ಬೆಂಗಳೂರು, ಜೂ 9, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರು ರಾಜ್ಯಸಭೆಗೆ ಆಯ್ಕೆಯಾಗಬೇಕು ಎನ್ನುವುದು ರಾಷ್ಟ್ರಮಟ್ಟದ ನಾಯಕರ ಬಯಕೆಯಾಗಿತ್ತು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರ ಸ್ವಾಮಿ ಹೇಳಿದ್ದಾರೆ. ಇದೇ ದೃಷ್ಟಿಯಿಂದ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರು ಗೌಡರನ್ನು ರಾಜ್ಯಸಭೆಗೆ ಸ್ಪರ್ಧಿಸುವಂತೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಪಕ್ಷದ ಶಾಸಕರು ಮುಖಂಡರೊಡನೆ ಚರ್ಚಿಸಿ ಸ್ಪರ್ಧೆಗೆ ಅನುಮತಿ ನೀಡಿದ್ದಾರೆ ಎಂದರು.
ವಿಧಾನಸೌಧದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಗೌಡರನ್ನು ರಾಜ್ಯಸಭೆಗೆ ಆಯ್ಕೆ ಮಾಡುವ ಕುರಿತಂತೆ ತಾವು ಯಾವುದೇ ಪಕ್ಷದ ನಾಯಕರ ಜೊತೆ ಚರ್ಚೆ ಮಾಡಿಲ್ಲ. ದೇವೇಗೌಡರು ರಾಜ್ಯಸಭೆಗೆ ಸ್ಪರ್ಧಿಸಬೇಕೆಂಬುದು ರಾಷ್ಟ್ರಮಟ್ಟದಲ್ಲಿ ಚರ್ಚೆಯಾಗಿದೆ. ಇದಕ್ಕೆ ಕಾಂಗ್ರೆಸ್ ಪಕ್ಷ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದೆ. ಆದರೆ ಎರಡೂ ಪಕ್ಷಗಳ ನಾಯಕರ ನಡುವೆ ಯಾವುದೇ ರಾಜಕೀಯ ಹೊಂದಾಣಿಕೆಯಾಗಿಲ್ಲ. ಮೈತ್ರಿಯೂ ಏರ್ಪಟ್ಟಿಲ್ಲ ಎಂದರು.ದೇವೇಗೌಡರು ರಾಜ್ಯದ ಪರ ಧ್ವನಿ ಎತ್ತುತ್ತಾರೆ ಎಂದು ಅವರನ್ನು ರಾಷ್ಟ್ರರಾಜಕಾರಣಕ್ಕೆ ಕಳುಹಿಸಿಕೊಡಲಾಗುತ್ತಿದೆ. ದೇವೇಗೌಡರು ತಮ್ಮ ರಾಜಕೀಯ ಜೀವನದಲ್ಲಿ ಪ್ರಧಾನಿ ಹುದ್ದೆಯೂ ಸೇರಿದಂತೆ ಎಲ್ಲಾ ಸ್ಥಾನಮಾನ ನೋಡಿದವರು. ಅವರ ಗೆಲುವಿನ ಹಿಂದೆ ಹಲವು ಧ್ವನಿ ಗಳಿರುತ್ತವೆ. ಸೋಲಿನ ಹಿಂದೆ ಯಾವುದೇ ಧ್ವನಿ ಇರುವುದಿಲ್ಲ. ಯಾರು ಬೇಕಾದರೂ ದೇವೇಗೌಡರನ್ನು ಬೆಂಬಲಿಸಲಿಬಹುದು ಎಂದರು.