನವೊಲಿಸಿದರು. ಬದುಕಿನುದ್ದಕ್ಕೂ ಜಾತ್ಯಾತೀತ ಸಿದ್ಧಾಂತದಡಿಯಲ್ಲಿಯೇ ಹೋರಾಟ ಮಾಡಿಕೊಂಡು ಬಂದಿದ್ದೇನೆ. ಇದರಲ್ಲಿ ರಾಜಿ ಇಲ್ಲ. ಮೊದಲಿನಿಂದಲೂ ಹೋರಾಟ ಮಾಡಿಕೊಂಡು ಬಂದು ಸಾಕಷ್ಟು ಸೋಲು ಕಂಡಿದ್ದೇನೆ. ಪ್ರತಿ 10 ವರ್ಷಕ್ಕೊಮ್ಮೆಯಂತೆ ಸೋತಿದ್ದೇನೆ. ಇದಕ್ಕೆಲ್ಲ ಯೋಚನೆ ಮಾಡಿದವನಲ್ಲ ಎಂದು ಮಾರ್ಮಿಕವಾಗಿ ಹೆಚ್.ಡಿ.ದೇವೇಗೌಡ ನುಡಿದರು.

ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆಯಾಗಬಹುದೆಂದು ಭಾವಿಸಿರುವುದಾಗಿ ಹೇಳಿದ ದೇವೇಗೌಡರು, ಎರಡೂ ರಾಷ್ಟ್ರೀಯ ಪಕ್ಷಗಳಿಗೆ ಹಾಗೂ ಎರಡೂ ಪಕ್ಷದ ನಾಯಕರಿಗೂ ಕೃತಜ್ಞತೆ ಸಲ್ಲಿಸುತ್ತೇನೆ. ರಾಷ್ಟ್ರಮಟ್ಟದಲ್ಲಿ ಹೋರಾಟ ಮಾಡುವ ಜೊತೆಗೆ ರಾಜ್ಯದ ಸಮಸ್ಯೆಗಳ ವಿರುದ್ಧವೂ ಕೇಂದ್ರದ ಮುಂದೆ ಧನಿ ಎತ್ತುತ್ತೇನೆ. ಜೊತೆಗೆ ತಮಗೆ ಪಕ್ಷವನ್ನು ಕಟ್ಟಿ ಬೆಳೆಸುವ ಜವಾಬ್ದಾರಿ ಸಹ ಇದೆ. ಇದು ಕಡೆಯ ಹೋರಾಟವೇನೋ ಗೊತ್ತಿಲ್ಲ ಎಂದು ಮಾರ್ಮಿಕವಾಗಿ ನುಡಿದರು.

ಸಿದ್ಧಾಂತದಿಂದ ದೂರ ಸರಿಯುವುದಾಗಲೀ ರಾಜೀಯಾಗುವುದಾಗಲೀ ಮಾಡುವುದಿಲ್ಲ. 15 ವರ್ಷ ಲೋಕಸಭೆಯಲ್ಲಿ ಸಾಕಷ್ಟು ನೋವು ತಿಂದಿದ್ದು, ಸಂಸತ್ತಿನಲ್ಲಿ ಮಾತನಾಡುವುದಕ್ಕೆ ಅವಕಾಶವೇ ಸಿಗುತ್ತಿಲ್ಲ ಎಂದು ಸ್ಪೀಕರ್ ಅವರ ಬಳಿ ಕಣ್ಣಲ್ಲಿ ನೀರು ತುಂಬಿಕೊಂಡು ಕೇಳಿದ್ದೇನೆ. ರಾಜ್ಯಸಭೆಯಲ್ಲಿ ಏನನ್ನು ಅನುಭವಿಸಬೇಕೋ ನೋಡೋಣ ಎಂದರು. ಸುದ್ದಿಗೋಷ್ಠಿಯಲ್ಲಿ ರಾಜ್ಯ  ಯಾವುದೇ ಕಾಂಗ್ರೆಸ್ ನಾಯಕರ ಹೆಸರನ್ನು ಪ್ರಸ್ತಾಪಿಸದೇ ಮಾತಿನುದ್ದಕ್ಕೂ ಸೋನಿಯಾಗಾಂಧಿ ಹಾಗೂ ರಾಹುಲ್ ಗಾಂಧಿಯನ್ನು ಸ್ಮರಿಸಿದ ದೇವೇಗೌಡರು, ರಾಜ್ಯ ಕಾಂಗ್ರೆಸ್ ಕಾಂಗ್ರೆಸ್ ನಾಯಕರು ತಮ್ಮ ಶತ್ರುಗಳಲ್ಲ. ರಾಜ್ಯಸಭೆಗೆ ಹೋಗಲು ಕಾಂಗ್ರೆಸ್ ಹೈಕಮಾಂಡೇ ಕಾರಣ ಎಂದು ಪರೋಕ್ಷವಾಗಿ ಹೇಳಿದರು.