ಪೊಲೀಸರ ಕ್ವಾರಂಟೈನ್ ಅವಧಿ, ಕರ್ತವ್ಯದ ಅವಧಿ ಎಂದು ಪರಿಗಣಿಸಿ: ಪ್ರವೀಣ್ ಸೂದ್ ಆದೇಶ

ಬೆಂಗಳೂರು, ಜೂ.9, ಕೊರೊನಾ ಭೀತಿ ಹಿನ್ನೆಲೆಯಲ್ಲಿ ಇನ್ನು ಮುಂದೆ ಪೊಲೀಸರು ಕ್ವಾರಂಟೀನ್ ನಲ್ಲಿದ್ದರೆ ಅದು ಕರ್ತವ್ಯದ ಅವಧಿ ಎಂದು ಪರಿಗಣಿಸಬೇಕು ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಆದೇಶ ಹೊರಡಿಸಿದ್ದಾರೆ.ಕ್ವಾರಂಟೀನ್ ಸಮಯವನ್ನು ಕರ್ತವ್ಯದ ಅವಧಿ ಎಂದು ಪರಿಗಣಿಸಬೇಕು ಎಂದು ಡಿಜಿಪಿ  ಹೇಳಿದ್ದು, ಈ ಸಿಹಿ ಸುದ್ದಿ ಹಿನ್ನಲೆಯಲ್ಲಿ  ಸಿಬ್ಬಂದಿ ನಿರಾಳರಾಗಿದ್ದಾರೆರಾಜ್ಯದಲ್ಲಿ ವ್ಯಾಪಕವಾಗಿ ಕೊರೊನಾ ಸೋಂಕು ತನ್ನ ಜಾಲವನ್ನು ವ್ಯಾಪಕವಾಗಿ ವಿಸ್ತರಿಸುತ್ತಿದ್ದು, ದಿನಂಪ್ರತಿ ಸಾರ್ವಜನಿಕರ ಜೊತೆಗೆ ಪೊಲೀಸರು ನೇರ ಸಂಪರ್ಕದಲ್ಲಿರುತ್ತಾರೆ. ಹೀಗಾಗಿ ಇತ್ತೀಚೆಗೆ ಪೊಲೀಸರಲ್ಲೂ ಕೊರೊನಾ ಸೋಂಕು ಕಂಡು ಬರುತ್ತಿದ್ದು, ಸೋಂಕಿತರ ಜೊತೆ ಸಂಪರ್ಕ ಹೊಂದಿದ ಹಲವಾರು ಪೊಲೀಸರು ಕರ್ತವ್ಯ ನಿರ್ವಹಣೆ ಸಮಯದಲ್ಲಿ ಹೋಂ ಕ್ವಾರಂಟೈನ್ ಅಥವಾ ಸಾಂಸ್ಥಿಕ ಕ್ವಾರಂಟೈನ್ ಗೆ ಒಳಪಡುತ್ತಿದ್ದಾರೆ. ಹೀಗಾಗಿ  ಕ್ವಾರಂಟೈನ್ ಅವಧಿಯನ್ನು ಕರ್ತವ್ಯದ ಅವಧಿ ಎಂದು ಪರಿಗಣಿಸಬೇಕು ಎಂದು ಡಿಜಿಪಿ ಸೂಚಿಸಿದ್ದಾರೆ.ಕೊರೋನಾ ಸೋಂಕಿತರ ಪ್ರಾಥಮಿಕ,  ದ್ವಿತೀಯ ಸಂಪರ್ಕ ಹೊಂದಿದವರು ಹಾಗೂ ತರಬೇತಿ ನಿಮಿತ್ತ  ಹೊರರಾಜ್ಯದಿಂದ ಪ್ರಯಾಣ ಬೆಳೆಸಿದ ಸಿಬ್ಬಂದಿಗೂ ಈ ನಿಯಮ ಅನ್ವಯವಾಗಲಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.